ಭಾರತದ ಕಟ್ಟಕಡೆಯ ವ್ಯಕ್ತಿಗೂ ಗೌರವದಿಂದ ಬದುಕುವ ಹಕ್ಕನ್ನು ಕೊಟ್ಟವರು ಡಾ. ಬಿ.ಆರ್. ಅಂಬೇಡ್ಕರ್. ಆದರೆ ಈ ಮಹಾನ್ ಚಿಂತನೆಗೆ ಅಡಿಪಾಯವಾಗಿದ್ದು ಮಾತ್ರ ಗೌತಮ ಬುದ್ಧನ 'ಧಮ್ಮ'. ಅಂಬೇಡ್ಕರ್ ಅವರ ಬದುಕು, ಬರಹ ಮತ್ತು ಅವರು ಕೊಟ್ಟ ಸಂವಿಧಾನ—ಇವೆಲ್ಲದರ ಒಳಗಣ್ಣಾಗಿ ಇರುವುದು ಬುದ್ಧನ ಕರುಣೆ ಮತ್ತು ಸಮಾನತೆಯ ತತ್ವಗಳು.
ಬುದ್ಧನ 'ಧಮ್ಮ' ಮತ್ತು ಅಂಬೇಡ್ಕರ್ ಅವರ 'ಬೋಧಿಸತ್ವ'
1954ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ವಿಶ್ವ ಬೌದ್ಧ ಧರ್ಮ ಸಮ್ಮೇಳನದಲ್ಲಿ ಅಂಬೇಡ್ಕರ್ ಅವರಿಗೆ 'ಬೋಧಿಸತ್ವ' ಎಂಬ ಬಿರುದು ನೀಡಿ ಗೌರವಿಸಲಾಯಿತು. 'ಬೋಧಿಸತ್ವ' ಎಂದರೆ ಯಾರು ಗೊತ್ತೇ? ಸಮಾಜದ ಕಲ್ಯಾಣಕ್ಕಾಗಿ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಸಿಕೊಂಡವರು, ಸದಾ ಜಾಗೃತವಾಗಿರುವವರು ಮತ್ತು ಅತೀವ ಕರುಣೆಯುಳ್ಳವರು ಎಂದರ್ಥ. ಬಾಬಾಸಾಹೇಬರು ಈ ಮಾತಿಗೆ ಅನ್ವರ್ಥವಾಗಿದ್ದರು. ಅವರ ವಿಚಾರಧಾರೆಗಳು ಪಾಲಿ ಭಾಷೆಯಲ್ಲಿ ಅಡಗಿದ್ದ ಬುದ್ಧನ ಬೋಧನೆಗಳ ಆಧುನಿಕ ಪ್ರತಿಧ್ವನಿಯಾಗಿದ್ದವು.
ಸಂವಿಧಾನದ ಬೇರುಗಳು ಫ್ರಾನ್ಸ್‌ನಲ್ಲಲ್ಲ, ಬುದ್ಧನಲ್ಲಿದೆ!
ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವ (Liberty, Equality, Fraternity) ಎಂಬ ಮೂರು ಅದ್ಭುತ ಪದಗಳಿವೆ. ಅನೇಕರು ಇದನ್ನು ಫ್ರೆಂಚ್ ಕ್ರಾಂತಿಯ ಕೊಡುಗೆ ಎಂದು ಭಾವಿಸುತ್ತಾರೆ. ಆದರೆ ಬಾಬಾಸಾಹೇಬರೇ ಒಂದು ಕಡೆ ಸ್ಪಷ್ಟವಾಗಿ ಹೇಳಿದ್ದಾರೆ: "ನನ್ನ ಸಾಮಾಜಿಕ ತತ್ವಗಳನ್ನು ನಾನು ಫ್ರೆಂಚ್ ಕ್ರಾಂತಿಯಿಂದ ಪಡೆದಿಲ್ಲ; ಅವುಗಳ ಬೇರುಗಳು ಬುದ್ಧನ ಬೋಧನೆಯಲ್ಲಿವೆ."
ಬುದ್ಧನು 'ಮೈತ್ರಿ'ಯ ಮೂಲಕ ಎಲ್ಲ ಜೀವಿಗಳ ಸುಖವನ್ನು ಬಯಸಿದರೆ, ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲ ಭಾರತೀಯರ ಹಿತವನ್ನು ಬಯಸಿದರು.
