Apr 5, 2026 Languages : ಕನ್ನಡ | English

ಪತ್ನಿಯ ಅಕ್ರಮ ಸಂಬಂಧಕ್ಕೆ ಬಲಿಯಾದ ಪತಿ - ಎಣ್ಣೆ ಪಾರ್ಟಿ ಹೆಸರಲ್ಲಿ ನಡೆದ ಕಿರಾತಕ ಸಂಚಿನ ಕರಾಳ ಕಥೆ ಇಲ್ಲಿದೆ!!

ಪ್ರೀತಿ ಎನ್ನುವುದು ಮನುಷ್ಯನನ್ನು ದೇವನನ್ನಾಗಿ ಮಾಡುತ್ತದೆ ಎನ್ನುತ್ತಾರೆ, ಆದರೆ ಅದೇ ಪ್ರೀತಿ ಹಾದಿ ತಪ್ಪಿದರೆ ಮನುಷ್ಯ ಮೃಗವಾಗುವುದಕ್ಕೆ ಈ ಘಟನೆಯೇ ಸಾಕ್ಷಿ. ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಈ ಬೆಚ್ಚಿಬೀಳಿಸುವ ಘಟನೆ ಈಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡ ಬಂದ ಗಂಡನನ್ನು ಹೆಂಡತಿಯೇ ತನ್ನ ಪ್ರೇಮಿಯ ಕೈಯಲ್ಲಿ ಕೊಲೆ ಮಾಡಿಸಿರುವ ಕರಾಳ ಸತ್ಯ ಬಯಲಾಗಿದೆ.

ಆಗ್ರಾ ಪೊಲೀಸರ ಚಾಣಾಕ್ಷ ತನಿಖೆಗೆ ಸಿಕ್ಕಿತು ಬಿಗ್ ಸಕ್ಸಸ್
ಆಗ್ರಾ ಪೊಲೀಸರ ಚಾಣಾಕ್ಷ ತನಿಖೆಗೆ ಸಿಕ್ಕಿತು ಬಿಗ್ ಸಕ್ಸಸ್

ಬೆಚ್ಚಿಬೀಳಿಸಿದ ಅರ್ಧ ಸುಟ್ಟ ಶವ

ಏಪ್ರಿಲ್ 1ರ ರಾತ್ರಿ ಆಗ್ರಾದ ಸೈಯಾನ್ ಪ್ರದೇಶದ ಹೊಲವೊಂದರಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿದ್ದ ಪುರುಷನ ಶವ ಪತ್ತೆಯಾಗಿತ್ತು. ಮುಖ ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದರಿಂದ ಪೊಲೀಸರಿಗೆ ಅದು ಯಾರ ಶವ ಎಂದು ಪತ್ತೆ ಮಾಡುವುದು ದೊಡ್ಡ ತಲೆನೋವಾಗಿತ್ತು. ಆದರೆ, ಆತನ ಕೈ ಮೇಲಿದ್ದ ಒಂದು 'ಟ್ಯಾಟೂ' (ಹಚ್ಚೆ) ಪೊಲೀಸರ ಕೆಲಸವನ್ನು ಸುಲಭ ಮಾಡಿತು. ಆ ಹಚ್ಚೆಯ ಆಧಾರದ ಮೇಲೆ ಮೃತಪಟ್ಟ ವ್ಯಕ್ತಿ ಲೋಕೇಂದ್ರ ಎಂದು ಗುರುತಿಸಲಾಯಿತು.

ಲೋಕೇಂದ್ರ ಮನೆಗೆ ಬಾರದೇ ಇದ್ದಾಗ ಆತನ ಸಹೋದರ ಪೊಲೀಸರಿಗೆ ದೂರು ನೀಡಿದ್ದ. ಲೋಕೇಂದ್ರ ಕೊನೆಯದಾಗಿ ಮಹೇಶ್ ಪ್ರಜಾಪತಿ ಎಂಬುವವನ ಜೊತೆ ಕಾಣಿಸಿಕೊಂಡಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪ್ರಕರಣದ ಗಂಭೀರತೆ ಅರಿತ ಪೊಲೀಸರು ಐದು ಪ್ರತ್ಯೇಕ ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಿದರು. ಕೊಲೆ ನಡೆದ ಜಾಗದಲ್ಲಿ ಸಿಕ್ಕ ಮದ್ಯದ ಬಾಟಲಿಗಳು ಮತ್ತು ಕೆಲವು ಕಾಗದದ ತುಂಡುಗಳು ಪೊಲೀಸರಿಗೆ ಮಹತ್ವದ ಸುಳಿವು ನೀಡಿದವು.

