Feb 16, 2026 Languages : ಕನ್ನಡ | English

ಬಾಗಲಕೋಟೆ ಜಿಲ್ಲೆಯಲ್ಲಿ ಶುರುವಾದ ಬಿಜೆಪಿ ಒಳಜಗಳ - ಟಿಕೆಟ್ ವಿಚಾರದಲ್ಲಿ ಮತ್ತೆ ಕಿಡಿ ಹೊತ್ತಿಸಿದ ನಿರಾಣಿ!!

ಬಾಗಲಕೋಟೆ ಜಿಲ್ಲೆಯಲ್ಲಿ ಬಿಜೆಪಿ ಒಳಜಗಳ ಮತ್ತೆ ಬಯಲಾಗಿರುವ ಘಟನೆ ನಡೆದಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಜಿಲ್ಲೆಯಲ್ಲಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವಾಗಲೇ, ಮಾಜಿ ಸಚಿವ ಹಾಗೂ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಬಾದಾಮಿ ಕ್ಷೇತ್ರದಲ್ಲಿ ಕಿಡಿ ಹೊತ್ತಿಸಿದ್ದಾರೆ.

ಬಾಗಲಕೋಟೆ ಬಿಜೆಪಿ ಒಳಜಗಳ – ಬಾದಾಮಿಯಲ್ಲಿ ನಿರಾಣಿ ಹೇಳಿಕೆ!!
ಬಾಗಲಕೋಟೆ ಬಿಜೆಪಿ ಒಳಜಗಳ – ಬಾದಾಮಿಯಲ್ಲಿ ನಿರಾಣಿ ಹೇಳಿಕೆ!!

ಬಾದಾಮಿ ನಗರದಲ್ಲಿ ನಡೆದ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ನಿರಾಣಿ ಮಾತನಾಡಿ, “ಬಾದಾಮಿ ಕ್ಷೇತ್ರದಲ್ಲಿ ಕಟ್ಟೆಯ ಕಲ್ಲು ಕಟ್ಟೆಗೆ ಹಚ್ಚುತ್ತೇವೆ. ಅದೇನು ಬೆಕ್ಕಾದ್ದು ಆಗಲಿ, ನೀವು ಗಟ್ಟಿಯಾಗಿ ಇರ್ರಿ” ಎಂದು ಹೇಳಿಕೆ ನೀಡಿದ್ದಾರೆ. ಅವರು ಪಟ್ಟಣಶೆಟ್ಟಿ ಹಾಗೂ ಮಹಾಂತೇಶ್ ಮಮದಾಪುರರನ್ನು ಉಲ್ಲೇಖಿಸಿ, ಇಬ್ಬರೂ ಕೂಡಿ ಒಂದು ಹೆಸರು ನೀಡಬೇಕು, ಟಿಕೆಟ್ ತಂದು ಗೆಲ್ಲಿಸುವ ಜವಾಬ್ದಾರಿ ನಾನು ಮಾಡ್ತೇನೆ” ಎಂದು ಘೋಷಿಸಿದ್ದಾರೆ.

ಈ ಹೇಳಿಕೆ ಜಿಲ್ಲಾ ಬಿಜೆಪಿ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಕಳೆದ ಮೂರು ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಭಿನ್ನಮತದಿಂದ ಸೋತಿದ್ದು, ಟಿಕೆಟ್ ಹಂಚಿಕೆ ವಿಚಾರದಲ್ಲಿ ಜಿದ್ದಾಜಿದ್ದಿ ನಡೆಯುತ್ತಿತ್ತು. ಹಿಂದಿನ ಚುನಾವಣೆಯಲ್ಲಿ ಪಟ್ಟಣಶೆಟ್ಟಿ ಮತ್ತು ಮಮದಾಪುರರನ್ನು ಬಿಟ್ಟು, ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಈ ಬಾರಿ ಹುಟ್ಟುಹಬ್ಬದ ಕಾರ್ಯಕ್ರಮ ನೆಪದಲ್ಲಿ ನಿರಾಣಿ ನೀಡಿದ ಹೇಳಿಕೆ, ಜಿಲ್ಲಾಧ್ಯಕ್ಷನಿಗೆ ಟಿಕೆಟ್ ತಪ್ಪುವ ಸಾಧ್ಯತೆ ಎಂಬ ಸಂದೇಶ ನೀಡಿದಂತಾಗಿದೆ. ಇದರಿಂದ ಜಿಲ್ಲಾ ಬಿಜೆಪಿ ಒಳಜಗಳ ಮತ್ತೊಮ್ಮೆ ಬಯಲಾಗಿದೆ.

ಅತ್ತ ಜಮಖಂಡಿ ಕ್ಷೇತ್ರದಲ್ಲಿ ವಿಜಯೇಂದ್ರ ಜಿ ರಾಮ್ ಜಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರೆ, ಇತ್ತ ಬಾದಾಮಿಯಲ್ಲಿ ನಿರಾಣಿ ನೀಡಿದ ಹೇಳಿಕೆ, ರಾಜ್ಯದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಒಟ್ಟಿನಲ್ಲಿ, ಬಾದಾಮಿ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿ ಒಳಜಗಳ ಮತ್ತೆ ತಲೆದೋರಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆಗೆ ಎರಡೂವರೆ ವರ್ಷ ಬಾಕಿ ಇರುವಾಗಲೇ ಟಿಕೆಟ್ ಫೈಟ್‌ಗೆ ನಾಂದಿ ಹಾಡಿದಂತಾಗಿದೆ. 

Latest News