Apr 2, 2026 Languages : ಕನ್ನಡ | English

ಮೈ ಜುಂ ಎನ್ನುವ ಅಪಘಾತ: ಕಾರು ಡಿಕ್ಕಿಯಾಗಿ ಗಾಳಿಯಲ್ಲಿ ಹಾರಿ ಬಿದ್ದ ಮಹಿಳೆ - ಬೆಚ್ಚಿಬೀಳಿಸುತ್ತೆ ಸಿಸಿಟಿವಿ ದೃಶ್ಯ!!

ರಸ್ತೆಯಲ್ಲಿ ನಡೆಯುವಾಗ ನಾವು ಎಷ್ಟು ಜಾಗರೂಕರಾಗಿದ್ದರೂ ಸಾಲದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಇಂದು ಅತ್ಯಂತ ಭಯಾನಕ ರಸ್ತೆ ಅಪಘಾತವೊಂದು ನಡೆದಿದೆ. ವೇಗವಾಗಿ ಬಂದ ಕಾರೊಂದು ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ರಭಸಕ್ಕೆ ಆಕೆ ಗಾಳಿಯಲ್ಲಿ ಎಗಿರಿ ಬಿದ್ದಿರುವ ದೃಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನರನ್ನು ಬೆಚ್ಚಿಬೀಳಿಸಿದೆ.

ಬಂಟ್ವಾಳದಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಗಂಭೀರ ಗಾಯ!! | Photo Credit: https://x.com/pulsenewsbreak
ಬಂಟ್ವಾಳದಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಗಂಭೀರ ಗಾಯ!! | Photo Credit: https://x.com/pulsenewsbreak

ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ನಿವಾಸಿಯಾದ ಭಾರತಿ (48) ಎಂಬುವವರು ಇಂದು ಬೆಳಿಗ್ಗೆ ಯುವತಿಯೊಬ್ಬರ ಜೊತೆ ರಸ್ತೆ ದಾಟುತ್ತಿದ್ದರು. ಇಬ್ಬರೂ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲು ಹೆಜ್ಜೆ ಹಾಕುತ್ತಿದ್ದಾಗಲೇ ಕಾಲರೂಪಿಯಾಗಿ ವೇಗವಾಗಿ ಬಂದ ಕಾರೊಂದು ಇವರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಕಾರು ಡಿಕ್ಕಿಯಾಗುತ್ತಿದ್ದಂತೆ ಭಾರತಿ ಅವರು ಸುಮಾರು ಹತ್ತು ಅಡಿ ಎತ್ತರಕ್ಕೆ ಗಾಳಿಯಲ್ಲಿ ಹಾರಿ ಕೆಲವು ಅಡಿಗಳ ದೂರ ಹೋಗಿ ಬಿದ್ದಿದ್ದಾರೆ. ಅವರ ಜೊತೆಗಿದ್ದ ಯುವತಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರತಿ ಅವರಿಗೆ ತಲೆ ಮತ್ತು ಮೈಕೈಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಈ ಇಡೀ ಘಟನೆಯು ಹತ್ತಿರದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ವಿಡಿಯೋ ನೋಡಿದವರು "ಅಯ್ಯೋ.. ಎಂತಹ ಘೋರ ಅನ್ಯಾಯ" ಎಂದು ಮರುಗುತ್ತಿದ್ದಾರೆ. ಆ ಕಾರು ಚಾಲಕ ಅಷ್ಟು ವೇಗವಾಗಿ ಬರಬಾರದಿತ್ತು ಅಥವಾ ರಸ್ತೆ ದಾಟುವವರನ್ನು ನೋಡಿ ಬ್ರೇಕ್ ಹಾಕಬೇಕಿತ್ತು ಎಂಬ ಆಕ್ರೋಶ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಓಡಿ ಬಂದು ಗಾಯಾಳು ಮಹಿಳೆಗೆ ನೆರವಾಗಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಾರು ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಪರಾರಿಯಾಗಲು ಯತ್ನಿಸಿದ ಚಾಲಕನನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹೆದ್ದಾರಿ ಅಥವಾ ವಾಹನಗಳ ಸಂಚಾರ ಹೆಚ್ಚಿರುವ ರಸ್ತೆಗಳನ್ನು ದಾಟುವಾಗ ಎರಡೂ ಬದಿಗಳನ್ನು ಸರಿಯಾಗಿ ನೋಡಿ, ವಾಹನಗಳು ದೂರ ಇರುವಾಗಲೇ ದಾಟುವುದು ಕ್ಷೇಮ.  ಚಾಲಕರು ಗ್ರಾಮದ ಒಳಗೆ ಅಥವಾ ತಿರುವುಗಳಿರುವ ರಸ್ತೆಯಲ್ಲಿ ಚಲಿಸುವಾಗ ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ನಿಮ್ಮ ಒಂದು ಸೆಕೆಂಡ್‌ನ ಅವಸರ ಇನ್ನೊಬ್ಬರ ಜೀವನವನ್ನೇ ಬಲಿ ಪಡೆಯಬಹುದು. ಇಂತಹ ಘಟನೆಗಳಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದು ತಿಳಿಯಲು ಸಿಸಿಟಿವಿ ದೃಶ್ಯಗಳು ಮಹತ್ವದ ಸಾಕ್ಷಿಯಾಗುತ್ತವೆ.