ಸೋಷಿಯಲ್ ಮೀಡಿಯಾದಲ್ಲಿ ಸದಾ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಬಗ್ಗೆ ಮುಕ್ತವಾಗಿ ಧ್ವನಿ ಎತ್ತುವ ನಟ ಕಿಶೋರ್ ಕುಮಾರ್, ಈಗ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯೊಂದಕ್ಕೆ ತಮ್ಮದೇ ಸ್ಟೈಲ್‌ನಲ್ಲಿ ಸಖತ್ ಇಂಟರೆಸ್ಟಿಂಗ್ ಆಗಿ ಟಾಂಗ್ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಅವರು ದೇಶದ ಜನರಿಗೆ ನೀಡಿದ್ದ ಕೆಲವು ಸಲಹೆಗಳನ್ನು ಅಣಕಿಸಿರೋ ಕಿಶೋರ್, ಫೇಸ್‌ಬುಕ್‌ನಲ್ಲಿ ಮಾಡಿರೋ ಒಂದು ಪೋಸ್ಟ್ ಈಗ ಇಂಟರ್‌ನೆಟ್‌ನಲ್ಲಿ ಭಾರಿ ಹಲ್‌ಚಲ್ ಸೃಷ್ಟಿಸಿದೆ.
ಪ್ರಧಾನಿ ಮೋದಿ ಜನರಿಗೆ ಹೇಳಿದ್ದೇನು?
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕತೆ ಮತ್ತು ಸಂಪನ್ಮೂಲಗಳ ಉಳಿತಾಯದ ಬಗ್ಗೆ ಮಾತನಾಡುತ್ತಾ ಜನರಿಗೆ ಕೆಲವು ಮನವಿಗಳನ್ನು ಮಾಡಿದ್ದರು. "ಜನರು ಚಿನ್ನ ಖರೀದಿಸುವುದನ್ನು ಕಮ್ಮಿ ಮಾಡಬೇಕು, ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ತರಹದ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯನ್ನು ಮಿತಿಗೊಳಿಸಬೇಕು. ಅಷ್ಟೇ ಅಲ್ಲ, ಸುಮ್ಮನೆ ವಿದೇಶ ಪ್ರವಾಸ ಮಾಡುವುದನ್ನು ಕಡಿಮೆ ಮಾಡಿ, ಸಾಧ್ಯವಾದಷ್ಟು ವರ್ಕ್ ಫ್ರಂ ಹೋಮ್ (WFH) ಸಂಸ್ಕೃತಿಯನ್ನು ರೂಢಿಸಿಕೊಳ್ಳಿ" ಎಂದು ಹೇಳಿದ್ದರು. ಪ್ರಧಾನಿಯವರ ಈ ಹೇಳಿಕೆಯೇ ಈಗ ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
"ಇನ್ಮುಂದೆ ಉಸಿರಾಡೋದನ್ನೂ ಕಮ್ಮಿ ಮಾಡಿ ಅಂದ್ಬಿಡ್ತಾರೆ!"
ಪ್ರಧಾನಿ ಅವರ ಈ ಲಿಸ್ಟ್ ನೋಡಿ ಸುಮ್ಮನಿರದ ನಟ ಕಿಶೋರ್, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮೋದಿ ಅವರ ಕಾಲೆಳೆದಿದ್ದಾರೆ. "ಮುಂದಿನ ದಿನಗಳಲ್ಲಿ ಈ ನಾನ್-ಬಯಲಾಜಿಕಲ್ (ದೈವೀ ಸಂಭೂತ) ಸರ್ಕಾರದಿಂದ ಇಂಥದ್ದೊಂದು ಪ್ರಕಟಣೆ ಬಂದರೂ ಆಶ್ಚರ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ.