ಪೊಲೀಸರು ಲೋಕೇಂದ್ರನ ಪತ್ನಿ, ಆಕೆಯ ಪ್ರಿಯಕರ ಮಹೇಶ್ ಮತ್ತು ಆತನ ಗೆಳೆಯ ಧರ್ಮವೀರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂತು. ಮಹೇಶ್ ಮತ್ತು ಲೋಕೇಂದ್ರನ ಪತ್ನಿಯ ನಡುವೆ ಕಳೆದ ಹಲವು ದಿನಗಳಿಂದ ಅಕ್ರಮ ಸಂಬಂಧವಿತ್ತು. ಇತ್ತೀಚೆಗಷ್ಟೇ ಈ ವಿಷಯ ಲೋಕೇಂದ್ರನಿಗೆ ತಿಳಿದುಬಂದಿತ್ತು. ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ದೊಡ್ಡ ಜಗಳ ನಡೆದಿತ್ತು. ತನ್ನ ಸುಖಕ್ಕೆ ಅಡ್ಡಿಯಾಗುತ್ತಿರುವ ಗಂಡನನ್ನು ಲೋಕೇಂದ್ರನ ಪತ್ನಿಯೇ ದಾರಿಯಿಂದ ತಪ್ಪಿಸಲು ಸ್ಕೆಚ್ ಹಾಕಿದ್ದಳು.

ಎಣ್ಣೆ ಪಾರ್ಟಿ ಹೆಸರಲ್ಲಿ ಕಿರಾತಕ ಸಂಚು

ಯೋಜನೆಯಂತೆ ಲೋಕೇಂದ್ರ ಮನೆಯಿಂದ ಹೊರಬಂದ ತಕ್ಷಣ ಆತನ ಪತ್ನಿ ಪ್ರಿಯಕರ ಮಹೇಶ್‌ಗೆ ಫೋನ್ ಮಾಡಿ ಮಾಹಿತಿ ನೀಡಿದ್ದಳು. ದಾರಿಯಲ್ಲಿ ಲೋಕೇಂದ್ರನನ್ನು ಭೇಟಿಯಾದ ಮಹೇಶ್, ಪ್ರೀತಿಯಿಂದ ಮಾತನಾಡಿಸಿ ತನ್ನ ಗೆಳೆಯ ಧರ್ಮವೀರ್ ಜೊತೆ ಸೇರಿ ಪಾರ್ಟಿ ಮಾಡೋಣ ಎಂದು ಹೊಲಕ್ಕೆ ಕರೆದುಕೊಂಡು ಹೋಗಿದ್ದ.

ಮೂವರೂ ಸೇರಿ ಮದ್ಯ ಕುಡಿಯಲು ಕುಳಿತಾಗ, ಲೋಕೇಂದ್ರನಿಗೆ ಫುಲ್ ಅಮಲೇರುವಂತೆ ಮಾಡಿದ್ದಾರೆ. ನಂತರ ಮಹೇಶ್ ಮತ್ತು ಧರ್ಮವೀರ್ ಸೇರಿ ಲೋಕೇಂದ್ರನ ಕುತ್ತಿಗೆ ಹಿಸುಕಿ ಪ್ರಜ್ಞೆ ತಪ್ಪಿಸಿದ್ದಾರೆ. ಆತ ಸತ್ತಿದ್ದಾನೆ ಎಂದು ಖಚಿತಪಡಿಸಿಕೊಂಡ ಮೇಲೆ ಪೆಟ್ರೋಲ್ ಸುರಿದು, ಗೋಧಿಯ ಮೂಟೆಗಳನ್ನು ಮೇಲೆ ಹಾಕಿ ಬೆಂಕಿ ಹಚ್ಚಿದ್ದಾರೆ. ಶವ ಸಂಪೂರ್ಣ ಸುಟ್ಟು ಹೋದರೆ ಯಾರೂ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂಬುದು ಇವರ ಪ್ಲಾನ್ ಆಗಿತ್ತು.

ಕಿರಾತಕರು ಏನೇ ಪ್ಲಾನ್ ಮಾಡಿದರೂ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದಕ್ಕೆ ಈ ಕೇಸ್ ಸಾಕ್ಷಿ. ಶವದ ಮುಖ ಸುಟ್ಟಿದ್ದರೂ ಕೈ ಮೇಲಿದ್ದ ಹಚ್ಚೆ ಪೊಲೀಸರಿಗೆ ದಾರಿದೀಪವಾಯಿತು. ಸದ್ಯ ಪೊಲೀಸರು ಲೋಕೇಂದ್ರನ ಪತ್ನಿ ಸೇರಿ ಮೂವರನ್ನೂ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.

ಒಂದು ಕ್ಷಣದ ಸುಖಕ್ಕಾಗಿ ಹತ್ತಾರು ವರ್ಷ ಜೊತೆಗಿದ್ದ ಗಂಡನನ್ನೇ ಕೊಲೆ ಮಾಡಿಸಿದ ಈ ಮಹಿಳೆಯ ಕ್ರೌರ್ಯಕ್ಕೆ ಆಗ್ರಾ ಜನತೆ ಬೆಚ್ಚಿಬಿದ್ದಿದ್ದಾರೆ. ಸದ್ಯ ಮೂವರೂ ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ.