ಮಂಗಳೂರಿನ ಕಾವೂರು ನಿವಾಸಿಗಳಿಗೆ ಈಗ ದೊಡ್ಡದೊಂದು ತಲೆನೋವು ಶುರುವಾಗಿದೆ. ಏನಪ್ಪಾ ಅಂದ್ರೆ, ಇಲ್ಲಿನ ಮೂರು ಮನೆಗಳ ಬಾವಿಗಳಲ್ಲಿ ನೀರು ಕುಡಿಯೋಕೆ ಹೋದರೆ, ಅಲ್ಲಿ ನೀರಿಗಿಂತ ಹೆಚ್ಚಾಗಿ ಡೀಸೆಲ್ ಸಿಗುತ್ತಿದೆ! ಹೌದು, ನೀವು ಕೇಳುತ್ತಿರೋದು ನಿಜ. ಬಾವಿಯಿಂದ ನೀರು ಸೇದಿದರೆ ಸಾಕು, ಘಾಟು ಡೀಸೆಲ್ ವಾಸನೆ ಮೂಗಿಗೆ ಬಡಿಯುತ್ತಿದೆ.
ಲ್ಯಾಬ್‌ನಲ್ಲಿ ಈ ನೀರನ್ನು ಟೆಸ್ಟ್ ಮಾಡಿದಾಗ ಶಾಕಿಂಗ್ ವಿಚಾರ ಹೊರಬಿದ್ದಿದೆ. ಈ ನೀರಿನಲ್ಲಿ ಬರೋಬ್ಬರಿ ಶೇಕಡಾ 28 ರಷ್ಟು ಶುದ್ಧ ಡೀಸೆಲ್ ಮಿಕ್ಸ್ ಆಗಿದೆ ಅಂತ ರಿಪೋರ್ಟ್ ಬಂದಿದೆ. ಇನ್ನು ಪರಿಸ್ಥಿತಿ ಎಷ್ಟು ಭೀಕರವಾಗಿದೆ ಅಂದ್ರೆ, ಆ ಬಾವಿ ನೀರಿಗೆ ಒಂದು ಸಣ್ಣ ಪೇಪರ್ ಅದ್ದಿ ಬೆಂಕಿ ಹಚ್ಚಿದರೆ ಸಾಕು, ಅದು ಪಟಾಕಿಯಂತೆ ಭುಗಿಲನೆ ಉರಿದುಹೋಗುತ್ತಿದೆ. ಈ ವಿಲಕ್ಷಣ ಘಟನೆಯಿಂದ ಇಡೀ ಕರಾವಳಿ ಭಾಗದ ಜನರೆಲ್ಲಾ ಸದ್ಯ ಆತಂಕದಲ್ಲಿದ್ದಾರೆ.
ಎಷ್ಟೇ ಕ್ಲೀನ್ ಮಾಡಿದ್ರೂ ಮುಗಿಯದ ಡೀಸೆಲ್ ಕಾಟ!
ಇಲ್ಲಿನ ನಿವಾಸಿಗಳು ಬಾವಿಗೆ ಮೋಟಾರ್ ಹಾಕಿ ನೀರನ್ನೆಲ್ಲಾ ಖಾಲಿ ಮಾಡಿಸಿ, ಕ್ಲೀನ್ ಮಾಡಿಸಿದರೂ ಪ್ರಯೋಜನವಾಗಿಲ್ಲ. ನೀರು ಖಾಲಿಯಾದ ಮೇಲೆ ಭೂಮಿಯೊಳಗಿಂದ ಮತ್ತೆ ಜಿನುಗುವ ನೀರಿನ ಜೊತೆ ದಪ್ಪನೆಯ ಡೀಸೆಲ್ ಲೇಯರ್ ತೇಲಿ ಬರುತ್ತಲೇ ಇದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳಿಗೆ ಕುಡಿಯುವ ನೀರು ಹಾಗಿರಲಿ, ಕನಿಷ್ಠ ಪಾತ್ರೆ ತೊಳೆಯಲು ಅಥವಾ ಮನೆ ಬಳಕೆಗೂ ನೀರಿಲ್ಲದಂತಾಗಿದೆ.
