ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ರೈತರು ಮತ್ತು ಪಶುಪಾಲಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ತೀರಾ ವಿಭಿನ್ನ ಹಾಗೂ ಆಕ್ರೋಶಭರಿತ ಪ್ರತಿಭಟನೆ ನಡೆಸಿದ್ದಾರೆ. ಹಾಲಿನ ದರವನ್ನು ಲೀಟರ್‌ಗೆ 35 ರೂಪಾಯಿಯಿಂದ 50 ರೂಪಾಯಿವರೆಗೆ ಹೆಚ್ಚಿಸಬೇಕು ಮತ್ತು ಕೆಎಂಎಫ್ (KMF) ಪಶು ಆಹಾರದ ಬೆಲೆಯನ್ನು ತಕ್ಷಣವೇ ಇಳಿಸಬೇಕು ಎಂದು ಆಗ್ರಹಿಸಿ 'ಕರುನಾಡು ರೈತ ಗೋಪಾಲಕರ ಸಂಘ'ದ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗ ಹಾಲಿನ ಕ್ಯಾನ್ ಅನ್ನು ತಲೆಮೇಲೆ ಸುರಿದುಕೊಂಡು ಭರ್ಜರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೈಯಲ್ಲಿ ಹಾಲಿನ ಕ್ಯಾನ್ ಹಿಡಿದು ಬೀದಿಗಿಳಿದ ನೂರಾರು ರೈತರು ಮೊದಲು ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ಸ್ಥಳೀಯ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಗೋಪಾಲಕರ ಬೇಡಿಕೆ ನ್ಯಾಯಯುತವಾಗಿದೆ: ಬಮೂಲ್ ನಿರ್ದೇಶಕ ಭರವಸೆ
ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಮೂಲ್ ನಿರ್ದೇಶಕರಾದ ಆರ್.ಕೆ. ರಮೇಶ್ ಅವರು ರೈತರಿಂದ ಅಧಿಕೃತವಾಗಿ ಮನವಿ ಪತ್ರವನ್ನು ಸ್ವೀಕರಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ರೈತರು ಮತ್ತು ಗೋಪಾಲಕರು ಹಾಲಿನ ದರ ಹೆಚ್ಚಿಸಬೇಕು ಎಂದು ಹಲವು ದಿನಗಳಿಂದ ಬೇಡಿಕೆ ಇಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರ ಈ ಬೇಡಿಕೆ ನೂರಕ್ಕೆ ನೂರು ನ್ಯಾಯಯುತವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಕೆಎಂಎಫ್ ಪ್ರಮುಖ ಸಭೆಯಲ್ಲಿ ಗೋಪಾಲಕರ ಈ ಬೇಡಿಕೆಯನ್ನು ನಾನು ಖುದ್ದಾಗಿ ಪ್ರಸ್ತಾಪಿಸುತ್ತೇನೆ. ರೈತರಿಗೆ ಅನ್ಯಾಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು" ಎಂದು ರೈತರಿಗೆ ಸಾಂತ್ವನ ಹೇಳಿ ವಿಶ್ವಾಸ ತುಂಬಿದರು.
ತಹಶೀಲ್ದಾರ್ ಸಮ್ಮುಖದಲ್ಲೇ ಹೈಡ್ರಾಮಾ; 15 ದಿನಗಳ ಡೆಡ್‌ಲೈನ್!
ಬಮೂಲ್ ಆನೇಕಲ್ ಕಚೇರಿ ಮುಂಭಾಗ ಪ್ರತಿಭಟನೆ ಮುಗಿಸಿದ ರೈತ ಗೋಪಾಲಕರು, ಅಲ್ಲಿಂದ ಸೀದಾ ತಾಲೂಕು ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು. ತಾಲೂಕು ಕಚೇರಿ ಆವರಣಕ್ಕೆ ನುಗ್ಗಿದ ನೌಕರರು ತಹಶೀಲ್ದಾರ್ ಅವರ ಎದುರೇ ಹಾಲಿನ ಕ್ಯಾನ್‌ಗಳನ್ನು ಓಪನ್ ಮಾಡಿ, ತಮ್ಮ ತಲೆಮೇಲೆ ಸುರಿದುಕೊಂಡು ಕಣ್ಣೀರು ಹಾಕಿದರು.
