Mar 2, 2026 Languages : ಕನ್ನಡ | English

ಹಳೆ ಪ್ರೇಮಿಯ ಕಥೆ ಮುಗಿಸಲು ನಟಿಯ ಸ್ಕೆಚ್ - ಬಾಗಲಗುಂಟೆ ನಿಗೂಢ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!!

ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯಲಕ್ಷ್ಮಿ ಲೇಔಟ್‌ನಲ್ಲಿ ಇತ್ತೀಚೆಗೆ ನಡೆದ ಮೋಹನ್ ಕೃಷ್ಣ (45) ಎಂಬುವವರ ನಿಗೂಢ ಹತ್ಯೆ ಪ್ರಕರಣ ಈಗ ಒಂದು ಆಘಾತಕಾರಿ ತಿರುವು ಪಡೆದುಕೊಂಡಿದೆ. ಪೊಲೀಸರ ತನಿಖೆಯ ವೇಳೆ ಸಣ್ಣ ಪರದೆಯ ನಟಿಯೊಬ್ಬಳು ತನ್ನ ಹೊಸ ಪ್ರೇಮಿಯ ಜೊತೆ ಸೇರಿ ಹಳೆಯ ಪ್ರೇಮಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಿರುತೆರೆ ನಟಿ ಬಿಂದು, ಆಕೆಯ ಪ್ರೇಮಿ ವಿನಯ್ ಮತ್ತು ಧನುಷ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರೇಮ ವೈಫಲ್ಯದಿಂದ ಕೊಲೆ – ಬಾಗಲಗುಂಟೆ ಪ್ರಕರಣದ ಆಘಾತಕಾರಿ ತಿರುವು
ಪ್ರೇಮ ವೈಫಲ್ಯದಿಂದ ಕೊಲೆ – ಬಾಗಲಗುಂಟೆ ಪ್ರಕರಣದ ಆಘಾತಕಾರಿ ತಿರುವು

ಕೊಲೆಯಾದ ಮೋಹನ್ ಕೃಷ್ಣ ಸಣ್ಣ ಪ್ರಮಾಣದ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ಅವರು ತಮ್ಮ ಪತ್ನಿಯನ್ನು ಬಿಟ್ಟು ನಟಿ ಬಿಂದು ಜೊತೆಗೆ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಬಿಂದು ಕೂಡ ತನ್ನ ಪತಿಯಿಂದ ದೂರವಾಗಿದ್ದರು. ಬಿಂದು ಅವರು ಕನ್ನಡದ ಖ್ಯಾತ ಸಿನಿಮಾಗಳಾದ ‘ಭಜರಂಗಿ’, ‘ಪೊಲೀಸ್ ಕ್ವಾರ್ಟರ್ಸ್’ ಮತ್ತು ‘ಕಾಲಭೈರವ’ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಕೇವಲ ಎರಡು ತಿಂಗಳ ಹಿಂದೆಯಷ್ಟೇ ಬಿಂದು ಮತ್ತು ಮೋಹನ್ ಕೃಷ್ಣ ದಂಪತಿಗಳಂತೆ ವಿಜಯಲಕ್ಷ್ಮಿ ಲೇಔಟ್‌ನ ನಟರಾಜ್ ಎಂಬುವವರ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಒಂದು ತಿಂಗಳಲ್ಲೇ ಮನೆ ಖಾಲಿ ಮಾಡುವುದಾಗಿ ಹೇಳಿದ್ದರಿಂದ ಮಾಲೀಕರು ಯಾವುದೇ ಬಾಡಿಗೆ ಒಪ್ಪಂದ ಮಾಡಿಕೊಂಡಿರಲಿಲ್ಲ. ವಿಶೇಷವೆಂದರೆ, ಮನೆಯ ಮಾಲೀಕರು ಬಂದಾಗಲೆಲ್ಲಾ ಬಾಗಿಲು ಹಾಕಿಯೇ ಇರುತ್ತಿತ್ತು.

ಕೊಲೆ ಬೆಳಕಿಗೆ ಬಂದಿದ್ದು ಹೇಗೆ?

