ವಿಶ್ವದ ದೊಡ್ಡಣ್ಣ ಅಮೆರಿಕ ಮತ್ತು ಪಟ್ಟು ಬಿಡದ ಇರಾನ್ ನಡುವಿನ ಜಗಳ ಈಗ ಬೀದಿಗೆ ಬಂದಿದೆ. ಅಮೆರಿಕ ಕೊಟ್ಟ 'ಕದನ ವಿರಾಮ'ದ ಆಫರ್ ಅನ್ನು ಇರಾನ್ ಕಸದ ಬುಟ್ಟಿಗೆ ಎಸೆದಿದ್ದೇ ತಡ, ಡೊನಾಲ್ಡ್ ಟ್ರಂಪ್ ಕೆಂಡಾಮಂಡಲವಾಗಿದ್ದಾರೆ. "ಮಾತುಕತೆ ಮುಗಿಯಿತು, ಇನ್ನು ಏನಿದ್ದರೂ ಆಟ ಆನ್" ಎಂಬ ರೇಂಜ್‌ಗೆ ಅಮೆರಿಕ ಈಗ ಯುದ್ಧದ ಪ್ಲ್ಯಾನ್ ರೆಡಿ ಮಾಡಿಕೊಳ್ಳುತ್ತಿದೆ.
ಅಮೆರಿಕ ಸುಮ್ಮನೆ ಕೂರುವ ಜಾಯಮಾನದ್ದಲ್ಲ. ಈ ಬಾರಿ ಇರಾನ್ ಬೆನ್ನೆಲುಬು ಮುರಿಯಲು ಮೂರು ದಾರಿಗಳನ್ನು ಹುಡುಕಿಕೊಂಡಿದೆ:
ತೈಲ ಕೇಂದ್ರಗಳ ಮೇಲೆ ಕಣ್ಣು: ಇರಾನ್ ಬದುಕುತ್ತಿರುವುದೇ ತೈಲ ರಫ್ತಿನಿಂದ. ಅದರ ಮೇನ್ ಹಬ್ ಆಗಿರುವ 'ಖಾರ್ಗ್' ಮತ್ತು 'ಲಾರಕ್' ದ್ವೀಪಗಳನ್ನು ವಶಪಡಿಸಿಕೊಳ್ಳಲು ಅಮೆರಿಕ ಹವಣಿಸುತ್ತಿದೆ.
ಭೂದಾಳಿ ಮತ್ತು ಯುರೇನಿಯಂ ಬೇಟೆ: ಕೇವಲ ಬಾಂಬ್ ಹಾಕುವುದಷ್ಟೇ ಅಲ್ಲ, ನೇರವಾಗಿ ಇರಾನ್ ಮಣ್ಣಿಗೆ ಸೈನಿಕರನ್ನು ಇಳಿಸಿ ಅಲ್ಲಿರುವ ಯುರೇನಿಯಂ ಅನ್ನು ವಶಕ್ಕೆ ಪಡೆಯುವ ಪ್ಲ್ಯಾನ್ ಕೂಡ ಇದೆ ಎನ್ನಲಾಗುತ್ತಿದೆ.
ದ್ವೀಪಗಳ ವಶ: ಪರ್ಷಿಯನ್ ಕೊಲ್ಲಿಯಲ್ಲಿ ಹಡಗುಗಳ ಮೇಲೆ ಕಣ್ಣಿಡುವ ಅಬು ಮುಸಾ ದ್ವೀಪವನ್ನು ತನ್ನ ಕಂಟ್ರೋಲ್‌ಗೆ ತರಲು ಅಮೆರಿಕ ರೆಡಿಯಾಗಿದೆ.
ಟ್ರಂಪ್ ಕಿಡಿ: "ಬಾಲ ಬಿಚ್ಚಬೇಡಿ!"
ತಮ್ಮ ಎಂದಿನ ಖಡಕ್ ಸ್ಟೈಲ್‌ನಲ್ಲಿ ಮಾತನಾಡಿರುವ ಟ್ರಂಪ್, "ನೋಡಿ ಇರಾನ್‌ನವರೇ, ಕಾಲ ಮಿಂಚುವ ಮುನ್ನ ಎಚ್ಚೆತ್ತುಕೊಳ್ಳಿ. ಒಮ್ಮೆ ಯುದ್ಧ ಶುರುವಾದರೆ ಮತ್ತೆ ಹಿಂದಕ್ಕೆ ಹೋಗಲು ದಾರಿಯೇ ಇರುವುದಿಲ್ಲ. ಆಮೇಲೆ ಪರಿಸ್ಥಿತಿ ಅಷ್ಟೊಂದು ಸುಂದರವಾಗಿರುವುದಿಲ್ಲ" ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಟ್ರಂಪ್ ಪ್ರಕಾರ, ಇರಾನ್ ಒಳಗೊಳಗೇ ಭಯಬಿದ್ದಿದೆ, ಆದರೆ ಒಪ್ಪಂದಕ್ಕೆ ಬಂದರೆ ತಮ್ಮದೇ ಜನ ತಮ್ಮನ್ನು ಕೊಲ್ಲಬಹುದು ಎಂಬ ಹೆದರಿಕೆ ಅವರಲ್ಲಿದೆಯಂತೆ! "ಇರಾನ್‌ನವರು ಚೆನ್ನಾಗಿ ಜಗಳ ಮಾಡಲ್ಲ, ಆದರೆ ಚೆನ್ನಾಗಿ ಡೀಲ್ ಮಾಡ್ತಾರೆ" ಎಂದು ಟ್ರಂಪ್ ಕಿಚಾಯಿಸಿದ್ದಾರೆ.