ಕಿಶೋರ್ ಪೋಸ್ಟ್‌ನ ಅಸಲಿ ಪಂಚ್: "ನಮ್ಮ ಸರ್ಕಾರ ಹಸ್ದೇವ್ ಕಾಡುಗಳಿಂದ ಹಿಡಿದು ನಿಕೋಬಾರ್ ದ್ವೀಪಗಳವರೆಗೆ ಇರೋ ಎಲ್ಲಾ ಕಾಡುಗಳನ್ನು ಮಿಸ್ಟರ್ 'ಎ' (ಅದಾನಿ) ಗೆ ಮಾರಾಟ ಮಾಡೋ ಬ್ಯುಸಿಯಲ್ಲಿದೆ. ಇಡೀ ಭಾರತವನ್ನು ಜಗತ್ತಿನಲ್ಲೇ ಅತ್ಯಂತ ಕಲುಷಿತ ದೇಶವನ್ನಾಗಿ ಮಾಡಿ, ಮಾಲಿನ್ಯ ಕಂಟ್ರೋಲ್ ಮಾಡೋಕೆ ಆಗದೇ ಇರೋದ್ರಿಂದ... ಇನ್ಮುಂದೆ ಸಾರ್ವಜನಿಕರು ಶೇಕಡಾ 25 ರಷ್ಟು ಉಸಿರಾಟವನ್ನು ಕಡಿಮೆ ಮಾಡಿಕೊಂಡು ದೇಶಭಕ್ತಿ ಪ್ರದರ್ಶಿಸಬೇಕು ಎಂದು ಸರ್ಕಾರ ಆರ್ಡರ್ ಮಾಡಿದ್ರೂ ಮಾಡಬಹುದು!" ಎಂದು ಭರ್ಜರಿಯಾಗಿ ಕಾಲೆಳೆದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಫೈಟ್!
ದೇಶದ ಕಾಡುಗಳನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಧಾರೆ ಎರೆಯಲಾಗುತ್ತಿದೆ ಮತ್ತು ಮಾಲಿನ್ಯ ತಡೆಯಲು ಸರ್ಕಾರ ವಿಫಲವಾಗಿದೆ ಅನ್ನೋ ಅರ್ಥದಲ್ಲಿ ಕಿಶೋರ್ ಮಾಡಿರೋ ಈ ಪೋಸ್ಟ್ ಸದ್ಯಕ್ಕೆ ಫುಲ್ ಟ್ರೆಂಡಿಂಗ್‌ನಲ್ಲಿದೆ. ಕಿಶೋರ್ ಅವರ ಈ ಖಡಕ್ ವ್ಯಂಗ್ಯವನ್ನು ನೋಡಿ ನೆಟ್ಟಿಗರು ಎರಡು ಭಾಗ ಆಗಿದ್ದಾರೆ.
ಒಂದು ಕಡೆ ಕಿಶೋರ್ ಬೆಂಬಲಿಗರು, "ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಪೆಟ್ರೋಲ್, ಚಿನ್ನ ತಗೋಬೇಡಿ ಅನ್ನೋ ಸರ್ಕಾರ, ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮಾತ್ರ ಎಲ್ಲಾ ಸೌಲತ್ತು ಕೊಡ್ತಿದೆ. ಕಿಶೋರ್ ಅವರು ಸತ್ಯವನ್ನೇ ಬಿಚ್ಚಿಟ್ಟಿದ್ದಾರೆ" ಅಂತ ಕಮೆಂಟ್ ಮಾಡ್ತಿದ್ದಾರೆ. ಇನ್ನೊಂದೆಡೆ ಮೋದಿ ಅಭಿಮಾನಿಗಳು, "ದೇಶದ ಒಳಿತಿಗಾಗಿ ಪ್ರಧಾನಿ ಹೇಳಿರೋ ಒಳ್ಳೆಯ ಮಾತುಗಳನ್ನು ಈ ರೀತಿ ತಮಾಷೆ ಮಾಡುವುದು ಸರಿಯಲ್ಲ" ಎಂದು ಕಿಶೋರ್ ವಿರುದ್ಧ ಗರಂ ಆಗಿದ್ದಾರೆ.
ಒಟ್ಟಿನಲ್ಲಿ, ಸಿನಿಮಾಗಳ ಜೊತೆಗೆ ಸಮಾಜದ ಅಂಕುಡೊಂಕುಗಳ ಮೇಲೂ ಸದಾ ಕಣ್ಣಿಡೋ ಕಿಶೋರ್ ಕುಮಾರ್ ಅವರ ಈ '25% ಉಸಿರಾಟ'ದ ಪೋಸ್ಟ್ ಸದ್ಯಕ್ಕಂತೂ ಇಡೀ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ರಾಜಕೀಯ ಜಟಾಪಟಿಗೆ ಕಾರಣವಾಗಿರೋದಂತೂ ನಿಜ!