Mar 8, 2026 Languages : ಕನ್ನಡ | English

ಸಹಪಾಠಿಗಳ ಮೇಲೇ 9ನೇ ತರಗತಿ ಬಾಲಕನ ಮಾರಣಾಂತಿಕ ಹಲ್ಲೆ - ಓರ್ವ ಸಾವು!!

ಬಳ್ಳಾರಿ ನಗರದ ಇತಿಹಾಸದಲ್ಲೇ ಅತ್ಯಂತ ಅಘಾತಕಾರಿ ಮತ್ತು ಭೀಕರ ಘಟನೆಯೊಂದು ಶನಿವಾರ ತಡರಾತ್ರಿ ಸಂಭವಿಸಿದೆ. ನಗರದ "ಗುರುಕುಲ ವಸತಿ ಶಾಲೆ"ಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನದೇ ಸಹಪಾಠಿಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಹಾಗೂ 7 ವಿದ್ಯಾರ್ಥಿಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಮಗು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ
ಮಗು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ

ಶನಿವಾರ ರಾತ್ರಿ ಊಟ ಮುಗಿಸಿ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಮಲಗಿದ್ದಾಗ ಈ ದುರಂತ ನಡೆದಿದೆ. ಅದೇ ವಸತಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯೊಬ್ಬ, ಮೊದಲೇ ಸಂಚು ರೂಪಿಸಿದಂತೆ ಮಂಚದ ಕಬ್ಬಿಣದ ರಾಡ್, ಸ್ಕ್ರೂ ಡ್ರೈವರ್, ರೇಡಿಯಮ್ ಕಟರ್ ಮತ್ತು ಚಾಕುವಿನಿಂದ ನಿದ್ರೆಯಲ್ಲಿದ್ದ ಸಹಪಾಠಿಗಳ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ಆತನ ಈ ವಿಪರೀತ ವರ್ತನೆಯಿಂದಾಗಿ ಎಂಟು ವಿದ್ಯಾರ್ಥಿಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಡೆಯಲು ಬಂದ ಹಾಸ್ಟೆಲ್ ವಾರ್ಡನ್ ಮೇಲೂ ಹಲ್ಲೆ ನಡೆಸಿರುವ ಆರೋಪಿ ವಿದ್ಯಾರ್ಥಿ, ನಂತರ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ದೌರ್ಭಾಗ್ಯವಶಾತ್, ದಾಳಿಗೆ ಒಳಗಾದ ಆಂಧ್ರಪ್ರದೇಶದ ಅದವಾನಿ ಮೂಲದ ಹೇಮಂತ್ ಎಂಬ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಉಳಿದ ಏಳು ವಿದ್ಯಾರ್ಥಿಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಬಳ್ಳಾರಿಯ ವಿಮ್ಸ್ (VIMS) ಮತ್ತು ಟ್ರಾಮಾ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಕೆಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಮೃತ ಹೇಮಂತ್‌ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಮ್ಸ್‌ಗೆ ರವಾನಿಸಲಾಗಿದೆ.

ಪೋಷಕರಲ್ಲಿ ಮನೆಮಾಡಿದ ಆತಂಕ

ಮಕ್ಕಳನ್ನು ಉತ್ತಮ ಶಿಕ್ಷಣ ಮತ್ತು ಸುರಕ್ಷಿತ ಜೀವನಕ್ಕಾಗಿ ವಸತಿ ಶಾಲೆಗೆ ಕಳುಹಿಸಿದ್ದ ಪೋಷಕರು ಈ ಘಟನೆಯಿಂದ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ತಡರಾತ್ರಿ ಮಕ್ಕಳ ಮೇಲಾದ ಈ ಭೀಕರ ಹಲ್ಲೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಮತ್ತು ಶಾಲೆಯ ಬಳಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. 9ನೇ ತರಗತಿಯ ಬಾಲಕನೊಬ್ಬ ಇಂತಹ ಕ್ರೂರ ಕೃತ್ಯಕ್ಕೆ ಕೈಹಾಕಲು ಕಾರಣವೇನು? ಆತನಿಗೆ ಇಷ್ಟೊಂದು ಆಕ್ರೋಶ ಬರಲು ಕಾರಣವೇನು? ಎಂಬ ಪ್ರಶ್ನೆಗಳು ಈಗ ಎಲ್ಲರನ್ನೂ ಕಾಡುತ್ತಿವೆ.

ಬಳ್ಳಾರಿ ನಗರದ ತಡಿಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪರಾರಿಯಾಗಿರುವ ಆರೋಪಿ ವಿದ್ಯಾರ್ಥಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಈ ಘಟನೆಯು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

Latest News