ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದಲ್ಲಿ ಭಾನುವಾರ ಮುಂಜಾನೆ ನಡೆದ ಭೀಕರ ಗುಂಡಿನ ದಾಳಿಯು ಇಡೀ ಭಾರತೀಯ ಸಮುದಾಯವನ್ನು ಆಘಾತಕ್ಕೀಡು ಮಾಡಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರಲ್ಲಿ 21 ವರ್ಷದ ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿನಿ ಸವಿತಾ ಶಾನ್ ಕೂಡ ಒಬ್ಬರು. ಸವಿತಾ ಅವರು ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು.
ಭಾನುವಾರ ಮುಂಜಾನೆ ಸುಮಾರು 1:40ರ ಸುಮಾರಿಗೆ ಆಸ್ಟಿನ್‌ನ ಪ್ರಸಿದ್ಧ ಬಾರ್ 'ಬಫೋರ್ಡ್ಸ್ ಬ್ಯಾಕ್ ಯಾರ್ಡ್ ಬೀರ್ ಗಾರ್ಡನ್' ಹೊರಗಡೆ ಈ ಘಟನೆ ಸಂಭವಿಸಿದೆ. 53 ವರ್ಷದ ದಿಯಾಗ್ನೆ ಎಂಬ ವ್ಯಕ್ತಿ ಮೊದಲು ಚಲಿಸುತ್ತಿದ್ದ ಕಾರಿನಿಂದ ಗುಂಡಿನ ದಾಳಿ ನಡೆಸಿದ್ದಾನೆ. ನಂತರ ಕಾರಿನಿಂದ ಕೆಳಗಿಳಿದು ರೈಫಲ್‌ನಿಂದ ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಕೇವಲ 57 ಸೆಕೆಂಡುಗಳಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಪ್ರತಿ ದಾಳಿ ನಡೆಸಿ ಶಂಕಿತ ಆರೋಪಿಯನ್ನು ಹ*ತ್ಯೆ ಮಾಡಿದ್ದಾರೆ. ಈ ಘಟನೆಯಲ್ಲಿ ಸವಿತಾ ಮತ್ತು ಮತ್ತೊಬ್ಬ ವಿದ್ಯಾರ್ಥಿ ರೈಡರ್ ಹ್ಯಾರಿಂಗ್ಟನ್ ಸಾವನ್ನಪ್ಪಿದ್ದಾರೆ, ಹಾಗೂ 13ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಸವಿತಾ ಶಾನ್ ಅವರು ಅತ್ಯಂತ ಚುರುಕಾದ ಮತ್ತು ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಅವರು ಮ್ಯಾನೇಜ್‌ಮೆಂಟ್ ಇನ್ಫರ್ಮೇಷನ್ ಸಿಸ್ಟಮ್ಸ್ ಮತ್ತು ಎಕನಾಮಿಕ್ಸ್ ಎಂಬ ಎರಡು ವಿಷಯಗಳಲ್ಲಿ ಪದವಿ ಪಡೆಯುತ್ತಿದ್ದರು. ಇನ್ನು ಕೆಲವೇ ತಿಂಗಳುಗಳಲ್ಲಿ ಅವರು ಪದವಿ ಪಡೆಯಬೇಕಿತ್ತು. ಸವಿತಾ ಅವರ ಸಾವಿಗೆ ವಿಶ್ವವಿದ್ಯಾಲಯದ ಮುಖ್ಯಸ್ಥರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರು ಜಗತ್ತನ್ನು ಬದಲಿಸುವ ಕನಸು ಹೊತ್ತಿದ್ದ ಪ್ರತಿಭೆಯಾಗಿದ್ದರು ಎಂದು ನೆನೆದಿದ್ದಾರೆ.
ಈ ದಾಳಿಯ ಹಿಂದೆ ಭಯೋತ್ಪಾದನೆಯ ಸಂಚು ಇರಬಹುದೇ ಎಂಬ ನಿಟ್ಟಿನಲ್ಲಿ ಎಫ್‌ಬಿಐ ತನಿಖೆ ಆರಂಭಿಸಿದೆ. ಆರೋಪಿ ದಿಯಾಗ್ನೆ ಸೆನೆಗಲ್ ಮೂಲದವನಾಗಿದ್ದು, ನಂತರ ಅಮೆರಿಕದ ಪೌರತ್ವ ಪಡೆದಿದ್ದನು. ದಾಳಿಯ ಸಮಯದಲ್ಲಿ ಅವನು ಇರಾನ್ ಧ್ವಜದ ವಿನ್ಯಾಸವಿರುವ ಶರ್ಟ್ ಮತ್ತು ಧಾರ್ಮಿಕ ಘೋಷಣೆಗಳಿರುವ ಬಟ್ಟೆಯನ್ನು ಧರಿಸಿದ್ದನು ಎನ್ನಲಾಗಿದೆ. ಇತ್ತೀಚೆಗೆ ಇರಾನ್ ಮೇಲೆ ನಡೆದ ಅಮೆರಿಕ-ಇಸ್ರೇಲ್ ದಾಳಿಯ ಪ್ರತಿಕಾರವಾಗಿ ಈ ಕೃತ್ಯ ನಡೆದಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಈ ಘಟನೆಯ ನಂತರ ಟೆಕ್ಸಾಸ್ ರಾಜ್ಯದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಾಜ್ಯಪಾಲ ಗ್ರೆಗ್ ಅಬಾಟ್ ಅವರು ಮಾತನಾಡುತ್ತಾ, 'ಯಾವುದೇ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ, ನಮ್ಮ ಜನರ ರಕ್ಷಣೆಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ' ಎಂದು ಭರವಸೆ ನೀಡಿದ್ದಾರೆ. ಆಸ್ಟಿನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯ ಮೂಲದ ತಂತ್ರಜ್ಞರು ಮತ್ತು ವಿದ್ಯಾರ್ಥಿಗಳು ಈ ಘಟನೆಯಿಂದ ಆತಂಕಕ್ಕೊಳಗಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಿಚ್ಚು ಈಗ ಅಮೆರಿಕದ ಶಾಂತಿಯುತ ನಗರಗಳನ್ನೂ ತಲುಪಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಸವಿತಾ ಅವರಂತಹ ಯುವ ಪ್ರತಿಭೆಯ ಸಾವು ತುಂಬಲಾರದ ನಷ್ಟವಾಗಿದೆ.