ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ಅಂದ್ರೆ ಬುದ್ಧಿವಂತರು, ಶಿಸ್ತಿನಿಂದ ಇರ್ತಾರೆ ಅನ್ನೋ ನಂಬಿಕೆ ಇದೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಿದ್ಯಾರ್ಥಿಗಳ ವರ್ತನೆ ನೋಡಿದ್ರೆ ಅರೇ ಇವರಾ ಎಂಜಿನಿಯರಿಂಗ್ ಓದ್ತಿರೋದು ಅಂತ ಅನ್ಸುತ್ತೆ. ಅಮೃತಹಳ್ಳಿ ವ್ಯಾಪ್ತಿಯಲ್ಲಿ ಇಂತಹದ್ದೇ ಒಂದು ಶಾಕಿಂಗ್ ಘಟನೆ ನಡೆದಿದ್ದು, ಪೊಲೀಸರ ಮೇಲೆ ಕೈಮಾಡಿ ಈಗ ಎಂಜಿನಿಯರಿಂಗ್ ಹುಡುಗರು ಜೈಲು ಪಾಲಾಗಿದ್ದಾರೆ.
ನಡುರಸ್ತೆಯಲ್ಲಿ ಪಾರ್ಟಿ!
ಘಟನೆ ನಡೆದಿದ್ದು ಕಳೆದ ಮೇ 1 ರಂದು ಮುಂಜಾನೆ ಸುಮಾರು 3 ಗಂಟೆಯ ಸಮಯದಲ್ಲಿ. ಅಮೃತಹಳ್ಳಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ರುದ್ರಪ್ಪ ಅವರು ನೈಟ್ ಬೀಟ್ ಡ್ಯೂಟಿಯಲ್ಲಿದ್ದರು. ಈ ವೇಳೆ ದಾಸರಹಳ್ಳಿ ಮುಖ್ಯರಸ್ತೆಯಲ್ಲಿ ಒಂದು ಪಜೆರೋ ಕಾರ್ ನಿಂತಿರೋದನ್ನ ಅವರು ಗಮನಿಸಿದ್ದಾರೆ. ಹತ್ತಿರ ಹೋಗಿ ನೋಡಿದ್ರೆ ಅಲ್ಲಿ ನಾಲ್ವರು ಯುವಕರು ನಡುರಸ್ತೆಯಲ್ಲೇ ಕಾರ್ ನಿಲ್ಲಿಸಿಕೊಂಡು ಮದ್ಯಸೇವನೆ (Drink) ಮಾಡುತ್ತಿದ್ದರು.
ಸಾರ್ವಜನಿಕ ಸ್ಥಳದಲ್ಲಿ, ಅದು ನಡುರಸ್ತೆಯಲ್ಲಿ ಕುಡಿಯೋದನ್ನ ಕಂಡ ಕಾನ್ಸ್‌ಟೇಬಲ್ ರುದ್ರಪ್ಪ ಅವರು ಅದನ್ನು ಪ್ರಶ್ನಿಸಿದ್ದಾರೆ. "ಇಲ್ಲಿ ಕುಳಿತು ಕುಡಿಯಬಾರದು, ಇಲ್ಲಿಂದ ಹೋಗಿ" ಅಂತ ಬುದ್ಧಿಮಾತು ಹೇಳಿದ್ದಾರೆ. ಆದ್ರೆ, ಕುಡಿತದ ಅಮಲಲ್ಲಿದ್ದ ಆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪೊಲೀಸರ ಮಾತು ಕೇಳುವ ತಾಳ್ಮೆ ಇರಲಿಲ್ಲ. ಪೊಲೀಸರ ಜೊತೆ ವಾದಕ್ಕಿಳಿದ ಆ ಪುಂಡರು, ಕರ್ನಾಟಕ ಪೊಲೀಸರ ಬಗ್ಗೆ ಅತ್ಯಂತ ಅಶ್ಲೀಲ ಪದಗಳಿಂದ ನಿಂದಿಸಲು ಶುರು ಮಾಡಿದ್ದಾರೆ.
ಅಷ್ಟಕ್ಕೇ ನಿಲ್ಲದ ಈ ಗ್ಯಾಂಗ್, ಕಾನ್ಸ್‌ಟೇಬಲ್ ರುದ್ರಪ್ಪ ಅವರ ಬೈಕ್ ಕೀ ಕಸಿದುಕೊಂಡು, ಅವರ ಕೈ ತಿರುಚಿ ದೈಹಿಕವಾಗಿ ಹ*ಲ್ಲೆ ನಡೆಸಿದ್ದಾರೆ. ಒಬ್ಬ ಸರ್ಕಾರಿ ಅಧಿಕಾರಿಯ ಮೇಲೆಯೇ ಇಷ್ಟೊಂದು ದರ್ಪ ತೋರಿಸಿರೋದು ನಿಜಕ್ಕೂ ಆತಂಕಕಾರಿ ವಿಷಯ.
ಇಬ್ಬರ ಬಂಧನ, ಮತ್ತಿಬ್ಬರಿಗಾಗಿ ಶೋಧ
ಘಟನೆ ನಡೆದ ತಕ್ಷಣ ಅಮೃತಹಳ್ಳಿ ಪೊಲೀಸರು ಅಲರ್ಟ್ ಆಗಿದ್ದಾರೆ. ಹ*ಲ್ಲೆ ನಡೆಸಿದ ನಾಲ್ವರು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇನ್ನುಳಿದ ಇಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಅಮೃತಹಳ್ಳಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಓದಿ ಉನ್ನತ ಮಟ್ಟಕ್ಕೆ ಹೋಗಬೇಕಾದ ವಿದ್ಯಾರ್ಥಿಗಳು ಇಂತಹ ಕಾನೂನುಬಾಹಿರ ಕೆಲಸಗಳಲ್ಲಿ ತೊಡಗುವುದು ಸರಿಯಲ್ಲ. ಅದರಲ್ಲೂ ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆಯೇ ಹ*ಲ್ಲೆ ಮಾಡೋದು ಅವರ ಭವಿಷ್ಯಕ್ಕೆ ದೊಡ್ಡ ಪೆಟ್ಟು ನೀಡಬಹುದು. ಇಂತಹ ಪುಂಡಾಟಿಕೆ ನಡೆಸುವವರ ಮೇಲೆ ಪೊಲೀಸರು ಇನ್ನು ಮುಂದೆ ಕಠಿಣ ಕ್ರಮ ಕೈಗೊಳ್ಳೋದು ಗ್ಯಾರಂಟಿ.
ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುವ ಪೊಲೀಸರಿಗೆ ಸಹಕರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂತಹ ಘಟನೆಗಳು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತವೆ.