Apr 11, 2026 Languages : ಕನ್ನಡ | English

ಹುಟ್ಟುಹಬ್ಬದ ಸಂಭ್ರಮದಲ್ಲಿ ಅನಂತ್ ಅಂಬಾನಿ ಭರ್ಜರಿ ಗಿಫ್ಟ್ - ಕೇರಳದ 9 ದೇವಸ್ಥಾನಗಳಿಗೆ 22 ಕೋಟಿ ದೇಣಿಗೆ!!

ರಿಲಯನ್ಸ್ ಸಮೂಹದ ವಾರಸುದಾರ ಅನಂತ್ ಅಂಬಾನಿ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಾಗಿರುವುದು ಅವರ ಅದ್ಧೂರಿ ಮದುವೆಯ ಕಾರಣಕ್ಕಲ್ಲ, ಬದಲಾಗಿ ಅವರು ಕೇರಳದ ದೇವಾಲಯಗಳಿಗೆ ನೀಡಿರುವ ಬೃಹತ್ ದೇಣಿಗೆಯಿಂದಾಗಿ. ಶುಕ್ರವಾರವಷ್ಟೇ ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅನಂತ್, ಕೇರಳದ 9 ಪ್ರಮುಖ ದೇವಾಲಯಗಳ ಅಭಿವೃದ್ಧಿಗಾಗಿ ಬರೋಬ್ಬರಿ 22.55 ಕೋಟಿ ರೂಪಾಯಿಗಳನ್ನು ನೀಡುವ ಮೂಲಕ ಭಕ್ತಿ ಮೆರೆದಿದ್ದಾರೆ.

ಪಾಳುಬಿದ್ದ ಗುಡಿಗಳ ಉದ್ಧಾರಕ್ಕೆ ನಿಂತ ಅಂಬಾನಿ ಪುತ್ರ
ಪಾಳುಬಿದ್ದ ಗುಡಿಗಳ ಉದ್ಧಾರಕ್ಕೆ ನಿಂತ ಅಂಬಾನಿ ಪುತ್ರ

ಏಪ್ರಿಲ್ 7 ರಂದು ಅನಂತ್ ಕೇರಳದ ಪ್ರಸಿದ್ಧ ಗುರುವಾಯೂರ್ ಶ್ರೀ ಕೃಷ್ಣ ದೇವಸ್ಥಾನ ಮತ್ತು ತಳಿಪರಂಬ ರಾಜರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕೇವಲ ದರ್ಶನ ಪಡೆಯುವುದಷ್ಟೇ ಅವರ ಉದ್ದೇಶವಾಗಿರಲಿಲ್ಲ. ಶತಮಾನಗಳ ಇತಿಹಾಸವಿರುವ ನಮ್ಮ ಸಂಸ್ಕೃತಿಯ ಕುರುಹುಗಳನ್ನು ಸಂರಕ್ಷಿಸಬೇಕು ಎಂಬ ಕಾಳಜಿ ಅವರಲ್ಲಿತ್ತು. ಪ್ರಸಿದ್ಧ ಜ್ಯೋತಿಷಿ ಪರಪ್ಪನಂಗಡಿ ಉನ್ನಿಕೃಷ್ಣ ಪಣಿಕ್ಕರ್ ಅವರ ಸಲಹೆಯಂತೆ, ಪಾಳುಬಿದ್ದಿರುವ ಅಥವಾ ನವೀಕರಣದ ಅಗತ್ಯವಿರುವ ದೇವಾಲಯಗಳನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.

ಯಾವ ದೇವಸ್ಥಾನಕ್ಕೆ ಎಷ್ಟು?

ರಾಜರಾಜೇಶ್ವರ ದೇವಸ್ಥಾನ: ಇಲ್ಲಿನ ಹಳೆಯ ಗೋಪುರದ ನವೀಕರಣ ಮತ್ತು ಹೆಲಿಪ್ಯಾಡ್ ಒಳಗೊಂಡ ಮಲ್ಟಿ-ಲೆವೆಲ್ ಪಾರ್ಕಿಂಗ್ ನಿರ್ಮಾಣಕ್ಕೆ ಬರೋಬ್ಬರಿ 12 ಕೋಟಿ ರೂ. ಮೀಸಲಿಟ್ಟಿದ್ದಾರೆ. ಈಗಾಗಲೇ 3 ಕೋಟಿ ರೂ.ಗಳನ್ನು ಮೊದಲ ಕಂತಾಗಿ ನೀಡಲಾಗಿದ್ದು, ಕೆಲಸ ಶೀಘ್ರದಲ್ಲೇ ಶುರುವಾಗಲಿದೆ.

