ಪ್ರಕೃತಿಯ ಮಡಿಲು, ವನ್ಯಜೀವಿಗಳ ನೆಲೆವೀಡು ಬಂಡೀಪುರ ಮತ್ತು ನಾಗರಹೊಳೆ ಕಾಡುಗಳು ಈಗ ಪ್ರವಾಸಿಗರಿಲ್ಲದೆ ಮೌನಕ್ಕೆ ಶರಣಾಗಿವೆ. ಕಾಡಂಚಿನ ಜನವಸತಿ ಪ್ರದೇಶಗಳಲ್ಲಿ ಹುಲಿಗಳ ಉಪಟಳ ಹೆಚ್ಚಾದ ಕಾರಣ, ಜನರ ಪ್ರಾಣ ರಕ್ಷಣೆಯನ್ನೇ ಮೊದಲ ಆದ್ಯತೆಯನ್ನಾಗಿ ಪರಿಗಣಿಸಿ ಸಫಾರಿಯನ್ನು ಸ್ಥಗಿತಗೊಳಿಸಲಾಗಿದೆ. ಈ ನಿರ್ಧಾರವು ಜನರ ಸುರಕ್ಷತೆಗೆ ರಕ್ಷಾಕವಚದಂತಿದ್ದರೂ, ಅರಣ್ಯ ಇಲಾಖೆಯ ಆದಾಯಕ್ಕೆ ಮಾತ್ರ ಭಾರಿ ಕೊಡಲಿ ಪೆಟ್ಟು ನೀಡಿದೆ.
ನವೆಂಬರ್ 7 ರಿಂದ ಫೆಬ್ರವರಿ 21 ರವರೆಗೆ ಸಫಾರಿ ಕಾರ್ಯಾಚರಣೆಗಳನ್ನ ಸ್ಥಗಿತಗೊಳಿಸಲಾಗಿತ್ತು. ಈ ಸುದೀರ್ಘ ಅವಧಿಯಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಬಂಡೀಪುರ ಹುಲಿ ಮೀಸಲು ಪ್ರದೇಶವು ಸರಿಸುಮಾರು ₹2.5 ಕೋಟಿ ಆದಾಯವನ್ನು ಕಳೆದುಕೊಂಡಿದ್ದರೆ, ನಾಗರಹೊಳೆ ಹುಲಿ ಮೀಸಲು ಪ್ರದೇಶವು ₹3.5 ಕೋಟಿ ನಷ್ಟವನ್ನು ಅನುಭವಿಸಿದೆ ಎಂದು ಕೇಳಿಬಂದಿದೆ. ಒಟ್ಟಾರೆಯಾಗಿ ಎರಡು ಅರಣ್ಯ ಪ್ರದೇಶಗಳಿಂದ ಬರಬೇಕಿದ್ದ ₹6 ಕೋಟಿ ಆದಾಯ ಇಲ್ಲದಂತಾಗಿದೆ. ಇದು ಅರಣ್ಯ ಸಂರಕ್ಷಣೆ ಮತ್ತು ನಿರ್ವಹಣಾ ಕೆಲಸಗಳ ಮೇಲೆ ದೊಡ್ಡ ಮಟ್ಟದ ಆರ್ಥಿಕ ಒತ್ತಡವನ್ನ ಉಂಟುಮಾಡಿದೆ.
