Mar 1, 2026 Languages : ಕನ್ನಡ | English

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಭಾರಿ ಸ್ಫೋಟ - ಭಾರತೀಯರ ಜೇಬಿಗೆ ಕತ್ತರಿ ಹಾಕಲಿದೆಯೇ ಅಮೆರಿಕ-ಇರಾನ್ ವಾರ್?

ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಕಿಚ್ಚು ಈಗ ಭಾರತದ ಇಂಧನ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಭಾರತವು ತನ್ನ ದೈನಂದಿನ ಅಗತ್ಯದ ಬಹುಪಾಲು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಈ ಆಮದು ಪ್ರಕ್ರಿಯೆಯಲ್ಲಿ 'ಹಾರ್ಮುಜ್ ಜಲಸಂಧಿ' ಎಂಬ ಸಮುದ್ರ ಮಾರ್ಗವು ಅತ್ಯಂತ ನಿರ್ಣಾಯಕವಾಗಿದೆ. ಪ್ರಸ್ತುತ ನಡೆಯುತ್ತಿರುವ ಸಂಘರ್ಷದಿಂದಾಗಿ ಈ ಮಾರ್ಗದಲ್ಲಿ ಅಡಚಣೆ ಉಂಟಾಗಿದ್ದು, ಇದು ಭಾರತದ ಆರ್ಥಿಕತೆಯ ಮೇಲೆ ನೇರವಾದ ಮತ್ತು ಭೀಕರವಾದ ಪರಿಣಾಮ ಬೀರಲಿದೆ.

ಭಾರತದ ಇಂಧನ ಭದ್ರತೆಗೆ ಎದುರಾಗಿದೆಯೇ ಕಂಟಕ?
ಭಾರತದ ಇಂಧನ ಭದ್ರತೆಗೆ ಎದುರಾಗಿದೆಯೇ ಕಂಟಕ?

ಹಾರ್ಮುಜ್ ಜಲಸಂಧಿ: ಭಾರತದ ಇಂಧನ ಜೀವನಾಡಿ

ಭಾರತವು ಜಗತ್ತಿನಲ್ಲೇ ಮೂರನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾಗಿದೆ. ನಾವು ಬಳಸುವ ಒಟ್ಟು ತೈಲದಲ್ಲಿ ಸುಮಾರು ಶೇ. 85 ರಿಂದ 88 ರಷ್ಟು ಭಾಗವನ್ನು ಇತರ ದೇಶಗಳಿಂದ ತರಿಸಿಕೊಳ್ಳುತ್ತೇವೆ. ವಿಶೇಷವೆಂದರೆ, ಭಾರತಕ್ಕೆ ಬರುವ ಒಟ್ಟು ಕಚ್ಚಾ ತೈಲದ ಅರ್ಧದಷ್ಟು (ಶೇ. 50) ಪಾಲು ಈ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗಿ ಬರುತ್ತದೆ. ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಂತಹ ದೇಶಗಳಿಂದ ಪ್ರತಿದಿನ ಸುಮಾರು 26 ಲಕ್ಷ ಬ್ಯಾರೆಲ್ ತೈಲ ಈ ಮಾರ್ಗವಾಗಿ ಭಾರತಕ್ಕೆ ತಲುಪುತ್ತದೆ. ಯುದ್ಧದ ಕಾರಣದಿಂದಾಗಿ ಈ ಸಮುದ್ರ ಮಾರ್ಗದಲ್ಲಿ ಸಂಚಾರ ಬಂದ್ ಆದ್ರೆ ಅಥವಾ ವಿಳಂಬವಾದರೆ, ಭಾರತದಲ್ಲಿ ತೈಲದ ತೀವ್ರ ಅಭಾವ ಸೃಷ್ಟಿಯಾಗಲಿದೆ.

ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳು

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಂದು ಡಾಲರ್ ಏರಿಕೆಯಾದರೂ ಭಾರತದ ವಾರ್ಷಿಕ ಆಮದು ವೆಚ್ಚ ಬರೋಬ್ಬರಿ 9 ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಾಗುತ್ತದೆ. ಈಗಿನ ಯುದ್ಧದ ವಾತಾವರಣದಿಂದಾಗಿ ತೈಲ ಬೆಲೆಗಳು ಗಗನಕ್ಕೇರುತ್ತಿವೆ. ಇದು ಕೇವಲ ಪೆಟ್ರೋಲ್ ಮತ್ತು ಡೀಸೆಲ್ ದರದ ಮೇಲೆ ಮಾತ್ರವಲ್ಲದೆ, ದೇಶದ ಒಟ್ಟಾರೆ ಹಣದುಬ್ಬರದ ಮೇಲೂ ಪರಿಣಾಮ ಬೀರುತ್ತದೆ. ಸಾರಿಗೆ ವೆಚ್ಚ ದುಬಾರಿಯಾದಂತೆ ದಿನಬಳಕೆಯ ವಸ್ತುಗಳು, ತರಕಾರಿ ಮತ್ತು ದಿನಸಿ ಪದಾರ್ಥಗಳ ಬೆಲೆಗಳು ಕೂಡ ಏರಿಕೆಯಾಗಲಿವೆ. ಇದರಿಂದ ಸಾಮಾನ್ಯ ಜನರ ಬದುಕು ದುಸ್ತರವಾಗಲಿದೆ.

