Apr 11, 2026 Languages : ಕನ್ನಡ | English

"ಇದು ನಮ್ಮ ಶಬ್ದಕ್ಕೆ ಸಿಕ್ಕ ಜಯ" - ಕದನ ವಿರಾಮದ ಬಗ್ಗೆ ಇರಾನ್ ಅಧ್ಯಕ್ಷರ ಖಡಕ್ ಹೇಳಿಕೆ ಇಲ್ಲಿದೆ ನೋಡಿ!!

ಕಳೆದ ಕೆಲವು ದಿನಗಳಿಂದ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೀತಿರೋ ಜಗಳ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಅದರಲ್ಲೂ ಇರಾನ್‌ನ ತೈಲ ಕೇಂದ್ರಗಳ ಮೇಲೆ ದಾಳಿಯಾದ ಮೇಲೆ ಪರಿಸ್ಥಿತಿ ತುಂಬಾನೇ ಕೈಮೀರಿ ಹೋಗಿತ್ತು. ಆದ್ರೆ ಈಗೊಂದು ಮುಖ್ಯ ವಿಚಾರ ಹೊರಬಂದಿದೆ—ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಅಂದ್ರೆ ಸದ್ಯಕ್ಕೆ ಯುದ್ಧಕ್ಕೆ ಸಣ್ಣದೊಂದು ಬ್ರೇಕ್ ಸಿಕ್ಕಿದೆ.

ಜಾಗತಿಕ ತೈಲ ಬಿಕ್ಕಟ್ಟಿಗೆ ತಾತ್ಕಾಲಿಕ ಮುಕ್ತಿ
ಜಾಗತಿಕ ತೈಲ ಬಿಕ್ಕಟ್ಟಿಗೆ ತಾತ್ಕಾಲಿಕ ಮುಕ್ತಿ

ವಿಶ್ವದ ಬಹುತೇಕ ಪೆಟ್ರೋಲ್ ಮತ್ತು ಗ್ಯಾಸ್ ಸಾಗಾಟವಾಗುವ ಹೋರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿತ್ತು. ಇದರಿಂದಾಗಿ ಸುಮಾರು 800 ಹಡಗುಗಳು ಸಮುದ್ರದ ಮಧ್ಯದಲ್ಲೇ ಸಿಕ್ಕಿಹಾಕಿಕೊಂಡಿದ್ದವು. ಈಗ ಒಪ್ಪಂದದ ಪ್ರಕಾರ, ಇರಾನ್ ಈ ದಾರಿಯನ್ನು ತೆರೆದಿದೆ. ಈಗಾಗಲೇ ಗ್ರೀಸ್‌ನ 'ಎನ್‌ಜೆ ಅರ್ಥ್' ಮತ್ತು ಲೈಬೀರಿಯಾದ 'ಡೇಟೋನಾ ಬೀಚ್' ಎಂಬ ಎರಡು ದೊಡ್ಡ ಹಡಗುಗಳು ಈ ದಾರಿಯ ಮೂಲಕ ಸುರಕ್ಷಿತವಾಗಿ ದಾಟಿವೆ. ಆದ್ರೂ ಶಿಪ್ಪಿಂಗ್ ಕಂಪನಿಗಳು ಇನ್ನು ಸ್ವಲ್ಪ ಭಯದಲ್ಲೇ ಇವೆ, ಯಾಕಂದ್ರೆ ಪರಿಸ್ಥಿತಿ ಯಾವಾಗ ಬೇಕಾದ್ರೂ ಬದಲಾಗಬಹುದು.

ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಈ ಕದನ ವಿರಾಮದ ಬಗ್ಗೆ ಮಾತನಾಡುತ್ತಾ, "ಇದು ಇರಾನ್ ಅಂದುಕೊಂಡಂತೆಯೇ ನಡೆದಿದೆ, ನಮ್ಮ ಶಬ್ದಕ್ಕೆ ಬೆಲೆ ಸಿಕ್ಕಿದೆ. ಇದು ನಮ್ಮ ಹುತಾತ್ಮ ನಾಯಕರ ತ್ಯಾಗದ ಫಲ," ಅಂದಿದ್ದಾರೆ. ಅಷ್ಟೇ ಅಲ್ಲದೆ, ಡಿಪ್ಲೊಮಸಿ ಇರಲಿ ಅಥವಾ ಯುದ್ಧ ಭೂಮಿ ಇರಲಿ, ನಾವು ಯಾವಾಗಲೂ ಸಿದ್ಧ ಅಂತ ಖಡಕ್ ಆಗಿ ಹೇಳಿದ್ದಾರೆ.

ಹಮಾಸ್ ಮತ್ತು ಹಿಜ್ಬುಲ್ಲಾ ಪ್ರತಿಕ್ರಿಯೆ:
ಇತ್ತ ಹಮಾಸ್ ಸಂಘಟನೆ ಈ ಒಪ್ಪಂದವನ್ನು ಸಂಭ್ರಮಿಸಿದೆ. ಅಮೆರಿಕದ ಪ್ರಭಾವ ಈ ಭಾಗದಲ್ಲಿ ಕಡಿಮೆಯಾಗುತ್ತಿದೆ ಅನ್ನೋದು ಅವರ ವಾದ. ಇನ್ನು ಲೆಬನಾನ್‌ನ ಹಿಜ್ಬುಲ್ಲಾ ತನ್ನ ಜನರಿಗೆ ಒಂದು ಎಚ್ಚರಿಕೆ ನೀಡಿದೆ. "ಯುದ್ಧ ನಿಂತಿದೆ ಅಂತ ಈಗಲೇ ಯಾರೂ ಮನೆಗೆ ವಾಪಸ್ ಹೋಗಬೇಡಿ, ಅಧಿಕೃತವಾಗಿ ಪೂರ್ತಿ ಕದನ ವಿರಾಮ ಘೋಷಣೆಯಾಗುವವರೆಗೂ ಸುಮ್ಮನಿರಿ," ಅಂತ ಹೇಳಿದೆ. ಯಾಕಂದ್ರೆ ಇಸ್ರೇಲ್ ಈ ಒಪ್ಪಂದ ಲೆಬನಾನ್‌ಗೆ ಅನ್ವಯಿಸಲ್ಲ ಅಂತ ಮೊದಲೇ ಹೇಳಿದೆ.

ಆದ್ರೆ ಒಂದು ಆತಂಕದ ವಿಷಯ ಅಂದ್ರೆ, ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಇರಾನ್, ಕುವೈತ್ ಮತ್ತು ಯುಎಇ (UAE) ಮೇಲೆ ದಾಳಿ ಮಾಡಿದೆ ಎಂಬ ಸುದ್ದಿಗಳೂ ಓಡಾಡುತ್ತಿವೆ. ತನ್ನ ತೈಲ ಕೇಂದ್ರಗಳ ಮೇಲಾದ ದಾಳಿಗೆ ಇರಾನ್ ಈ ರೀತಿ ಪ್ರತಿಕ್ರಿಯಿಸಿದೆ ಎನ್ನಲಾಗುತ್ತಿದೆ.

Latest News