ಈ ಕಠಿಣ ನಿರ್ಧಾರವನ್ನು ವಿನಾಕಾರಣ ತೆಗೆದುಕೊಳ್ಳಲಾಗಿಲ್ಲ. ಅರಣ್ಯದ ಗಡಿ ಭಾಗಗಳಲ್ಲಿರುವ ಹಳ್ಳಿಗಳಲ್ಲಿ ಹುಲಿಗಳ ಹಾವಳಿ ವಿಪರೀತವಾಗಿತ್ತು. ಹುಲಿ ದಾಳಿಯಿಂದಾಗಿ ಮೂವರು ಗ್ರಾಮಸ್ಥರು ಪ್ರಾಣ ಕಳೆದುಕೊಂಡಿದ್ದರು ಮತ್ತು ಹಲವರು ತೀವ್ರವಾಗಿ ಗಾಯಗೊಂಡಿದ್ದರು. ಅಷ್ಟೇ ಅಲ್ಲದೆ, ಹುಲಿಗಳು ರೈತರ ಜಾನುವಾರುಗಳನ್ನು ಬೇಟೆಯಾಡಲು ಪ್ರಾರಂಭಿಸಿದ್ದವು. ಈ ಘಟನೆಗಳು ಅರಣ್ಯ ಅಂಚಿನ ನಿವಾಸಿಗಳಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದವು. ಈ ಸಂಘರ್ಷ ನಿಯಂತ್ರಿಸಲು ಮತ್ತು ಜನರ ಸುರಕ್ಷತೆಯನ್ನು ಕಾಪಾಡಲು ಸಫಾರಿಯನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿತ್ತು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಮುನ್ನೆಚ್ಚರಿಕೆ ಕ್ರಮವಾಗಿ ಸಫಾರಿ ಚಟುವಟಿಕೆಗಳನ್ನು ರದ್ದುಗೊಳಿಸಲು ಆದೇಶಿಸಿದ್ದರು. ಕೇವಲ ಸಫಾರಿ ರದ್ದುಗೊಳಿಸುವುದಷ್ಟೇ ಅಲ್ಲದೆ, ಕಾಡಂಚಿನ ಪ್ರದೇಶಗಳಲ್ಲಿ ಹುಲಿಗಳ ಚಲನವಲನದ ಮೇಲೆ ತೀವ್ರ ನಿಗಾ ಇರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಹುಲಿಗಳನ್ನು ಪತ್ತೆ ಹಚ್ಚುವುದು ಮತ್ತು ಅವು ಕಾಡಿನಿಂದ ಹೊರಬರದಂತೆ ತಡೆಯುವುದು ಇಲಾಖೆಯ ಮೊದಲ ಆದ್ಯತೆಯಾಗಿತ್ತು.
ಸಫಾರಿ ನಿಲ್ಲಿಸಿರುವುದು ಕೇವಲ ಒಂದು ಸರ್ಕಾರಿ ಆದೇಶವಲ್ಲ, ಅದು ಸಾವಿರಾರು ಕುಟುಂಬಗಳ ಒಲೆಯನ್ನೇ ಆರಿಸಿದಂತಾಗಿದೆ. ಕಾಡನ್ನೇ ನಂಬಿ ಬದುಕುತ್ತಿದ್ದ ಸಫಾರಿ ಚಾಲಕರು, ಸಣ್ಣ ಹೋಟೆಲ್ ಮಾಲೀಕರು ಮತ್ತು ರೆಸಾರ್ಟ್ ಕಾರ್ಮಿಕರು ಇಂದು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಜನರ ಪ್ರಾಣ ಉಳಿಸುವುದು ಎಷ್ಟು ಮುಖ್ಯವೋ, ಅವರ ಹೊಟ್ಟೆ ತುಂಬಿಸುವುದು ಕೂಡ ಅಷ್ಟೇ ಮುಖ್ಯ. ಈ ದೀರ್ಘಕಾಲದ ಸ್ಥಗಿತವು ಬಡ ದುಡಿಯುವ ವರ್ಗದ ಬದುಕನ್ನು ಆರ್ಥಿಕವಾಗಿ ಹೈರಾಣಾಗಿಸಿದೆ.
ಸದ್ಯಕ್ಕೆ ಪರಿಸ್ಥಿತಿಯನ್ನು ಸುಧಾರಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದು, ನೆಲದ ಪರಿಸ್ಥಿತಿಯನ್ನ ಗಮನಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅರಣ್ಯ ಸಂರಕ್ಷಣೆ ಮತ್ತು ಜನರ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಈಗಿನ ಸವಾಲಾಗಿದೆ. ನಷ್ಟವಾದ ಆದಾಯವನ್ನು ಸರಿದೂಗಿಸುವುದು ಮತ್ತು ಮುಂದೆ ಇಂತಹ ಘಟನೆಗಳು ನಡೆಯದಂತೆ ತಡೆಯುವುದು ಅರಣ್ಯ ಇಲಾಖೆಯ ಮುಂದಿನ ಗುರಿಯಾಗಿದೆ.