Apr 17, 2026 Languages : ಕನ್ನಡ | English

ಸೇನಾ ಮುಖ್ಯಸ್ಥರ 24 ಗಂಟೆಗಳ ಟೆಹ್ರಾನ್ ರಹಸ್ಯ ಕಾರ್ಯಾಚರಣೆ - ಇಸ್ಲಾಮಾಬಾದ್‌ನಲ್ಲಿ ಹೈ-ವೋಲ್ಟೇಜ್ ಮೀಟಿಂಗ್!!

ಪಶ್ಚಿಮ ಏಷ್ಯಾದಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧದ ಕಿಚ್ಚನ್ನು ಆರಿಸಲು ನೆರೆರಾಷ್ಟ್ರ ಪಾಕಿಸ್ತಾನ ಈಗ ದೊಡ್ಡ ಮಟ್ಟದ ಕಸರತ್ತು ಆರಂಭಿಸಿದೆ. ಅಮೆರಿಕ ಮತ್ತು ಇರಾನ್ ದೇಶಗಳನ್ನು ಮತ್ತೆ ಮಾತುಕತೆಯ ಮೇಜಿನ ಬಳಿ ಕೂರಿಸಲು ಪಾಕಿಸ್ತಾನ ಮುಂದಿನ ವಾರ ಎರಡನೇ ಸುತ್ತಿನ ಉನ್ನತ ಮಟ್ಟದ ಸಂಧಾನ ಸಭೆಯನ್ನು ಆಯೋಜಿಸುತ್ತಿದೆ. ಈ ಯುದ್ಧದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಇದನ್ನು ತಡೆಯುವುದೇ ಈ ರಾಜತಾಂತ್ರಿಕ ಪ್ರಯತ್ನದ ಮುಖ್ಯ ಉದ್ದೇಶವಾಗಿದೆ.

ವಿಶ್ವದ ಶಾಂತಿಗಾಗಿ ಪಾಕಿಸ್ತಾನದ 'ಶಾಂತಿ ಮಂತ್ರ'
ವಿಶ್ವದ ಶಾಂತಿಗಾಗಿ ಪಾಕಿಸ್ತಾನದ 'ಶಾಂತಿ ಮಂತ್ರ'

ಹೋದ ವಾರ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಫಸ್ಟ್ ರೌಂಡ್ ಮೀಟಿಂಗ್ ಏನೋ ನಡೀತು. ಆದ್ರೆ, ಇಬ್ಬರ ನಡುವೆ ಸಮಾಧಾನಕರವಾದ ಯಾವುದೇ ಒಂದು ಗಟ್ಟಿ ಪ್ಲಾನ್ ರೆಡಿ ಆಗಿಲ್ಲ. ಹೀಗಾಗಿ ಮಾತುಕತೆ ಅರ್ಧಕ್ಕೇ ನಿಂತು ಹೋದಂತಾಗಿದೆ. ಸದ್ಯಕ್ಕಂತೂ ಎರಡೂ ದೇಶಗಳು "ಒಂದೆರಡು ವಾರ ಸುಮ್ಮನಿರೋಣ" ಅಂತ ಯುದ್ಧ ನಿಲ್ಲಿಸಿ ಗ್ಯಾಪ್ ತಗೊಂಡಿವೆ.

ಈಗ ಅಖಾಡಕ್ಕಿಳಿದಿರೋ ಪಾಕಿಸ್ತಾನ, ಈ ಗ್ಯಾಪಲ್ಲೇ ಇಬ್ಬರನ್ನೂ ಸಮಾಧಾನ ಮಾಡಬೇಕು ಅಂತ ಫುಲ್ ಪ್ಲಾನ್ ಮಾಡಿದೆ. ಅಮೆರಿಕ ಮತ್ತು ಇರಾನ್ ಕೈ ಕೈ ಹಿಡಿದು ಮತ್ತೆ ಮಾತುಕತೆಗೆ ಕೂರೋ ತರ ಮಾಡಲು ಪಾಕ್ ಈಗ ಬಿಡುವಿಲ್ಲದ ಪ್ರಯತ್ನ ನಡೆಸುತ್ತಿದೆ.