ಮನೆಗಳ ಪಕ್ಕದಲ್ಲೇ ಒಂದು ಪೆಟ್ರೋಲ್ ಬಂಕ್ ಇದೆ. ಅದರ ಅಂಡರ್‌ಗ್ರೌಂಡ್ ಟ್ಯಾಂಕ್‌ನಿಂದಲೇ ಏನೋ ಲೀಕ್ ಆಗಿ, ಈ ರೀತಿ ಅಂತರ್ಜಲ ಸೇರಿರಬಹುದು ಅನ್ನೋದು ಸ್ಥಳೀಯರ ಬಲವಾದ ಶಂಕೆ. ಆದರೆ ಪೆಟ್ರೋಲ್ ಬಂಕ್ ಮಾಲೀಕರು ಮಾತ್ರ, "ನಮ್ಮ ಸ್ಟಾಕ್‌ನಲ್ಲಿ ಯಾವುದೇ ವ್ಯತ್ಯಾಸ ಬಂದಿಲ್ಲ, ನಮ್ಮಿಂದ ಯಾವುದೇ ಸೋರಿಕೆಯೂ ಆಗ್ತಿಲ್ಲ" ಅಂತ ಜಾರಿಕೊಳ್ಳುತ್ತಿದ್ದಾರೆ. ಇತ್ತ ಅಧಿಕಾರಿಗಳು ಕೂಡ ಇಷ್ಟೆಲ್ಲಾ ಆದರೂ ಸ್ಥಳಕ್ಕೆ ಬಂದು ಸರಿಯಾಗಿ ಪರಿಶೀಲನೆ ನಡೆಸಿಲ್ಲ ಎಂದು ಸಾರ್ವಜನಿಕರು ಸಿಕ್ಕಾಪಟ್ಟೆ ಆಕ್ರೋಶ ಹೊರಹಾಕಿದ್ದಾರೆ.
‘ಟ್ಯಾಂಕರ್ ನೀರೇ ನಮಗೆ ಆಸರೆ’ - ಸಂತ್ರಸ್ತ ಸದಾಶಿವ ಅಳಲು
ಈ ಕಷ್ಟ ಅನುಭವಿಸುತ್ತಿರುವ ಕಾವೂರಿನ ನಿವಾಸಿ ಸದಾಶಿವ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ:
"ಮೊದಲ ಬಾರಿಗೆ ಬಾವಿಯಿಂದ ನೀರು ತರುವಾಗಲೇ ನಮಗೆ ಡೀಸೆಲ್ ವಾಸನೆ ಗೊತ್ತಾಯಿತು. ಎಷ್ಟು ಸಲ ಬಾವಿ ಕ್ಲೀನ್ ಮಾಡಿದ್ರೂ ಕೆಳಗಿನಿಂದ ಆಯಿಲ್ ಬರೋದು ನಿಲ್ತಾ ಇಲ್ಲ. ನಮಗೆ ದಿನಬಳಕೆಯ ನೀರಿಗೂ ಭಾರಿ ತೊಂದರೆಯಾಗಿದೆ. ಈಗ ಅನಿವಾರ್ಯವಾಗಿ ಹೊರಗಿನಿಂದ ಟ್ಯಾಂಕರ್ ಮೂಲಕ ನೀರು ತರಿಸಿ, ಬಕೆಟ್‌ಗಳಲ್ಲಿ ತುಂಬಿಸಿಟ್ಟುಕೊಳ್ಳಬೇಕಾದ ದುಸ್ಥಿತಿ ಬಂದಿದೆ.
ಪಕ್ಕದ ಪೆಟ್ರೋಲ್ ಬಂಕ್‌ನವರ ಹತ್ತಿರ ಕೇಳಿದರೆ, ಅವರು ಹಾರಿಕೆ ಉತ್ತರ ಕೊಡ್ತಿದ್ದಾರೆ. ಆದರೆ ಹೆಲ್ತ್ ಡಿಪಾರ್ಟ್‌ಮೆಂಟ್‌ನವರು ಬಂದು ನೀರಿನ ಸ್ಯಾಂಪಲ್ ತಗೊಂಡು ಹೋಗಿ ಟೆಸ್ಟ್ ಮಾಡಿದಾಗ 28% ಆಯಿಲ್ ಇರೋದು ಕನ್ಫರ್ಮ್ ಆಗಿದೆ. ಈ ನೀರು ಕುಡಿಯೋಕೆ ಅನ್ಫಿಟ್ ಅಂತ ಅವರೇ ಹೇಳಿದ್ದಾರೆ. ಅಧಿಕಾರಿಗಳು ಬರೀ ರಿಪೋರ್ಟ್ ಇಟ್ಕೊಂಡು ಕೂರದೆ ತಕ್ಷಣ ನಮ್ಮ ನೆರವಿಗೆ ಬರಬೇಕು."