ಅಧ್ಯಕ್ಷರ ಖಡಕ್ ವಾರ್ನಿಂಗ್: ಈ ವೇಳೆ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಕರುನಾಡು ಗೋಪಾಲಕರ ಸಂಘದ ರಾಜ್ಯ ಅಧ್ಯಕ್ಷರಾದ ಎಸ್. ಮುನಿರಾಜು ಅವರು, "ಇವತ್ತು ನಾವು ಹಾಲಿನ ದರ ಹೆಚ್ಚಳಕ್ಕೆ ಒತ್ತಾಯಿಸಿ ನಮ್ಮದೇ ಹಾಲನ್ನು ತಲೆಮೇಲೆ ಸುರಿದುಕೊಂಡು ಸಾಂಕೇತಿಕವಾಗಿ ಪ್ರತಿಭಟಿಸಿದ್ದೇವೆ. ಇಂದಿನಿಂದ ಮುಂದಿನ 15 ದಿನಗಳ ಒಳಗಾಗಿ ಸರ್ಕಾರ ಹಾಲಿನ ದರವನ್ನು ಪರಿಷ್ಕರಿಸದಿದ್ದರೆ, ನಾವು ಕೆಎಂಎಫ್ ಕೇಂದ್ರ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೂರಲಿದ್ದೇವೆ" ಎಂದು ಸರ್ಕಾರಕ್ಕೆ ನೇರವಾಗಿಯೇ ಡೆಡ್‌ಲೈನ್ ಕೊಟ್ಟು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರು
ಆನೇಕಲ್‌ನಲ್ಲಿ ನಡೆದ ಈ ಹೈವೋಲ್ಟೇಜ್ ರೈತ ಪ್ರತಿಭಟನೆಯಲ್ಲಿ ಕರುನಾಡು ರೈತ ಗೋಪಾಲಕರ ಸಂಘದ ಉಪಾಧ್ಯಕ್ಷ ಮುರುಗೇಶ್, ಸಂಘದ ಪ್ರಮುಖ ಕಾರ್ಯದರ್ಶಿಗಳಾದ ವೆಂಕಟೇಶ್, ಶ್ರೀನಿವಾಸ್, ಚಿಕ್ಕಣ್ಣ, ನಾರಾಯಣಪ್ಪ, ಮುನಿರಾಜು (ರಾಜಣ್ಣ), ಹರ್ಷ, ಅಮರನಾಥ್, ಮುನಿವೆಂಕಟಪ್ಪ ಹಾಗೂ ರಮೇಶ್ ರೆಡ್ಡಿ ಭಾಗವಹಿಸಿದ್ದರು.
ಇವರ ಜೊತೆಗೆ ವಕೀಲ ಪುರುಷೋತ್ತಮ್ ಚಿಕ್ಕಹಾಗಡೆ, ತಾಲೂಕು ಘಟಕದ ಅಧ್ಯಕ್ಷ ದಿಲೀಪ್ ಗೌಡ, ಗೌರವಾಧ್ಯಕ್ಷ ನಾಗಪ್ಪ, ದರ್ಶನ್, ಪ್ರವೀಣ್ (ಅಪ್ಪ), ಮನೋಜ್, ಲಕ್ಷ್ಮಣ್, ಅಶೋಕಣ್ಣ, ಅಭಿ, ಜೋಗಿ, ಅಳ್ಳಾಳಪ್ಪ ಸೇರಿದಂತೆ ನೂರಾರು ಹೈನುಗಾರರು ಹಾಗೂ ಪ್ರಗತಿಪರ ರೈತರು ಹಾಜರಿದ್ದು ಹೋರಾಟಕ್ಕೆ ಸಾತ್ ನೀಡಿದರು.
ಪ್ರತಿ ವರ್ಷ ಪಶು ಆಹಾರದ ಬೆಲೆ ಗಗನಕ್ಕೇರುತ್ತಿದ್ದರೂ ಹಾಲಿನ ದರ ಮಾತ್ರ ಹೆಚ್ಚಾಗುತ್ತಿಲ್ಲ, ಇದರಿಂದ ಹೈನುಗಾರಿಕೆ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಆನೇಕಲ್ ರೈತರ ಈ 'ಹಾಲು ಅಭಿಷೇಕ'ದ ಪ್ರತಿಭಟನೆ ಸದ್ಯ ಇಡೀ ರಾಜ್ಯದ ಗಮನ ಸೆಳೆದಿದ್ದು, ಸರ್ಕಾರ ಇವರ ಬೇಡಿಕೆಗೆ ಮಣಿಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.