ಸಿಲಿಕಾನ್ ಸಿಟಿ ಬೆಂಗಳೂರಿನ ನಗರಾಭಿವೃದ್ಧಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಾಗೂ ಅಪರೂಪದ ತೆರವು ಕಾರ್ಯಾಚರಣೆಯೊಂದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನಗರದ ಪ್ರಮುಖ ಭಾಗವಾದ ಕೂಡ್ಲು ಸಮೀಪ ನಿರ್ಮಾಣಗೊಂಡಿದ್ದ 18 ಅಂತಸ್ತಿನ ಬೃಹತ್ ಅಪಾರ್ಟ್‌ಮೆಂಟ್ ಕಟ್ಟಡವನ್ನು ಉದ್ಘಾಟನೆಗೂ ಮುನ್ನವೇ ನೆಲಸಮಗೊಳಿಸಲು ನಿರ್ಧರಿಸಲಾಗಿದೆ.
ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಬಹುಮಹಡಿ ಕಟ್ಟಡವು ಅವೈಜ್ಞಾನಿಕ ನಿರ್ಮಾಣ ಹಾಗೂ ಗಂಭೀರವಾದ ರಚನಾತ್ಮಕ ದೋಷಗಳಿಂದಾಗಿ (Structural Damage) ಅಪಾಯದ ಅಂಚಿನಲ್ಲಿದ್ದು, ಭವಿಷ್ಯದಲ್ಲಿ ಸಂಭವಿಸಬಹುದಾದ ಭೀಕರ ದುರಂತವನ್ನು ತಪ್ಪಿಸುವ ಉದ್ದೇಶದಿಂದ ಈ ಕಠಿಣ ನಿರ್ಧಾರಕ್ಕೆ ಬರಲಾಗಿದೆ.
ಈ ಬೃಹತ್ ಯೋಜನೆಯನ್ನು ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆಯಾದ SNN ರಾಜ್ ಕಾರ್ಪ್ ನಿರ್ಮಿಸಿತ್ತು. ಕಟ್ಟಡದ ನಿರ್ಮಾಣ ಕಾರ್ಯಗಳು ಸಂಪೂರ್ಣಗೊಂಡು, ಗ್ರಾಹಕರಿಗೆ ಹಸ್ತಾಂತರಿಸುವ ಮತ್ತು ಅಧಿಕೃತವಾಗಿ ಉದ್ಘಾಟನೆ ಮಾಡುವ ಹಂತದಲ್ಲಿದ್ದಾಗ ಕಟ್ಟಡದಲ್ಲಿ ತಾಂತ್ರಿಕ ದೋಷಗಳು ಕಂಡುಬಂದವು. ಕಟ್ಟಡವು ನಿಯಮಿತ ಸಮತೋಲನವನ್ನು ಕಳೆದುಕೊಂಡು ಒಂದು ಬದಿಗೆ ವಾಲುತ್ತಿರುವುದು (Tilt) ಪರಿಶೀಲನೆ ವೇಳೆ ಸ್ಪಷ್ಟವಾಯಿತು.
ಕಟ್ಟಡದ ತಳಪಾಯದಲ್ಲಿ (Foundation) ಉಂಟಾದ ಸಮಸ್ಯೆಯಿಂದಾಗಿ ಇಡೀ ಕಟ್ಟಡದ ಸ್ಥಿರತೆಯೇ ಪ್ರಶ್ನಾರ್ಹವಾಯಿತು. ಯಾವುದೇ ಕ್ಷಣದಲ್ಲಿ ಅಪಾಯ ತಂದೊಡ್ಡಬಹುದಾದ ಈ ಸನ್ನಿವೇಶವನ್ನು ಗಮನಿಸಿದ ಜಿಬಿಎ ಅಧಿಕಾರಿಗಳು, ಸಾರ್ವಜನಿಕರ ಜೀವ ಮತ್ತು ಆಸ್ತಿಪಾಸ್ತಿಯ ಸುರಕ್ಷತೆಯ ಹಿತದೃಷ್ಟಿಯಿಂದ ಕಟ್ಟಡವನ್ನು ಸಂಪೂರ್ಣವಾಗಿ ತೆರವುಗೊಳಿಸುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಈ ಪ್ರಮುಖ ವಿಷಯಕ್ಕೆ ಸಂಬಂಧಿಸಿದಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಮಹತ್ವದ ಸಭೆಯೊಂದು ನಡೆಯಿತು. ಈ ಸಭೆಯಲ್ಲಿ SNN ರಾಜ್ ಕಾರ್ಪ್ ಸಂಸ್ಥೆಯ ಮಾಲೀಕರು, ಉನ್ನತ ಪೊಲೀಸ್ ಅಧಿಕಾರಿಗಳು, ದಕ್ಷಿಣ ನಗರ ಪಾಲಿಕೆಯ ಮುಖ್ಯ ಎಂಜಿನಿಯರ್‌ಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಮತ್ತು ಯೋಜನಾ ತಜ್ಞರು ಭಾಗವಹಿಸಿದ್ದರು. ಕಟ್ಟಡದ ಪ್ರಸ್ತುತ ಪರಿಸ್ಥಿತಿ ಮತ್ತು ಸುರಕ್ಷತೆಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ ಬಳಿಕ ಜಿಬಿಎ ಆಯುಕ್ತರು ಕಟ್ಟಡವನ್ನು ಕೂಡಲೇ ತೆರವುಗೊಳಿಸುವಂತೆ ಸ್ಪಷ್ಟ ಸೂಚನೆ ನೀಡಿದರು.