ಇರಾನ್‌ನ 'ಸಮುದ್ರ' ತಂತ್ರ!
ಅಮೆರಿಕ ಹೀಗೆ ಅಬ್ಬರಿಸುತ್ತಿದ್ದರೆ ಇರಾನ್ ಕೂಡ ಸುಮ್ಮನೆ ಕೂತಿಲ್ಲ. "ನೀವು ನಮ್ಮ ತೈಲ ದ್ವೀಪ ಮುಟ್ಟಿದರೆ, ನಾವು ಇಡೀ ವಿಶ್ವದ ವ್ಯಾಪಾರವನ್ನೇ ಬಂದ್ ಮಾಡ್ತೀವಿ" ಎಂದು ಇರಾನ್ ಗುಡುಗಿದೆ. ಈಗಾಗಲೇ 'ಹೋರ್ಮುಜ್' ಜಲಸಂಧಿಯ ಮೇಲೆ ಕಣ್ಣಿಟ್ಟಿರುವ ಇರಾನ್, ಈಗ 'ಬಾಬ್ ಅಲ್ ಮಂಡೆಬ್' ಎಂಬ ಮತ್ತೊಂದು ಮುಖ್ಯ ಸಮುದ್ರ ಮಾರ್ಗವನ್ನು ಬಂದ್ ಮಾಡುವ ಬೆದರಿಕೆ ಹಾಕಿದೆ.
ಇದನ್ನು ಅರೇಬಿಕ್‌ನಲ್ಲಿ 'ಕಣ್ಣೀರಿನ ಬಾಗಿಲು' ಎನ್ನಲಾಗುತ್ತದೆ. ಇದು ಕೆಂಪು ಸಮುದ್ರ ಮತ್ತು ಅರಬ್ಬೀ ಸಮುದ್ರವನ್ನು ಜೋಡಿಸುವ ಕಿರು ದಾರಿ. ಪ್ರಪಂಚದ ಶೇಕಡಾ 12ರಷ್ಟು ತೈಲ ಮತ್ತು ಗ್ಯಾಸ್ ಇದೇ ದಾರಿಯಲ್ಲಿ ಹೋಗಬೇಕು. ಒಂದು ವೇಳೆ ಇರಾನ್ ತನ್ನ ಬೆಂಬಲಿಗ ಹೌತಿ ಬಂಡುಕೋರರನ್ನು ಬಿಟ್ಟು ಇಲ್ಲಿ ಹಡಗುಗಳ ಮೇಲೆ ದಾಳಿ ಮಾಡಿಸಿದರೆ, ಇಡೀ ವಿಶ್ವದ ಪೆಟ್ರೋಲ್ ಬೆಲೆ ಗಗನಕ್ಕೇರುವುದು ಗ್ಯಾರಂಟಿ.
ಈ ಜಲಸಂಧಿ ಬಂದ್ ಆದರೆ ಹಡಗುಗಳು ಆಫ್ರಿಕಾವನ್ನು ಸುತ್ತಿ ಬರಬೇಕಾಗುತ್ತದೆ. ಇದರಿಂದ 20 ದಿನದ ಪ್ರಯಾಣ 40 ದಿನಕ್ಕೆ ಏರುತ್ತದೆ. ಅಂದರೆ ನೀವು ಆರ್ಡರ್ ಮಾಡುವ ವಸ್ತುಗಳಿಂದ ಹಿಡಿದು ಪೆಟ್ರೋಲ್ ವರೆಗೆ ಎಲ್ಲದರ ಬೆಲೆಯೂ ದುಪ್ಪಟ್ಟಾಗುವ ಅಪಾಯವಿದೆ.
ಅಮೆರಿಕದ ಸಿಟ್ಟು ಮತ್ತು ಇರಾನ್‌ನ ಹಠಮಾರಿತನ ಇಡೀ ಜಗತ್ತನ್ನು ಮತ್ತೊಂದು ದೊಡ್ಡ ಯುದ್ಧದ ಅಂಚಿಗೆ ತಂದು ನಿಲ್ಲಿಸಿದೆ. ಮುಂದಿನ ದಿನಗಳಲ್ಲಿ ಟ್ರಂಪ್ ಪ್ಲ್ಯಾನ್ ವರ್ಕ್ ಆಗುತ್ತಾ ಅಥವಾ ಇರಾನ್ ತನ್ನ ಸಮುದ್ರ ತಂತ್ರದಿಂದ ಜಗತ್ತನ್ನು ಬೆದರಿಸುತ್ತಾ ಕಾದು ನೋಡಬೇಕು.