ತೆರೆಮರೆಯಲ್ಲಿ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ಓಟ
ಈ ಶಾಂತಿ ಮಾತುಕತೆಗಾಗಿ ಪಾಕಿಸ್ತಾನದ ಸರ್ಕಾರ ಮತ್ತು ಸೇನೆ ಎರಡೂ ಕೈಜೋಡಿಸಿವೆ. ಪ್ರಧಾನಿ ಶೆಹಬಾಜ್ ಷರೀಫ್ ಅವರು ಬುಧವಾರದಿಂದಲೇ ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿ ಪ್ರವಾಸ ಕೈಗೊಂಡು ಅರಬ್ ರಾಷ್ಟ್ರಗಳ ನಾಯಕರ ಬೆಂಬಲ ಪಡೆಯಲು ಮುಂದಾಗಿದ್ದಾರೆ. ಇತ್ತ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ನೇರವಾಗಿ ಇರಾನ್‌ನ ಟೆಹ್ರಾನ್‌ಗೆ ತೆರಳಿ ಅಲ್ಲಿನ ರಾಜಕೀಯ ಹಾಗೂ ಮಿಲಿಟರಿ ನಾಯಕರ ಜೊತೆ ಸತತ 24 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಮಹತ್ವದ ಭೇಟಿಗಳು ಸಂಧಾನದ ಹಾದಿಯನ್ನು ಸುಗಮಗೊಳಿಸುವ ನಿರೀಕ್ಷೆಯಿದೆ.

ಇಸ್ಲಾಮಾಬಾದ್‌ನಲ್ಲಿ ಅಘೋಷಿತ ಲಾಕ್‌ಡೌನ್ ಭೀತಿ!
ಮುಂದಿನ ವಾರ ನಡೆಯಲಿರುವ ಈ ಹೈ-ಪ್ರೊಫೈಲ್ ಸಭೆಗಾಗಿ ಪಾಕಿಸ್ತಾನದ ಭದ್ರತಾ ಸಂಸ್ಥೆಗಳು ಇಡೀ ಇಸ್ಲಾಮಾಬಾದ್ ಅನ್ನು ಕೋಟೆಯಂತೆ ಮಾರ್ಪಡಿಸುತ್ತಿವೆ. ವಿವಿಧ ಪ್ರಾಂತ್ಯಗಳಿಂದ ಸಾವಿರಾರು ಪೊಲೀಸರು ಮತ್ತು ಅರೆಸೈನಿಕ ಪಡೆಗಳನ್ನು ಕರೆಸಲಾಗುತ್ತಿದೆ. ಕಳೆದ ಬಾರಿ 10,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು, ಈ ಬಾರಿ ಆ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿ ಅವಳಿ ನಗರಗಳಲ್ಲಿ ವಾಹನ ಸಂಚಾರದ ಮೇಲೆ ಕಠಿಣ ನಿರ್ಬಂಧ ವಿಧಿಸಲು ಸಾರಿಗೆ ಇಲಾಖೆಗೆ ಸೂಚನೆ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಮುಂದಿನ ವಾರದ ಅಂತ್ಯದವರೆಗೆ ನಾಗರಿಕರು ಅನಗತ್ಯ ಪ್ರಯಾಣ ಮಾಡದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದು ಒಂಥರಾ ಅಘೋಷಿತ ಕರ್ಫ್ಯೂ ಮಾದರಿಯ ಪರಿಸ್ಥಿತಿಯನ್ನು ಸೃಷ್ಟಿಸಿದೆ.

ಜಾಗತಿಕ ಮಟ್ಟದ ನಿರೀಕ್ಷೆ
ಪಶ್ಚಿಮ ಏಷ್ಯಾದ ಯುದ್ಧ ಕೊನೆಗೊಂಡರೆ ಮಾತ್ರ ಇಂಧನ ಬೆಲೆ ಏರಿಕೆ ಮತ್ತು ಜಾಗತಿಕ ಆರ್ಥಿಕ ಸಂಕಷ್ಟಕ್ಕೆ ಮುಕ್ತಿ ಸಿಗಲಿದೆ. ಹೀಗಾಗಿ, ಪಾಕಿಸ್ತಾನದ ಈ ಮಧ್ಯಸ್ಥಿಕೆ ಯಶಸ್ವಿಯಾಗುತ್ತದೆಯೇ ಎಂಬುದನ್ನು ಇಡೀ ಜಗತ್ತು ಕುತೂಹಲದಿಂದ ಗಮನಿಸುತ್ತಿದೆ. ಒಂದು ವೇಳೆ ಈ ಎರಡನೇ ಸುತ್ತಿನ ಮಾತುಕತೆ ಫಲಪ್ರದವಾದರೆ, ಅದು ವಿಶ್ವ ಶಾಂತಿಯ ದೃಷ್ಟಿಯಿಂದ ದೊಡ್ಡ ಮೈಲಿಗಲ್ಲಾಗಲಿದೆ.