ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನವು ರಾಜ್ಯ ರಾಜಕೀಯವನ್ನೇ ಅಲ್ಲಾಡಿಸಿದೆ. ಇವತ್ತು ಬೆಳಗ್ಗೆ ನಡೆದ ವಿಮಾನ ದುರಂತದಲ್ಲಿ ಅವರು ಸಾವಿಗೀಡಾದರು. ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ಖಾಸಗಿ ವಿಮಾನ, 46 ನಿಮಿಷಗಳ ಪ್ರಯಾಣದ ನಂತರ ಪತನಗೊಂಡು ಬೆಂಕಿಗೆ ಆಹುತಿಯಾಯಿತು.
ಬೆಳಗ್ಗೆ 8 ಗಂಟೆಗೆ ಅಜಿತ್ ಪವಾರ್ ಖಾಸಗಿ ವಿಮಾನಕ್ಕೆ ಹತ್ತಿದರು. 8.10ಕ್ಕೆ ಮುಂಬೈ ಏರ್‌ಪೋರ್ಟ್‌ನಿಂದ ವಿಮಾನ ಹಾರಾಟ ಆರಂಭಿಸಿತು. 8.40ಕ್ಕೆ ಮೊದಲ ಬಾರಿಗೆ ಲ್ಯಾಂಡಿಂಗ್ ಪ್ರಯತ್ನಿಸಿದರೂ, ಎಟಿಸಿಯಿಂದ ಕ್ಲಿಯರೆನ್ಸ್ ದೊರೆಯಲಿಲ್ಲ. 8.43ಕ್ಕೆ ಎರಡನೇ ಬಾರಿ ಲ್ಯಾಂಡಿಂಗ್ ಕ್ಲಿಯರೆನ್ಸ್ ನೀಡಲಾಯಿತು. ಆದರೆ ಆ ಕ್ಷಣದಲ್ಲಿ ವಿಮಾನದ ಸಿಬ್ಬಂದಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 8.46ಕ್ಕೆ ಬಾರಾಮತಿ ರನ್‌ವೇ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಯಿಂದ ಮೃತರ ದೇಹಗಳು ಛಿದ್ರ ಛಿದ್ರವಾಗಿದ್ದು, ಗುರುತು ಹಿಡಿಯಲು ಸಾಧ್ಯವಾಗಲಿಲ್ಲ. ಅಜಿತ್ ಪವಾರ್ ಅವರ ವಾಚ್ ಹಾಗೂ ವೈಯಕ್ತಿಕ ವಸ್ತುಗಳ ಆಧಾರದ ಮೇಲೆ ಗುರುತು ಪತ್ತೆಯಾಯಿತು. ಈ ಘಟನೆಗೆ ಕಾರಣವೇನು ಎಂಬುದು ಇನ್ನೂ ನಿಗೂಢ. “ಮೇ ಡೇ” ಕಾಲ್ ಕೂಡ ನೀಡದಿರುವುದು ತನಿಖಾಧಿಕಾರಿಗಳಿಗೆ ದೊಡ್ಡ ಪ್ರಶ್ನೆಯಾಗಿದೆ.
ನಾಳೆ ಬೆಳಗ್ಗೆ 11 ಗಂಟೆಗೆ ಬಾರಾಮತಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ. ಬಾರಾಮತಿ ವಿದ್ಯಾಪ್ರತಿಷ್ಠಾನ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಜಿತ್ ಪವಾರ್ ಅವರ ಸಂಬಂಧಿಕರು ಈಗಾಗಲೇ ಬಾರಾಮತಿಗೆ ಆಗಮಿಸುತ್ತಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಪ್ರಮುಖ ಸ್ಥಾನ ಹೊಂದಿದ್ದ ಅಜಿತ್ ಪವಾರ್ ಅವರ ಅಕಾಲಿಕ ನಿಧನವು ಮಹಾರಾಷ್ಟ್ರದ ಜನತೆಗೆ ಆಘಾತ ತಂದಿದೆ. 46 ನಿಮಿಷಗಳ ಕೊನೆಯ ಪ್ರಯಾಣ, ವಿಮಾನ ಪತನದ ನಿಗೂಢತೆ, ಹಾಗೂ ಅವರ ಕೊನೆಯ ಕ್ಷಣಗಳು, ಇವೆಲ್ಲವೂ ಈಗ ತನಿಖೆಯ ಕೇಂದ್ರಬಿಂದು. ಅಜಿತ್ ಪವಾರ್ ಅವರ ಜೀವನ, ಸೇವೆ ಹಾಗೂ ಕೊನೆಯ ಕ್ಷಣಗಳು ಜನಮನದಲ್ಲಿ ಸದಾ ನೆನಪಾಗುತ್ತವೆ. ಈ ದುರಂತವು ಕೇವಲ ರಾಜಕೀಯವಲ್ಲ, ಮಾನವೀಯತೆಯ ನಷ್ಟವಾಗಿದೆ.