ಮನಸ್ಸೇ ಶ್ರೇಷ್ಠ, ಜ್ಞಾನವೇ ಬೆಳಕು
ಬುದ್ಧ ಹೇಳುತ್ತಾನೆ—"ನಿನಗೆ ನೀನೇ ಬೆಳಕಾಗು" (ಅಪ್ಪ ದೀಪೋ ಭವ). ಯಾವುದೇ ಪವಾಡಗಳು ಬಂದು ನಿನ್ನ ಬದುಕನ್ನು ಬದಲಿಸುವುದಿಲ್ಲ ಎಂಬುದು ಬುದ್ಧನ ವಾಣಿ. ಇದನ್ನೇ ಅಂಬೇಡ್ಕರ್ ಅವರು "ಧರ್ಮ ಮನುಷ್ಯನಿಗಾಗಿ ಇದೆಯೇ ಹೊರತು, ಮನುಷ್ಯ ಧರ್ಮಕ್ಕಾಗಿ ಅಲ್ಲ" ಎಂದು ಪ್ರತಿಪಾದಿಸಿದರು. ಕುರುಡು ನಂಬಿಕೆಗಳನ್ನು ಬಿಟ್ಟು ವೈಚಾರಿಕತೆಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.
ಬಾಬಾಸಾಹೇಬರ ಪ್ರಸಿದ್ಧ ಘೋಷಣೆಯಾದ 'ಶಿಕ್ಷಣ, ಸಂಘಟನೆ, ಹೋರಾಟ' ಎನ್ನುವುದು ಬುದ್ಧನ ಹಂತಗಳಿಗೇ ಹೋಲುತ್ತದೆ:
- ಶಿಕ್ಷಣ: ಬುದ್ಧನ ಪ್ರಜ್ಞೆ ಮತ್ತು ಅರಿವು.
- ಸಂಘಟನೆ: ಒಗ್ಗಟ್ಟು ಮತ್ತು ಸಹೋದರತ್ವ.
- ಹೋರಾಟ: ಅನ್ಯಾಯದ ವಿರುದ್ಧ ಧಮ್ಮಾ ವಿಕ್ರಮ.
ಜೈ ಭೀಮ್ ಅಂದರೆ ಶಾಂತಿ
ನಾವೆಲ್ಲರೂ ಬಳಸುವ 'ಜೈ ಭೀಮ್' ಎನ್ನುವ ಘೋಷಣೆ ಕೇವಲ ಒಬ್ಬ ವ್ಯಕ್ತಿಯ ಮೇಲಿನ ಗೌರವವಲ್ಲ; ಅದು ಬುದ್ಧನ ಶಾಂತಿ ಮತ್ತು ಕ್ರಾಂತಿಯ ಸಂದೇಶ. ಇದು ಒಬ್ಬರಿಗೊಬ್ಬರು ಗೌರವ ಸಲ್ಲಿಸುವ ಹಾಗೂ 'ಮೈತ್ರಿ'ಯನ್ನು ಪ್ರತಿನಿಧಿಸುವ ಪವಿತ್ರ ಪದವಾಗಿದೆ.
ತ್ಯಾಗ ಮತ್ತು ವಿದ್ವತ್ತಿನ ಶಿಖರ
ಅಂಬೇಡ್ಕರ್ ಅವರ ಈ ಜ್ಞಾನದ ಹಿಂದೆ ಅಪಾರ ಪರಿಶ್ರಮವಿದೆ. ತಂದೆ ಸುಬೇದಾರ್ ರಾಮಜಿ ಸಕ್ಬಾಲ್, ತಾಯಿ ಭೀಮಾ ಬಾಯಿ ಮತ್ತು ಮಡದಿ ರಮಾಬಾಯಿ ಅವರ ತ್ಯಾಗವನ್ನು ನಾವು ಮರೆಯುವಂತಿಲ್ಲ. ಹಗಲಿರುಳು ಓದಿ, 32 ಪದವಿಗಳನ್ನು ಗಳಿಸಿ, ಒಂಬತ್ತು ಭಾಷೆಗಳನ್ನು ಕಲಿತು, ದಿನಕ್ಕೆ 18 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದ ಅಂಬೇಡ್ಕರ್ ಅವರಿಗೆ "ಜ್ಞಾನವೇ ವಿಶ್ವವನ್ನು ಆಳುತ್ತದೆ" ಎಂಬ ಬಲವಾದ ನಂಬಿಕೆಯಿತ್ತು.
ಅದಕ್ಕಾಗಿಯೇ ಇಡೀ ವಿಶ್ವ ಇಂದು ಏಪ್ರಿಲ್ 14ನ್ನು 'Symbol of Knowledge Day' (ಜ್ಞಾನದ ದಿನ) ಎಂದು ಆಚರಿಸುತ್ತಿದೆ. ಅವರು ಬರೆದ 'ಜಾತಿ ವಿನಾಶ', 'ದಿ ಬುದ್ಧ ಆ್ಯಂಡ್ ಹಿಸ್ ಧಮ್ಮಾ', 'ದಿ ಪ್ರಾಬ್ಲಮ್ ಆಫ್ ದಿ ರೂಪಿ' (ಇದರ ಆಧಾರದ ಮೇಲೆಯೇ ಆರ್‌ಬಿಐ ಸ್ಥಾಪನೆಯಾಗಿದ್ದು) ಮುಂತಾದ ಕೃತಿಗಳು ನಮಗೆ ದಾರಿದೀಪವಾಗಿವೆ.