ರಷ್ಯಾದಿಂದ ಮಧ್ಯಪ್ರಾಚ್ಯದತ್ತ ವಾಲುತಿರುವ ಭಾರತ

ಹಿಂದೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಮಯದಲ್ಲಿ ಭಾರತವು ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ರಿಯಾಯಿತಿ ದರದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಭಾರತವು ಮತ್ತೆ ಮಧ್ಯಪ್ರಾಚ್ಯ ದೇಶಗಳತ್ತ ಮುಖ ಮಾಡಿದೆ. ಫೆಬ್ರವರಿ ತಿಂಗಳ ಅಂಕಿಅಂಶಗಳ ಪ್ರಕಾರ, ಹಾರ್ಮುಜ್ ಮಾರ್ಗದ ಮೇಲಿನ ಭಾರತದ ಅವಲಂಬನೆ ಕಳೆದ ವರ್ಷಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ಈ ಬದಲಾವಣೆಯು ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ವರದಾನವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ಏಕೆಂದರೆ ಸಂಘರ್ಷ ನಡೆಯುತ್ತಿರುವುದು ಇದೇ ಮಾರ್ಗದಲ್ಲಿ.

ಕೈಗಾರಿಕೆ ಮತ್ತು ಸಾರಿಗೆ ವಲಯಕ್ಕೆ ಪೆಟ್ಟು

ಭಾರತದ ಕೈಗಾರಿಕಾ ವಲಯ ಮತ್ತು ಸಾರಿಗೆ ವ್ಯವಸ್ಥೆಯು ಸಂಪೂರ್ಣವಾಗಿ ಕಚ್ಚಾ ತೈಲದ ಮೇಲೆ ನಿಂತಿದೆ. ಇಂಧನ ಪೂರೈಕೆಯಲ್ಲಿ ವ್ಯತ್ಯಯವಾದರೆ ಕಾರ್ಖಾನೆಗಳ ಉತ್ಪಾದನೆ ಕುಂಠಿತಗೊಳ್ಳುತ್ತದೆ ಮತ್ತು ಸರಕು ಸಾಗಣೆ ಸ್ಥಗಿತಗೊಳ್ಳುವ ಭೀತಿ ಇರುತ್ತದೆ. ಇರಾನ್ ಭಾರತದ ನೆರೆಯ ರಾಷ್ಟ್ರದಂತಿದ್ದು, ಅಲ್ಲಿನ ಅಸ್ಥಿರತೆ ಭಾರತದ ಇಂಧನ ಭದ್ರತೆಗೆ ದೊಡ್ಡ ಬೆದರಿಕೆಯೊಡ್ಡಿದೆ. ಅಮೆರಿಕ ಮತ್ತು ಇಸ್ರೇಲ್‌ನ ದಾಳಿಗಳು ಮುಂದುವರಿದರೆ, ಭಾರತವು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾದ ಅಥವಾ ಆಮದು ವೆಚ್ಚವನ್ನು ಭರಿಸಲು ಸಿದ್ಧವಾಗಬೇಕಾದ ಅನಿವಾರ್ಯತೆ ಇದೆ.

ಇರಾನ್ ಮೇಲಿನ ಈ ದಾಳಿಯು ಕೇವಲ ಎರಡು ದೇಶಗಳ ನಡುವಿನ ಯುದ್ಧವಲ್ಲ, ಇದು ಜಾಗತಿಕ ಮಾರುಕಟ್ಟೆಯ ಮೇಲೆ ಮತ್ತು ವಿಶೇಷವಾಗಿ ಭಾರತದಂತಹ ಬೆಳೆಯುತ್ತಿರುವ ಆರ್ಥಿಕತೆಯ ಮೇಲೆ ದೊಡ್ಡ ಗಾಯ ಮಾಡಲಿದೆ.

Latest News