May 7, 2026 Languages : ಕನ್ನಡ | English

ಬೆಂಗಳೂರಿನಲ್ಲಿ ನೇಪಾಳಿ ಯುವಕರ ಅಟ್ಟಹಾಸ - ಬರ್ತಡೇ ನೆಪದಲ್ಲಿ ಸ್ನೇಹಿತನ ಮೇಲೆಯೇ ಮಾರಣಾಂತಿಕ ಹಲ್ಲೆ!!

ಬೆಂಗಳೂರಿನ ಸಿಲಿಕಾನ್ ಸಿಟಿಯಲ್ಲಿ ಸ್ನೇಹಕ್ಕೆ ದ್ರೋಹ ಬಗೆದ ನೇಪಾಳಿ ಯುವಕರ ಗ್ಯಾಂಗ್, ಯುವಕನೊಬ್ಬನ ಮೇಲೆ ಪಾಶವೀಯ ದಾಳಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ನಂಬಿಸಿ ಕರೆದೊಯ್ದು ಹಲ್ಲೆ ಮಾಡಿದ್ದಲ್ಲದೆ, ಗಾಯಾಳು ರಕ್ತದ ಮಡುವಿನಲ್ಲಿದ್ದರೂ ಬಿಡದೆ ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ವಿಕೃತ ದರ್ಪ ಪ್ರದರ್ಶಿಸಿದ್ದಾರೆ.

ವಿಡಿಯೋ ಮಾಡಿ ಬೆದರಿಕೆ ಹಾಕಿದ ಗ್ಯಾಂಗ್;
ವಿಡಿಯೋ ಮಾಡಿ ಬೆದರಿಕೆ ಹಾಕಿದ ಗ್ಯಾಂಗ್;

ಬೆಂಗಳೂರಿನ ಕೆ.ಆರ್. ಪುರಂ ವ್ಯಾಪ್ತಿಯ ಅಯ್ಯಪ್ಪ ನಗರದಲ್ಲಿ ಕಳೆದ ಮಂಗಳವಾರ ಸಂಜೆ 7.30ಕ್ಕೆ ಈ ಅಮಾನವೀಯ ಕೃತ್ಯ ಸಂಭವಿಸಿದೆ. ಪರಾಸ್ ಎಂಬ ಯುವಕನನ್ನು ಆರೋಪಿಗಳಾದ ಪ್ರದೀಪ್, ಸಾಗರ್ ಮತ್ತು ಅವರ ತಂಡ ಕೇಕ್ ಕತ್ತರಿಸಿ ಪಾರ್ಟಿ ಮಾಡುವ ಆಮಿಷವೊಡ್ಡಿ ವಾಲಿವಾಲ್ ಮೈದಾನಕ್ಕೆ ಕರೆದೊಯ್ದು ಈ ಹಲ್ಲೆ ನಡೆಸಿದ್ದಾರೆ.

ಸ್ನೇಹಿತರ ಮಾತು ನಂಬಿ ಹೋದ ಪರಾಸ್‌ಗೆ ಅಲ್ಲಿ ಕಾದಿದ್ದು ಸಾವು ಸನಿಹದ ಅನುಭವ. ಪಾರ್ಟಿ ಮಾಡೋಣ ಎಂದವರು ಇದ್ದಕ್ಕಿದ್ದಂತೆ ಮಾರಕಾಸ್ತ್ರಗಳನ್ನ ಹಿಡಿದು ದಾಳಿ ನಡೆಸಿದ್ದಾರೆ.

ಕಿರಾತಕರ ಗುಂಪು ಪರಾಸ್ ಮೇಲೆ ಅರ್ಧ ಗಂಟೆ ಕಾಲ ಮಾರಕಾಸ್ತ್ರಗಳಿಂದ ಅಟ್ಟಹಾಸ ಮೆರೆದಿದೆ. ಹೆಲ್ಮೆಟ್ ಮತ್ತು ಚಾಕುಗಳಿಂದ ಹಲ್ಲೆಗೊಳಗಾದ ಯುವಕನ ಮೈಯೆಲ್ಲಾ ರಕ್ತಮಯವಾಗಿದ್ದರೂ, ಹಲ್ಲೆಕೋರರು ಮಾತ್ರ ಅಮಾನವೀಯವಾಗಿ ಚಿತ್ರಹಿಂಸೆಯನ್ನು ಮುಂದುವರಿಸಿದ್ದಾರೆ.

ಹ*ಲ್ಲೆ ಮಾಡುವಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪರಾಸ್‌ ತನ್ನ ಕಾಲು ಹಿಡಿದುಕೊಳ್ಳುವಂತೆ ದರ್ಪ ಮೆರೆದಿದ್ದಾರೆ. ಈ ಇಡೀ ಭೀಕರ ದೃಶ್ಯವನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಕೊ*ಲೆ ಮಾಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ.

ಹ*ಲ್ಲೆಗೊಳಗಾದ ಯುವಕ ಪರಾಸ್ ಹೇಗೋ ಚೇತರಿಸಿಕೊಂಡು ಕೆ.ಆರ್. ಪುರಂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಪ್ರದೀಪ್ ಮತ್ತು ಸಾಗರ್ ಎಂಬ ಯುವಕರ ಗುಂಪು ತನ್ನ ಮೇಲೆ ಹ*ಲ್ಲೆ ಮಾಡಿದೆ ಎಂದು ದೂರು ನೀಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪಾರ್ಟಿ, ಬರ್ತಡೇ ಸಡಗರದ ನೆಪದಲ್ಲಿ ಇಂತಹ ಕ್ರಿಮಿನಲ್ ಕೃತ್ಯಗಳು ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ನಂಬಿ ಹೋದ ಸ್ನೇಹಿತನ ಮೇಲೆಯೇ ಇಷ್ಟೊಂದು ಕ್ರೂರವಾಗಿ ಹ*ಲ್ಲೆ ಮಾಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪೊಲೀಸರು ಕೂಡಲೇ ಈ ಗ್ಯಾಂಗ್ ಅನ್ನು ಹೆಡೆಮುರಿ ಕಟ್ಟಿ ಕಠಿಣ ಶಿಕ್ಷೆ ವಿಧಿಸಬೇಕಿದೆ.. 

Latest News