Apr 6, 2026 Languages : ಕನ್ನಡ | English

ತಡರಾತ್ರಿ 3 ಗಂಟೆಗೆ ಕಾಡುಗೋಡಿನಲ್ಲಿ ಒಬ್ಬಂಟಿ ಯುವತಿ - ಬೆಂಗಳೂರಿನಲ್ಲಿ ನಡೆದ ದೃಶ್ಯ ವೈರಲ್!!

ಬೆಂಗಳೂರು ಅಂದ ತಕ್ಷಣ ನಮಗೆ ನೆನಪಾಗೋದು ಟ್ರಾಫಿಕ್, ಐಟಿ ಕಂಪನಿಗಳು ಅಥವಾ ಸದಾ ಗದ್ದಲದಿಂದ ಕೂಡಿರೋ ರಸ್ತೆಗಳು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಇದೆಲ್ಲದರ ನಡುವೆ ನಮ್ಮ ಬೆಂಗಳೂರು ಇಂದಿಗೂ 'ಹೃದಯವಂತರ ನಾಡು' ಅನ್ನೋದನ್ನ ಒಬ್ಬ ಯುವತಿಯ ಅನುಭವ ಸಾಬೀತುಪಡಿಸಿದೆ. ತಡರಾತ್ರಿ ಸಂಕಷ್ಟದಲ್ಲಿದ್ದ ಯುವತಿಗೆ ಇಬ್ಬರು ಅಪರಿಚಿತರು ತೋರಿದ ಕಾಳಜಿಯ ಕಥೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಬೆಂಗಳೂರು ರಾಪಿಡೋ ಚಾಲಕನ ಮಾತು ಕೇಳಿ ನೆಟ್ಟಿಗರು ಫಿದಾ
ಬೆಂಗಳೂರು ರಾಪಿಡೋ ಚಾಲಕನ ಮಾತು ಕೇಳಿ ನೆಟ್ಟಿಗರು ಫಿದಾ

ಐಶ್ವರ್ಯ ಕಲ್ಪಾರ್ಜುನ್ ಅನ್ನೋ ಯುವತಿ ಏಪ್ರಿಲ್ 6ರಂದು ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮಗಾದ ಒಂದು ಮನಮುಟ್ಟುವ ಅನುಭವವನ್ನು ವಿವರಿಸಿದ್ದಾರೆ. ವಿಷಯ ಏನಪ್ಪಾ ಅಂದ್ರೆ, ಐಶ್ವರ್ಯ ಅವರು ತಡರಾತ್ರಿ ಬೆಂಗಳೂರು ಏರ್‌ಪೋರ್ಟ್‌ನಿಂದ ಕಾಡುಗೋಡಿಗೆ ಬಂದು ಇಳಿದಿದ್ದಾರೆ. ಆಗ ಸಮಯ ರಾತ್ರಿ ಸರಿಯಾಗಿ 3 ಗಂಟೆ! ಅವರ ಮನೆ ಕಾಡುಗೋಡಿ ಬಸ್ ನಿಲ್ದಾಣದಿಂದ ಸುಮಾರು 3 ಕಿಲೋಮೀಟರ್ ದೂರವಿತ್ತು. ಅಷ್ಟು ಹೊತ್ತಿನಲ್ಲಿ ಯಾವುದೇ ಕ್ಯಾಬ್ ಅಥವಾ ಆಟೋ ಬುಕ್ ಆಗುತ್ತಿರಲಿಲ್ಲ. ಒಬ್ಬಂಟಿ ಹೆಣ್ಣುಮಗಳು ಅಷ್ಟು ರಾತ್ರಿಯಲ್ಲಿ ಏನು ಮಾಡಬೇಕು ಅಂತ ತಿಳಿಯದೆ ಕಂಗಾಲಾಗಿದ್ದಾಗ ಅವರ ಸಹಾಯಕ್ಕೆ ಬಂದಿದ್ದೇ ಆ 'ಅಪರಿಚಿತ ಹಿರೋಗಳು'.

ಐಶ್ವರ್ಯ ಅವರು ಟ್ಯಾಕ್ಸಿಗಾಗಿ ಕಾಯುತ್ತಾ ನಿಂತಿದ್ದಾಗ, ಅಲ್ಲಿದ್ದ ಒಬ್ಬ ಬಸ್ ಕಂಡಕ್ಟರ್ ಅವರ ಬಳಿ ಬಂದು, "ನಿಮಗೆ ಟ್ಯಾಕ್ಸಿ ಸಿಗುವವರೆಗೂ ನಾನು ನಿಮ್ಮ ಜೊತೆಯಲ್ಲೇ ಇರುತ್ತೇನೆ, ಧೈರ್ಯವಾಗಿರಿ" ಅಂತ ಹೇಳಿ ಅಲ್ಲಿಯೇ ನಿಂತಿದ್ದಾರೆ. ಒಬ್ಬ ಅಪರಿಚಿತ ವ್ಯಕ್ತಿಯಿಂದ ಇಂತಹ ಮಾತು ಕೇಳಿದಾಗ ಆ ಯುವತಿಗೆ ಎಷ್ಟು ಧೈರ್ಯ ಬಂದಿರಬೇಡ ನೀವೇ ಯೋಚಿಸಿ!

ಅಷ್ಟರಲ್ಲೇ ಅಲ್ಲಿಗೆ ಒಬ್ಬ ರಾಪಿಡೋ ಡ್ರೈವರ್ ಬಂದಿದ್ದಾರೆ. ಐಶ್ವರ್ಯ ಅವರು ಅವರ ಬಳಿ ಮನೆಗೆ ಬಿಡುವಂತೆ ಕೇಳಿ, "ಎಷ್ಟು ಹಣ ಆಗುತ್ತೆ?" ಅಂತ ವಿಚಾರಿಸಿದ್ದಾರೆ. ಅದಕ್ಕೆ ಆ ಡ್ರೈವರ್ ಕೊಟ್ಟ ಉತ್ತರ ನಿಜಕ್ಕೂ ಗ್ರೇಟ್. "ಅದೆಲ್ಲಾ ಪರವಾಗಿಲ್ಲ ಮೇಡಂ, ಮೊದಲು ನೀವು ಮ್ಯಾಪ್‌ನಲ್ಲಿ ಲೊಕೇಶನ್ ತೋರಿಸಿ, ತುಂಬಾ ಲೇಟ್ ಆಗಿದೆ" ಅಂತ ಹೇಳಿ ಅವರನ್ನ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

ಮನೆಗೆ ತಲುಪಿದ ಮೇಲೆ ಐಶ್ವರ್ಯ ಅವರು ಹಣ ಕೊಡಲು ಹೋದಾಗ ಆ ಡ್ರೈವರ್ ಹೇಳಿದ್ದು ಕೇಳಿ ಎಲ್ಲರೂ ಫಿದಾ ಆಗಿದ್ದಾರೆ. "ಸಮಯ ತುಂಬಾ ಲೇಟ್ ಆಗಿದೆ, ಒಬ್ಬ ಮಹಿಳೆಯಾಗಿ ನಿಮ್ಮನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದು ನನ್ನ ಜವಾಬ್ದಾರಿಯಾಗಿತ್ತು. ಇಷ್ಟೇ ಹಣ ಬೇಕು ಅಂತ ನಾನು ಕೇಳಲ್ಲ, ನಿಮಗೆ ಎಷ್ಟು ಅನಿಸುತ್ತೋ ಅಷ್ಟನ್ನು ಕೊಡಿ" ಅಂದಿದ್ದಾರಂತೆ. ಈ ಮಾತು ಕೇಳಿ ಐಶ್ವರ್ಯ ಅವರಿಗೆ ಬೆಂಗಳೂರಿನ ಜನರ ಮೇಲೆ ಇದ್ದ ಗೌರವ ನೂರು ಪಟ್ಟು ಹೆಚ್ಚಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರ

'Karnatakaportfolio' ಅನ್ನೋ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ ಸಾವಿರಾರು ವೀಕ್ಷಣೆ ಕಂಡಿದೆ. ನೆಟ್ಟಿಗರು ಈ ಘಟನೆಯನ್ನು ನೋಡಿ ಸಖತ್ ಖುಷಿಯಾಗಿದ್ದಾರೆ.

ಒಬ್ಬರು "ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ, ಅದರಲ್ಲೂ ನಮ್ಮ ಬೆಂಗಳೂರು ಹೆಣ್ಣುಮಕ್ಕಳಿಗೆ ಎಷ್ಟು ಸೇಫ್ ಅನ್ನೋದಕ್ಕೆ ಇದೇ ಸಾಕ್ಷಿ" ಅಂತ ಕಾಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು "ಬೆಂಗಳೂರಿನಲ್ಲಿ ಇಂತಹ ಹೃದಯವಂತರು ಸಾವಿರಾರು ಜನರಿದ್ದಾರೆ, ಅವರಿಗೆ ನಮ್ಮದೊಂದು ಸಲ್ಯೂಟ್" ಅಂದಿದ್ದಾರೆ.

ನೆಗೆಟಿವ್ ಸುದ್ದಿಗಳೇ ತುಂಬಿರೋ ಇಂದಿನ ಕಾಲದಲ್ಲಿ, ಇಂತಹ ಪಾಸಿಟಿವ್ ಘಟನೆಗಳು ಮನುಷ್ಯತ್ವದ ಮೇಲೆ ನಂಬಿಕೆ ಹುಟ್ಟಿಸುತ್ತವೆ. ರಾತ್ರಿ ಹೊತ್ತು ಒಬ್ಬಂಟಿ ಹೆಣ್ಣುಮಗಳಿಗೆ ನೆರವಾದ ಆ ಕಂಡಕ್ಟರ್ ಮತ್ತು ರಾಪಿಡೋ ಡ್ರೈವರ್ ನಿಜವಾದ ಹೀರೋಗಳು. ಈ ಸುದ್ದಿ ಕೇಳಿದ ಮೇಲೆ ನಿಮಗೂ 'ನಮ್ಮ ಬೆಂಗಳೂರು' ಬಗ್ಗೆ ಹೆಮ್ಮೆ ಅನಿಸ್ತಿದೆ ಅಲ್ವಾ?