ಖದೀಮರ ಐಡಿಯಾಗಳಿಗಿಂತ ಈ 13 ವರ್ಷದ ಹುಡುಗನ ಐಡಿಯಾನೇ ಸೂಪರ್! ಹೌದು, ಉತ್ತರಪ್ರದೇಶದ ಬರೇಲಿಯಲ್ಲಿ ನಡೆದ ಈ ಸ್ಟೋರಿ ಈಗ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ.
ಬರೇಲಿಯ 13 ವರ್ಷದ ಬಾಲಕ ತನ್ಮಯ್ ಸಕ್ಸೇನಾ, ತನ್ನ ಸಮಯಪ್ರಜ್ಞೆಯಿಂದ ಪೋಷಕರು ಕಷ್ಟಪಟ್ಟು ಸಂಪಾದಿಸಿದ್ದ 6 ಲಕ್ಷ ರೂಪಾಯಿ ಹಣವನ್ನ ಸೈಬರ್ ಖದೀಮರ ಕೈ ಸೇರದಂತೆ ಕಾಪಾಡಿದ್ದಾನೆ. ಒಂದು ದಿನ ತನ್ಮಯ್ ಪೋಷಕರಿಗೆ ಅಪರಿಚಿತ ನಂಬರ್‌ನಿಂದ ಕರೆ ಬಂದಿತ್ತು. ಆ ಕಡೆ ಇದ್ದವರು ತಾವೊಬ್ಬ ಪೊಲೀಸ್ ಅಧಿಕಾರಿಗಳು ಎಂದು ಫೋಸ್ ಕೊಟ್ಟಿದ್ದರು. "ನಿಮ್ಮ ಮಗ ಯಾವುದೋ ದೊಡ್ಡ ಕ್ರೈಮ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ, ನಾವು ಅವನನ್ನ ಅರೆಸ್ಟ್ ಮಾಡಿದ್ದೇವೆ" ಎಂದು ಹೆದರಿಸಿದ್ದರು. ಅಷ್ಟೇ ಅಲ್ಲದೆ, ಇದನ್ನ 'ಡಿಜಿಟಲ್ ಅರೆಸ್ಟ್' ಅಂತ ಕರೆದು, ಮಗನನ್ನ ಬಿಡಿಸಬೇಕಾದರೆ ತಕ್ಷಣ 6 ಲಕ್ಷ ರೂಪಾಯಿ ಹಣ ಕೊಡಬೇಕು ಅಂತ ಡಿಮ್ಯಾಂಡ್ ಮಾಡಿದ್ದರು.
ಪಾಪ, ಮಗನ ಮೇಲಿನ ಪ್ರೀತಿ ಮತ್ತು ಪೊಲೀಸರ ಹೆಸರಲ್ಲಿ ಬಂದ ಬೆದರಿಕೆಯಿಂದ ತನ್ಮಯ್ ಪೋಷಕರು ಗಾಬರಿಯಾಗಿದ್ದರು. ಹಣ ಕೊಡಲು ರೆಡಿಯಾಗಿದ್ದರು. ಆದರೆ ಅಲ್ಲಿಗೆ ಎಂಟ್ರಿ ಕೊಟ್ಟವನೇ ತನ್ಮಯ್!
ತನ್ಮಯ್ ಮಾಡಿದ್ದೇನು?
ತನ್ಮಯ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಈ 'ಡಿಜಿಟಲ್ ಅರೆಸ್ಟ್' ವಂಚನೆಗಳ ಬಗ್ಗೆ ಮಾಹಿತಿ ಇತ್ತು. ಪೊಲೀಸರು ಎಂದೂ ಫೋನ್ ಮಾಡಿ ಹಣ ಕೇಳಲ್ಲ ಅನ್ನೋದು ಅವನಿಗೆ ಗೊತ್ತಿತ್ತು. ತಕ್ಷಣ ಪೋಷಕರ ಕೈಯಲ್ಲಿದ್ದ ಫೋನ್ ಕಿತ್ತುಕೊಂಡು ಕಾಲ್ ಕಟ್ ಮಾಡಿದ. ಪೋಷಕರಿಗೆ ಸಮಾಧಾನ ಹೇಳಿ, ಇದೆಲ್ಲಾ ಕೇವಲ ಮೋಸ ಅಂತ ಮನವರಿಕೆ ಮಾಡಿಕೊಟ್ಟ. ಇದರಿಂದ 6 ಲಕ್ಷ ರೂಪಾಯಿ ಹಣ ಸೈಬರ್ ಖದೀಮರ ಪಾಲಾಗುವುದು ತಪ್ಪಿತು.
ಪೊಲೀಸರಿಂದ ಸನ್ಮಾನ:
ಈ ವಿಷಯ ತಿಳಿದ ಬರೇಲಿ ಪೊಲೀಸರು ತನ್ಮಯ್‌ನ ಧೈರ್ಯ ಮತ್ತು ಬುದ್ಧಿವಂತಿಕೆಗೆ ಫಿದಾ ಆಗಿದ್ದಾರೆ. ಪೊಲೀಸ್ ಸ್ಟೇಷನ್‌ಗೆ ಕರೆಸಿ ಅವನಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಿದ್ದಾರೆ. "ದೊಡ್ಡವರೇ ಮೋಸ ಹೋಗುತ್ತಿರುವ ಈ ಕಾಲದಲ್ಲಿ, ಒಬ್ಬ ಪುಟ್ಟ ಬಾಲಕ ಇಷ್ಟು ಜಾಗರೂಕತೆಯಿಂದ ಇರುವುದು ನಿಜಕ್ಕೂ ಹೆಮ್ಮೆಯ ವಿಷಯ" ಅಂತ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೀವು ಗಮನಿಸಬೇಕಾದ ವಿಷಯಗಳು:
ಡಿಜಿಟಲ್ ಅರೆಸ್ಟ್ ಅಂದ್ರೆ ಏನು?: ಪೊಲೀಸರು ಅಥವಾ ಸಿಬಿಐ ಅಧಿಕಾರಿಗಳ ಹೆಸರಲ್ಲಿ ವಿಡಿಯೋ ಕಾಲ್ ಮಾಡಿ ನಿಮ್ಮನ್ನು ಮನೆಯಲ್ಲೇ ಕೂಡಿ ಹಾಕುವುದು ಅಥವಾ ಹೆದರಿಸಿ ಹಣ ಪಡೆಯುವುದು. ನೆನಪಿಡಿ, ಕಾನೂನಿನಲ್ಲಿ ಇಂತಹ ಯಾವುದೇ 'ಡಿಜಿಟಲ್ ಅರೆಸ್ಟ್' ಇಲ್ಲ.
ಹೆದರಬೇಡಿ: ಯಾರೇ ಬೆದರಿಕೆ ಹಾಕಿದರೂ ಗಾಬರಿಯಾಗಬೇಡಿ. ತಕ್ಷಣ ನಿಮ್ಮ ಹತ್ತಿರದ ಪೊಲೀಸ್ ಸ್ಟೇಷನ್‌ಗೆ ಅಥವಾ 1930 ಗೆ ಕರೆ ಮಾಡಿ ದೂರು ನೀಡಿ.
ಅಲರ್ಟ್ ಆಗಿರಿ: ತನ್ಮಯ್‌ನಂತೆ ನೀವು ಕೂಡ ಸೋಶಿಯಲ್ ಮೀಡಿಯಾದಲ್ಲಿ ಇಂತಹ ವಂಚನೆಗಳ ಬಗ್ಗೆ ಅಪ್‌ಡೇಟ್ ಆಗಿರಿ.