ಸಂಸ್ಥೆಯ ಮಾಲೀಕರು ಕೂಡ ಈ ನಿರ್ಧಾರಕ್ಕೆ ಸಮ್ಮತಿಸಿದ್ದು, ನಿಯಮಾನುಸಾರ ಕಟ್ಟಡವನ್ನು ಸುರಕ್ಷಿತವಾಗಿ ನೆಲಸಮ ಮಾಡಲು ಒಪ್ಪಿಕೊಂಡಿದ್ದಾರೆ. ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಬಹುಮಹಡಿ ಕಟ್ಟಡವು ಅವೈಜ್ಞಾನಿಕ ನಿರ್ಮಾಣ ಹಾಗೂ ಗಂಭೀರವಾದ ರಚನಾತ್ಮಕ ದೋಷಗಳಿಂದಾಗಿ (Structural Damage) ಅಪಾಯದ ಅಂಚಿನಲ್ಲಿದ್ದು, ಭವಿಷ್ಯದಲ್ಲಿ ಸಂಭವಿಸಬಹುದಾದ ಭೀಕರ ದುರಂತವನ್ನು ತಪ್ಪಿಸುವ ಉದ್ದೇಶದಿಂದ ಈ ಕಠಿಣ ನಿರ್ಧಾರಕ್ಕೆ ಬರಲಾಗಿದೆ.
ಇನ್ನು ಈ ಬಿಲ್ಡಿಂಗ್ ಡೆಮಾಲಿಷನ್ ಕಾರ್ಯಾಚರಣೆಗೆ ತಗುಲುವ ಸಂಪೂರ್ಣ ಖರ್ಚು-ವೆಚ್ಚಗಳನ್ನು ತಾವೇ ಭರಿಸುವುದಾಗಿ SNN ರಾಜ್ ಕಾರ್ಪ್ ಸಂಸ್ಥೆಯು ಅಧಿಕೃತವಾಗಿ ಘೋಷಿಸಿದೆ. ಸಂಸ್ಥೆಯು ನ್ಯೂಸ್ 18 ಗೆ ನೀಡಿದ ಸ್ಪಷ್ಟನೆಯಲ್ಲಿ, "ಕಟ್ಟಡ ನಿರ್ಮಾಣದ ಆರಂಭಿಕ ಹಂತದಲ್ಲಿ ನಡೆಸಲಾದ ಮಣ್ಣಿನ ಪರೀಕ್ಷೆ (Soil Testing) ವೇಳೆ ಜರುಗಿದ ತಾಂತ್ರಿಕ ಪ್ರಮಾದವೇ ಈ ಸಮಸ್ಯೆಗೆ ಮೂಲ ಕಾರಣ. ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಕಟ್ಟಡದ ವಾಲುವಿಕೆ ಹಾಗೂ ತಳಪಾಯದ ದೋಷ ನಮ್ಮ ಗಮನಕ್ಕೆ ಬಂದ ತಕ್ಷಣವೇ, ನಾವೇ ಸ್ವಯಂಪ್ರೇರಿತರಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ರೇರಾ (RERA) ಸಂಸ್ಥೆಗಳಿಗೆ ಮಾಹಿತಿ ನೀಡಿದೆವು" ಎಂದು ತಿಳಿಸಿದೆ.
ಅದೃಷ್ಟವಶಾತ್, ಈ ಕಟ್ಟಡದಲ್ಲಿ ಇನ್ನೂ ಯಾವುದೇ ನಿವಾಸಿಗಳು ವಾಸಿಸಲು ಪ್ರಾರಂಭಿಸದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ. ಸ್ಥಳೀಯ ಆಡಳಿತ ಮತ್ತು ತಜ್ಞರ ಸಹಯೋಗದೊಂದಿಗೆ ಅತ್ಯಂತ ವೈಜ್ಞಾನಿಕ ಹಾಗೂ ಸುಧಾರಿತ ತಂತ್ರಜ್ಞಾನವನ್ನು ಬಳಸಿ ಕಟ್ಟಡವನ್ನು ತೆರವುಗೊಳಿಸಲು ಯೋಜಿಸಲಾಗಿದೆ. ಸುತ್ತಮುತ್ತಲಿನ ನಿವಾಸಿಗಳಿಗೆ, ಆಸ್ತಿಗಳಿಗೆ ಹಾಗೂ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಕಟ್ಟಡವನ್ನು ಹಂತ-ಹಂತವಾಗಿ ನೆಲಸಮಗೊಳಿಸಲು ಗುತ್ತಿಗೆದಾರರು ಕಾರ್ಯಾಚರಣೆಗೆ ಇಳಿಯಲಿದ್ದಾರೆ. ಬೆಂಗಳೂರಿನಲ್ಲಿ ಇಷ್ಟೊಂದು ಎತ್ತರದ ಮತ್ತು ಇಷ್ಟೊಂದು ದೊಡ್ಡ ಮೊತ್ತದ ಕಟ್ಟಡವೊಂದನ್ನು ಉದ್ಘಾಟನೆಗೆ ಮುನ್ನವೇ ಡೆಮಾಲಿಷನ್ ಮಾಡುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಇದು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ನಗರದ ಪ್ರಮುಖ ಭಾಗವಾದ ಕೂಡ್ಲು ಸಮೀಪ ನಿರ್ಮಾಣಗೊಂಡಿದ್ದ 18 ಅಂತಸ್ತಿನ ಬೃಹತ್ ಅಪಾರ್ಟ್‌ಮೆಂಟ್ ಕಟ್ಟಡವನ್ನು ಉದ್ಘಾಟನೆಗೂ ಮುನ್ನವೇ ನೆಲಸಮಗೊಳಿಸಲು ನಿರ್ಧರಿಸಲಾಗಿದೆ.