ಮಾರ್ಚ್ 1 ರಂದು ಆ ಮನೆಯಿಂದ ಅತಿಯಾದ ದುರ್ವಾಸನೆ ಬರಲಾರಂಭಿಸಿತು. ಇದರಿಂದ ಅನುಮಾನಗೊಂಡ ಮನೆಯ ಮಾಲೀಕರು ಮತ್ತು ಸ್ಥಳೀಯರು ಪರಿಶೀಲಿಸಿದಾಗ, ಮನೆಯೊಳಗೆ ಮೋಹನ್ ಕೃಷ್ಣ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು. ತಕ್ಷಣವೇ ಬಾಗಲಗುಂಟೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್ ಲೊಕೇಶನ್ ಮತ್ತು ಕಾಲ್ ರೆಕಾರ್ಡ್‌ಗಳ ಆಧಾರದ ಮೇಲೆ ತನಿಖೆ ನಡೆಸಿ ಬಿಂದು, ವಿನಯ್ ಮತ್ತು ಧನುಷ್‌ನನ್ನು ವಶಕ್ಕೆ ಪಡೆದರು. ವಿಚಾರಣೆಯ ವೇಳೆ ಹತ್ಯೆಯ ಹಿಂದಿನ ಕರಾಳ ಸತ್ಯ ಹೊರಬಂದಿದೆ.

ಪ್ರೇಮ ವೈಫಲ್ಯ ಮತ್ತು ಸಂಚು

ಮೋಹನ್ ಕೃಷ್ಣ ಜೊತೆಗಿದ್ದಾಗಲೇ ಬಿಂದುವಿಗೆ ವಿನಯ್ ಎಂಬಾತನ ಪರಿಚಯವಾಗಿ ಪ್ರೇಮ ಅಂಕುರವಾಗಿತ್ತು. ವಿನಯ್ ಕೂಡ ಬಿಂದುವನ್ನೇ ಮದುವೆಯಾಗಲು ಬಯಸಿದ್ದ. ಆದರೆ ಅವರ ಮದುವೆಗೆ ಮೋಹನ್ ಕೃಷ್ಣ ಅಡ್ಡಿಯಾಗಬಹುದು ಎಂಬ ಭಯ ಈ ದಂಪತಿಗಳನ್ನು ಕಾಡುತ್ತಿತ್ತು. ಹೀಗಾಗಿ ಮೋಹನ್ ಕೃಷ್ಣನನ್ನು ದಾರಿಯಿಂದ ತಪ್ಪಿಸಲು ಇವರು ಸ್ಕೆಚ್ ಹಾಕಿದ್ದರು. ಫೆಬ್ರವರಿ 18ರ ರಾತ್ರಿ ಮೋಹನ್ ಕೃಷ್ಣ, ಬಿಂದು, ವಿನಯ್ ಮತ್ತು ಧನುಷ್ ಎಲ್ಲರೂ ಸೇರಿ ಪಾರ್ಟಿ ಮಾಡಿದ್ದರು.

ಪಾರ್ಟಿ ವೇಳೆ ಮೋಹನ್ ಕೃಷ್ಣ ಕುಡಿದ ಅಮಲಿನಲ್ಲಿ ಬಿಂದು ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ವಿನಯ್ ತನ್ನ ಬಳಿಯಿದ್ದ ಚಾಕುವಿನಿಂದ ಮೋಹನ್ ಕೃಷ್ಣನಿಗೆ ಮನಬಂದಂತೆ ಇರಿದಿದ್ದಾನೆ. ಈ ವೇಳೆ ಮೋಹನ್ ಕೃಷ್ಣ ಕಿರುಚಾಡಲು ಶುರು ಮಾಡಿದಾಗ, ಮೂವರು ಆರೋಪಿಗಳು ಸೇರಿ ಆತನ ಮುಖ ಮತ್ತು ಮೂಗಿಗೆ ಸೆಲ್ಲೋ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿದ ನಂತರ ಮನೆಯನ್ನು ಲಾಕ್ ಮಾಡಿ ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಮೂವರು ಆರೋಪಿಗಳು ಜೈಲು ಪಾಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.