ಗುರುವಾಯೂರ್ ದೇವಸ್ಥಾನ: ಭಕ್ತರ ನೆಚ್ಚಿನ ಈ ಸನ್ನಿಧಿಗೆ 6 ಕೋಟಿ ರೂ. ನೀಡಿದ್ದಾರೆ.

ತಿರುವಂಗಡ್ ಶ್ರೀರಾಮಸ್ವಾಮಿ ದೇವಸ್ಥಾನ: ಇಲ್ಲಿನ ಗರ್ಭಗುಡಿಯ ಛಾವಣಿಗೆ ತಾಮ್ರದ ಹೊದಿಕೆ ಹಾಕಲು ಮತ್ತು ನವೀಕರಣಕ್ಕೆ 60 ಲಕ್ಷ ರೂ. ನೀಡಲಾಗಿದೆ.

ಕಡವಲ್ಲೂರು ದೇವಸ್ಥಾನ: ವೇದ ವಿದ್ವಾಂಸರಿಗೆ ಹೆಸರಾದ ಈ ಗುಡಿಯಲ್ಲಿ ಗರ್ಭಗುಡಿಯ ಸುತ್ತಲಿನ ವಿಳಕ್ಕುಮಡಮ್ ಮತ್ತು ಪಾದಚಾರಿ ಮಾರ್ಗ ಸರಿಪಡಿಸಲು 70 ಲಕ್ಷ ರೂ. ಒದಗಿಸಿದ್ದಾರೆ.

ತ್ರಿಪ್ರಂಗೋಡ್ ಶಿವ ದೇವಸ್ಥಾನ: ಟಿಪ್ಪು ಸುಲ್ತಾನರ ಕಾಲದಲ್ಲಿ ಹಾನಿಗೊಳಗಾಗಿದ್ದ ಪಶ್ಚಿಮ ಗೋಪುರ ಮತ್ತು ಕೂತಂಬಲಂ ಪುನರ್ನಿರ್ಮಾಣಕ್ಕೆ 4 ಕೋಟಿ ರೂಪಾಯಿ ವೆಚ್ಚದ ಯೋಜನೆಯಲ್ಲಿ ಸದ್ಯಕ್ಕೆ 1 ಕೋಟಿ ರೂ. ನೀಡಿದ್ದಾರೆ.

ಇದಲ್ಲದೆ, 9ನೇ ಶತಮಾನದ ತ್ರಿಕ್ಕಂಡಿಯೂರ್ ದೇವಸ್ಥಾನಕ್ಕೆ 60 ಲಕ್ಷ ರೂ., ಅರಿಯನ್ನೂರ್ ದೇವಸ್ಥಾನದ ಕೆರೆ ನವೀಕರಣಕ್ಕೆ 50 ಲಕ್ಷ ರೂ., ನಿರಂಕೈತಕೋಟ ದೇವಸ್ಥಾನಕ್ಕೆ 75 ಲಕ್ಷ ರೂ. ಹಾಗೂ ನೆಡುಂಪರಂಬು ಭಗವತಿ ದೇವಸ್ಥಾನದ ಅನ್ನದಾನ ಕಾರ್ಯಕ್ಕೆ 40 ಲಕ್ಷ ರೂ.ಗಳನ್ನು ನೀಡಿದ್ದಾರೆ.

ಭಕ್ತಿ ಮತ್ತು ಪರಂಪರೆಯ ಸಂರಕ್ಷಣೆ

ಅನಂತ್ ಅಂಬಾನಿ ಅವರ ಈ ನಡೆಗೆ ಕೇರಳದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇವಲ ಹಣ ನೀಡುವುದಷ್ಟೇ ಅಲ್ಲದೆ, ಆಯಾ ದೇವಸ್ಥಾನಗಳ ಆಡಳಿತ ಮಂಡಳಿಯಿಂದ 'ವಿವರವಾದ ಯೋಜನಾ ವರದಿ' (DPR) ಪಡೆದು, ವೈಜ್ಞಾನಿಕವಾಗಿ ಜೀರ್ಣೋದ್ಧಾರ ಮಾಡಲು ಅವರು ಮುಂದಾಗಿರುವುದು ವಿಶೇಷ.

Latest News