ಸುಪ್ರೀಂಕೋರ್ಟ್‌ನಲ್ಲಿ ದರ್ಶನ್‌ಗೆ ಬಿಗ್ ಶಾಕ್ - 2027ರವರೆಗೆ ಜೈಲೇ ಗತಿ? ನ್ಯಾಯಾಧೀಶರು ನೀಡಿದ ಆ ಒಂದು 'ಡೆಡ್‌ಲೈನ್' ಇಲ್ಲಿದೆ !!

ನವದೆಹಲಿ: ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಸುಪ್ರೀಂಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. 'ಈಗಲೇ ಜಾಮೀನು ಸಿಗಬಹುದು, ದರ್ಶನ್ ಹೊರಬರಬಹುದು' ಎಂದು ಕಾದಿದ್ದ ಅಭಿಮಾನಿಗಳಿಗೆ ಸುಪ್ರೀಂ ತೀರ್ಪು ನಿರಾಸೆ ಮೂಡಿಸಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ವಿಜಯ್ ಬಿಷ್ಣೋಯಿ ಅವರಿದ್ದ ಪೀಠವು ದರ್ಶನ್ ಅವರ ಜಾಮೀನು ಅರ್ಜಿಯನ್ನು ಸದ್ಯಕ್ಕೆ ತಳ್ಳಿಹಾಕಿದ್ದು, ಕನಿಷ್ಠ ಇನ್ನೂ ಒಂದು ವರ್ಷ ಕಾಲ ಅವರು ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ.

ದರ್ಶನ್ ಅಭಿಮಾನಿಗಳ ಆಸೆಗೆ ತಣ್ಣೀರು
ದರ್ಶನ್ ಅಭಿಮಾನಿಗಳ ಆಸೆಗೆ ತಣ್ಣೀರು

ಕೋರ್ಟ್‌ನಲ್ಲಿ ನಡೆದಿದ್ದೇನು? ವಾದ-ಪ್ರತಿವಾದದ ಹೈಲೈಟ್ಸ್

ಇಂದು ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಗೆ ಬಂದಾಗ ವಕೀಲರ ನಡುವೆ ಭಾರಿ 'ವಾಗ್ಯುದ್ಧ'ವೇ ನಡೆಯಿತು. ದರ್ಶನ್ ಪರವಾಗಿ ಖ್ಯಾತ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದರೆ, ಪ್ರಾಸಿಕ್ಯೂಷನ್ ಪರವಾಗಿ ಸಿದ್ದಾರ್ಥ ಲೂತ್ರಾ ಅವರು ಪ್ರಬಲವಾಗಿ ಪ್ರತಿರೋಧ ಒಡ್ಡಿದರು.

ಜೈಲಿನಲ್ಲಿ ಸವಲತ್ತು ಸಿಗುತ್ತಿಲ್ಲ ಎಂದ ರೋಹ್ಟಗಿ:

"ದರ್ಶನ್ ಅವರನ್ನು ಇನ್ನೂ ಕ್ವಾರಂಟೈನ್ ಸೆಲ್‌ನಲ್ಲೇ ಇಡಲಾಗಿದೆ. ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲ. ಮನೆಯವರ ಜೊತೆ ಮಾತನಾಡುವಾಗಲೂ ಪೊಲೀಸರು ಪಕ್ಕದಲ್ಲೇ ಇರುತ್ತಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆ," ಎಂದು ಮುಕುಲ್ ರೋಹ್ಟಗಿ ಜೈಲು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಜಡ್ಜ್ ನೀಡಿದ ಖಡಕ್ ಉತ್ತರ:

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ನ್ಯಾಯಾಧೀಶರು, "ಜೈಲು ಅಧಿಕಾರಿಗಳ ವರದಿಯಂತೆ ದರ್ಶನ್ ಅವರಿಗೆ ಎಲ್ಲಾ ನಿಯಮಬದ್ಧ ಸವಲತ್ತುಗಳನ್ನು ನೀಡಲಾಗಿದೆ. ಈಗಾಗಲೇ ಅವರು 70 ಬಾರಿ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ಕ್ವಾರಂಟೈನ್ ಸೆಲ್‌ನಲ್ಲಿ ಏಕಿಡಲಾಗಿದೆ ಮತ್ತು ವಿಚಾರಣೆ ಯಾಕೆ ಇಷ್ಟು ಲೇಟ್ ಆಗುತ್ತಿದೆ?" ಎಂದು ಪ್ರಾಸಿಕ್ಯೂಷನ್ ಅನ್ನು ಪ್ರಶ್ನಿಸಿದರು.

