ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಖ್ಯಾತಿ ಪಡೆದಿರುವ ಬಳ್ಳಾರಿಯ ಜೀನ್ಸ್ ಉದ್ಯಮವು ಈಗ ಸಂಕಷ್ಟದ ಸುಳಿಯಲ್ಲಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಸಂಘರ್ಷದ ಕಿಚ್ಚು ಬಳ್ಳಾರಿಯ ಜೀನ್ಸ್ ಕಾರ್ಖಾನೆಗಳ ಮೇಲೆ ನೇರ ಪರಿಣಾಮ ಬೀರಿದೆ. ಜಾಗತಿಕ ಮಟ್ಟದ ಈ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಸಾವಿರಾರು ಕುಟುಂಬಗಳಿಗೆ ಆಧಾರವಾಗಿದ್ದ ಈ ಉದ್ಯಮವು ಈಗ ಕುಸಿತದ ಹಾದಿಯಲ್ಲಿದೆ. ಪ್ರಮುಖವಾಗಿ ಜೀನ್ಸ್ ಉತ್ಪಾದನೆಗೆ ಬೇಕಾದ ರಾಸಾಯನಿಕಗಳ ಕೊರತೆಯು ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಜೀನ್ಸ್ ಪ್ಯಾಂಟ್‌ಗಳನ್ನು ಸಿದ್ಧಪಡಿಸಲು ಮತ್ತು ಅವುಗಳಿಗೆ ಬಣ್ಣ ನೀಡಲು ವಿವಿಧ ಕೆಮಿಕಲ್ಸ್‌ಗಳ ಅವಶ್ಯಕತೆ ಇರುತ್ತದೆ. ಕೊಲ್ಲಿ ರಾಷ್ಟ್ರಗಳಿಂದ ಬರುತ್ತಿದ್ದ ಹೈಡ್ರೋಜನ್ ಪೆರಾಕ್ಸೈಡ್, ಸೋಡಿಯಂ ಹೈಪೋಕ್ಲೋರೈಟ್ಸ್ ಮತ್ತು ಪೊಟ್ಯಾಸಿಯಮ್ ಪರ್ಮಾಂಗನೇಟ್ ಅಂತಹ ಪ್ರಮುಖ ರಾಸಾಯನಿಕಗಳ ಸರಬರಾಜು ಈಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸರಬರಾಜು ನಿಂತಿದ್ದರಿಂದ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಗಗನಕ್ಕೇರಿದೆ. ಈ ಹಿಂದೆ ಒಂದು ಕೆಜಿ ಗೆ ಕೇವಲ 40 ರೂಪಾಯಿಗೆ ಸಿಗುತ್ತಿದ್ದ ಕೆಮಿಕಲ್ಸ್ ಬೆಲೆ ಈಗ 150 ರೂಪಾಯಿಯ ಗಡಿ ದಾಟಿದೆ. ಈ ಭಾರಿ ದರ ಏರಿಕೆಯು ಸಣ್ಣ ಮತ್ತು ಮಧ್ಯಮ ಗಾತ್ರದ ಜೀನ್ಸ್ ಉದ್ಯಮಿಗಳಿಗೆ ಭರಿಸಲಾಗದ ಹೊರೆಯಾಗಿ ಪರಿಣಮಿಸಿದೆ.
ಯುಗಾದಿ ಮತ್ತು ರಂಜಾನ್ ಹಬ್ಬಗಳು ಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ಅತ್ಯಂತ ಸುಗ್ಗಿ ಕಾಲ. ಪ್ರತಿ ವರ್ಷ ರಂಜಾನ್ ಸಮಯದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಜೀನ್ಸ್ ಪ್ಯಾಂಟ್‌ಗಳು ಬಳ್ಳಾರಿಯಿಂದ ಗಲ್ಫ್ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದವು. ಆದರೆ ಈ ಬಾರಿ ಕೆಮಿಕಲ್ಸ್ ಕೊರತೆ ಮತ್ತು ಸಾರಿಗೆ ಸಂಕಷ್ಟದಿಂದಾಗಿ ರಫ್ತು ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ. ಹಬ್ಬದ ಸೀಸನ್‌ನಲ್ಲಿ ಆರ್ಡರ್‌ಗಳು ಇದ್ದರೂ ಸಹ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಸದ್ಯ ಬಳ್ಳಾರಿಯಲ್ಲಿ ಜೀನ್ಸ್ ಉತ್ಪಾದನೆಯು ಶೇ.50 ರಷ್ಟು ಕುಸಿತ ಕಂಡಿದೆ, ಇದು ಉದ್ಯಮಿಗಳ ನಿದ್ದೆ ಗೆಡಿಸಿದೆ.
ಜೀನ್ಸ್ ಬಟ್ಟೆಗೆ ಹೊಳಪು ಮತ್ತು ವಿಶಿಷ್ಟ ಬಣ್ಣ ನೀಡಲು ಈ ಕೆಮಿಕಲ್ಸ್‌ಗಳು ಅನಿವಾರ್ಯ. ಕೆಮಿಕಲ್ಸ್‌ಗಳ ಕೊರತೆಯಿಂದಾಗಿ ಜೀನ್ಸ್ ಪ್ಯಾಂಟ್‌ಗಳಿಗೆ ಲೇಪನ ಮಾಡುವ ಪ್ರಕ್ರಿಯೆ ನಿಂತುಹೋಗಿದೆ. ಸರಿಯಾದ ಕೆಮಿಕಲ್ಸ್ ಇಲ್ಲದೆ ತಯಾರಿಸಿದ ಬಟ್ಟೆಯ ಗುಣಮಟ್ಟ ಕಡಿಮೆಯಾಗುವ ಆತಂಕವಿದೆ. ಹೀಗಾಗಿ ಅನೇಕ ಉತ್ಪಾದಕರು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದರಿಂದ ಬಳ್ಳಾರಿಯ ಸಾವಿರಾರು ಗಾರ್ಮೆಂಟ್ಸ್ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಳ್ಳಾರಿಯ ಜೀನ್ಸ್ ಉದ್ಯಮವು ಕೇವಲ ಸ್ಥಳೀಯ ಮಾರುಕಟ್ಟೆಗೆ ಸೀಮಿತವಾಗಿಲ್ಲ, ಅದು ಅಂತರಾಷ್ಟ್ರೀಯ ಮಟ್ಟದ ವ್ಯವಹಾರವನ್ನು ಹೊಂದಿದೆ. ಕೊಲ್ಲಿ ರಾಷ್ಟ್ರಗಳಲ್ಲಿನ ಯುದ್ಧದ ಪರಿಸ್ಥಿತಿ ಶೀಘ್ರವೇ ತಿಳಿಯಾಗದಿದ್ದರೆ, ಬಳ್ಳಾರಿಯ ಈ ಪ್ರತಿಷ್ಠಿತ ಉದ್ಯಮವು ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯಬಹುದು. ಸರ್ಕಾರವು ಇಂತಹ ಸಂದರ್ಭದಲ್ಲಿ ಹಸ್ತಕ್ಷೇಪ ಮಾಡಿ, ರಾಸಾಯನಿಕಗಳ ಪರ್ಯಾಯ ವ್ಯವಸ್ಥೆ ಅಥವಾ ಉದ್ಯಮಿಗಳಿಗೆ ರಿಯಾಯಿತಿ ನೀಡುವ ಬಗ್ಗೆ ಯೋಚಿಸಬೇಕಿದೆ.
ದೂರದ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಬಳ್ಳಾರಿಯ ಜನಸಾಮಾನ್ಯರ ಬದುಕಿನ ಮೇಲೆ ಭಾರಿ ಹೊಡೆತ ನೀಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ, ಹಬ್ಬದ ಸಂಭ್ರಮದಲ್ಲಿರಬೇಕಾದ ಉದ್ಯಮಿಗಳು ಈಗ ನಷ್ಟದ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.