ಮತ್ತೆ ಶುರುವಾದ ಯುದ್ಧ ವಿಮಾನಗಳ ಅಬ್ಬರ - ಇರಾನ್ ಮೇಲೆ ಅಮೆರಿಕ ದಾಳಿ ಮಾಡುವ ಸಾಧ್ಯತೆ ಹೆಚ್ಚು!!

ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸೈನಿಕ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಸುದ್ದಿಯಾಗಿದೆ. ಅಮೆರಿಕ ಯಾವುದೇ ಸಮಯದಲ್ಲಿ ಇರಾನ್ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ವರದಿಗಳು ಹೊರಬಿದ್ದಿವೆ. ಈ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಮಧ್ಯಪ್ರಾಚ್ಯ ಭಾಗಕ್ಕೆ ಕಳುಹಿಸಿದೆ. ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕ ವ್ಯಕ್ತವಾಗಿದೆ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರ: ಅಮೆರಿಕದ ಫೈಟರ್ ಜೆಟ್‌ಗಳು ಸಜ್ಜು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರ: ಅಮೆರಿಕದ ಫೈಟರ್ ಜೆಟ್‌ಗಳು ಸಜ್ಜು

ಅಮೆರಿಕದ ಎಫ್-35, ಎಫ್-16, ಎಫ್-15 ಹಾಗೂ ಎಫ್-22 ರಾಪ್ಟರ್ ಸೇರಿದಂತೆ ಹಲವು ಫೈಟರ್ ಜೆಟ್‌ಗಳನ್ನು ಈ ಪ್ರದೇಶಕ್ಕೆ ನಿಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 2003ರಲ್ಲಿ ಇರಾಕ್ ವಿರುದ್ಧ ನಡೆದ ದಾಳಿಯ ಸಂದರ್ಭಕ್ಕಿಂತಲೂ ಹೆಚ್ಚು ಸಂಖ್ಯೆಯ ಯುದ್ಧ ವಿಮಾನಗಳನ್ನು ಈ ಬಾರಿ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಅಮೆರಿಕ ದಾಳಿ ಮಾಡಲು ಸಜ್ಜಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಅಮೆರಿಕದ ಪ್ರಮುಖ ಮಾಧ್ಯಮ ವರದಿಗಳ ಪ್ರಕಾರ, ಯುದ್ಧ ವಿಮಾನಗಳನ್ನು ಹೊತ್ತ ಎರಡನೇ ವಿಮಾನವಾಹಕ ನೌಕೆ ಕೂಡ ಮಧ್ಯಪ್ರಾಚ್ಯ ಭಾಗದತ್ತ ಪ್ರಯಾಣಿಸುತ್ತಿದೆ. ಈಗಾಗಲೇ ಒಂದು ವಿಮಾನವಾಹಕ ನೌಕೆ ಅಲ್ಲಿ ನಿಯೋಜಿತವಾಗಿದ್ದು, ಮತ್ತೊಂದು ಸೇರ್ಪಡೆಯಾಗುತ್ತಿದೆ. ಇದರಿಂದ ಅಮೆರಿಕದ ನೌಕಾಪಡೆ ಶಕ್ತಿಯೂ ಹೆಚ್ಚಾಗಿದೆ.

ವರದಿಗಳ ಪ್ರಕಾರ ಅಮೆರಿಕದ ಪಡೆಗಳು ದಾಳಿ ನಡೆಸಲು ಸಿದ್ಧ ಸ್ಥಿತಿಯಲ್ಲಿದ್ದು, ಅಂತಿಮ ಅನುಮತಿಯಿಗಾಗಿ ಕಾಯುತ್ತಿವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾಳಿ ಮಾಡಲು ಅನುಮತಿ ನೀಡಿದರೆ ಕಾರ್ಯಾಚರಣೆ ಆರಂಭವಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ದಾಳಿ ಮಾಡಬೇಕೆ ಅಥವಾ ಬೇಡವೆಂಬುದನ್ನು ಇನ್ನೂ ಅಂತಿಮವಾಗಿ ನಿರ್ಧರಿಸಲಾಗಿಲ್ಲ ಎಂದು ತಿಳಿದುಬಂದಿದೆ.

ಅಮೆರಿಕ ದಾಳಿ ನಡೆಸಿದರೆ ಇರಾನ್‌ನ ಪರಮಾಣು ಸ್ಥಾವರಗಳು ಹಾಗೂ ಕ್ಷಿಪಣಿ ಸಂಗ್ರಹ ಕೇಂದ್ರಗಳನ್ನು ಗುರಿಯಾಗಿಸಬಹುದು ಎಂಬ ಅಂದಾಜು ಇದೆ. ಹಾನಿಗೊಳಗಾದ ಪರಮಾಣು ಸೌಲಭ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಉದ್ದೇಶ ಇರಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಇದರಿಂದ ಇರಾನ್‌ನ ಆಡಳಿತ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಫ್ಲೈಟ್ ಟ್ರ್ಯಾಕಿಂಗ್ ಮಾಹಿತಿಯ ಪ್ರಕಾರ, ಅಮೆರಿಕದ ಹಲವಾರು ಫೈಟರ್ ಜೆಟ್‌ಗಳು, ಕಾರ್ಗೋ ವಿಮಾನಗಳು ಮತ್ತು ಬೆಂಬಲ ವಿಮಾನಗಳು ಜೋರ್ಡಾನ್‌ನ ಮುವಾಫಾಕ್ ಸಾಲ್ಟಿ ವಾಯುನೆಲೆ ಹಾಗೂ ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಗೆ ಸ್ಥಳಾಂತರಗೊಂಡಿವೆ. ಇನ್ನೂ ಕೆಲವು ವಿಮಾನಗಳು ಮಾರ್ಗ ಮಧ್ಯದಲ್ಲಿವೆ. E-3 ಏರ್‌ಬೋರ್ನ್ ವಾರ್ನಿಂಗ್ ಸಿಸ್ಟಮ್ ಹಾಗೂ E-11 ಕಮ್ಯುನಿಕೇಷನ್ ವಿಮಾನಗಳೂ ನಿಯೋಜನೆಯಲ್ಲಿವೆ.

ಅಮೆರಿಕದ ನೌಕಾಪಡೆಯು ಮಧ್ಯಪ್ರಾಚ್ಯ ಮತ್ತು ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿ ಸುಮಾರು 13 ಹಡಗುಗಳನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಯುಎಸ್ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆ ಸೇರಿದಂತೆ ಹಲವು ವಿಧ್ವಂಸಕ ನೌಕೆಗಳು ಅಲ್ಲಿ ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ಯುಎಸ್ಎಸ್ ಜೆರಾಲ್ಡ್ ಆರ್. ಫೋರ್ಡ್ ಮತ್ತು ಇನ್ನಷ್ಟು ನೌಕೆಗಳು ಕೂಡ ಈ ಪ್ರದೇಶದತ್ತ ಸಾಗುತ್ತಿವೆ. ಈ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಆತಂಕವನ್ನು ಹೆಚ್ಚಿಸಿವೆ ಎನ್ನಬಹುದು.  

Latest News