60 ಪ್ರಮುಖ ಸಾಕ್ಷಿಗಳು: ಒಂದು ವರ್ಷದ 'ಡೆಡ್‌ಲೈನ್'

ವಿಚಾರಣೆ ವಿಳಂಬದ ಬಗ್ಗೆ ಜಡ್ಜ್ ಕೇಳಿದ ಪ್ರಶ್ನೆಗೆ ಪ್ರಾಸಿಕ್ಯೂಷನ್ ಪರ ವಕೀಲ ಸಿದ್ದಾರ್ಥ ಲೂತ್ರಾ ಅವರು ಸ್ಪಷ್ಟನೆ ನೀಡಿದರು. "ಈ ಪ್ರಕರಣದಲ್ಲಿ ಒಟ್ಟು 272 ಸಾಕ್ಷಿಗಳಿದ್ದಾರೆ. ಕಳೆದ 7 ತಿಂಗಳಲ್ಲಿ ಕೇವಲ 10 ಜನರ ವಿಚಾರಣೆ ಮಾತ್ರ ಮುಗಿದಿದೆ. ನಮಗೆ ಕನಿಷ್ಠ 60 ಅತ್ಯಂತ ಪ್ರಮುಖ ಸಾಕ್ಷಿಗಳ (Crucial Witnesses) ವಿಚಾರಣೆ ನಡೆಸಲು ಒಂದು ವರ್ಷ ಕಾಲಾವಕಾಶ ಬೇಕು," ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಲೂತ್ರಾ ಅವರು ರೋಹ್ಟಗಿ ಅವರಿಗೆ ತಿರುಗೇಟು ನೀಡುತ್ತಾ, "ನೀವು ಸಾಕ್ಷಿಗಳ ಮೇಲೆ ಯಾವ ರೀತಿ ಪ್ರಭಾವ ಬೀರಲು ಪ್ರಯತ್ನಿಸಿದ್ದೀರಿ ಎಂದು ನಾವಿಲ್ಲಿ ಹೇಳಲು ಹೋದರೆ, ನಿಮ್ಮ ಜಾಮೀನು ಅರ್ಜಿಯೇ ವಜಾಗಬಹುದು," ಎಂದು ಎಚ್ಚರಿಸಿದ್ದು ಕೋರ್ಟ್‌ನಲ್ಲಿ ಸಂಚಲನ ಮೂಡಿಸಿತು.

ಸುಪ್ರೀಂಕೋರ್ಟ್ ನೀಡಿದ ಆದೇಶದ ಸಾರಾಂಶ

ಎಲ್ಲಾ ವಾದಗಳನ್ನು ಆಲಿಸಿದ ನ್ಯಾಯಪೀಠವು ಈ ಕೆಳಗಿನಂತೆ ಮಹತ್ವದ ಆದೇಶ ನೀಡಿದೆ:

ವಿಳಂಬಕ್ಕೆ ತಡೆ: ಕೆಳಹಂತದ ನ್ಯಾಯಾಲಯದಲ್ಲಿ (57ನೇ CCH ಕೋರ್ಟ್) ಸಾಕ್ಷಿಗಳ ವಿಚಾರಣೆಯನ್ನು ಯಾವುದೇ ಕಾರಣಕ್ಕೂ ಅನಗತ್ಯವಾಗಿ ಮುಂದೂಡಬಾರದು.

ಒಂದು ವರ್ಷದ ಗಡುವು: ಅತ್ಯಂತ ಪ್ರಮುಖವಾಗಿರುವ 60 ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲು ಪ್ರಾಸಿಕ್ಯೂಷನ್‌ಗೆ ಸೂಚಿಸಲಾಗಿದೆ.

ಮರುಪರಿಶೀಲನೆ: ಒಂದು ವರ್ಷ ಕಳೆದ ನಂತರವೂ ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿಯದಿದ್ದರೆ, ಆಗ ದರ್ಶನ್ ಅವರು ಜಾಮೀನಿಗಾಗಿ ಮತ್ತೆ ಅರ್ಜಿ ಸಲ್ಲಿಸಬಹುದು. ಆಗ ಕೋರ್ಟ್ ಅದನ್ನು ಪರಿಶೀಲಿಸಲಿದೆ.

ದರ್ಶನ್ ಅಭಿಮಾನಿಗಳಿಗೆ ನಿರಾಸೆ

ಸುಪ್ರೀಂಕೋರ್ಟ್‌ನ ಈ ಆದೇಶದಿಂದಾಗಿ ನಟ ದರ್ಶನ್ ಅವರು ಕನಿಷ್ಠ 2027ರ ಮಧ್ಯಭಾಗದವರೆಗೂ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಕ್ಷಿಗಳ ವಿಚಾರಣೆ ನಡೆಯುವಾಗ ದರ್ಶನ್ ಹೊರಗಿದ್ದರೆ ಸಾಕ್ಷ್ಯ ನಾಶಪಡಿಸುವ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ ಎಂಬ ಪ್ರಾಸಿಕ್ಯೂಷನ್ ವಾದಕ್ಕೆ ಕೋರ್ಟ್ ಮನ್ನಣೆ ನೀಡಿದಂತಾಗಿದೆ. ಒಟ್ಟಿನಲ್ಲಿ 'ಡಿ ಬಾಸ್' ಜೈಲು ವಾಸ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

Latest News