Mar 5, 2026 Languages : ಕನ್ನಡ | English

ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆ - ಇರಾಕ್‌ನಲ್ಲಿ ಪ್ರಭಾವಿ ಕಮಾಂಡರ್ ಅಲ್-ಫ್ರೇಜಿ ಖತಂ!!

ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಸ್ಫೋಟಕ ಬೆಳವಣಿಗೆ. ಕತೈಬ್ ಹೆಜ್ಬೊಲ್ಲಾ ಕಮಾಂಡರ್ ಅಲ್-ಫ್ರೇಜಿ ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಖತಂ. ಇರಾನ್ ನಾಯಕತ್ವದ ನಾಶಕ್ಕೆ ಬೆನ್ನಟ್ಟಿರುವ ಮಿತ್ರಪಡೆಗಳು ಈಗ ಇರಾಕ್‌ನಲ್ಲಿ ಈ ಭೀಕರ ದಾಳಿ ನಡೆಸಿವೆ. ಇದರಿಂದಾಗಿ ಇಡೀ ಪ್ರದೇಶದಲ್ಲಿ ಉದ್ವಿಗ್ನತೆ ತುತ್ತತುದಿಗೆ ತಲುಪಿದೆ.

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ತೀವ್ರ !!
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ತೀವ್ರ !!

ಬುಧವಾರ ಸಂಜೆ ಉತ್ತರ ಬಾಬಿಲ್‌ನ ಅಬು ಲುಕಾ ಪ್ರದೇಶದಲ್ಲಿ ನಡೆದ ನಿಖರವಾದ ಡ್ರೋನ್ ದಾಳಿಯು ಕತೈಬ್ ಹೆಜ್ಬೊಲ್ಲಾ ಸಂಘಟನೆಗೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿದೆ. ಡ್ರೋನ್‌ನಿಂದ ಹಾರಿದ ಕ್ಷಿಪಣಿಯು 'ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್' ವಾಹನವನ್ನು ಚೂರುಚೂರು ಮಾಡಿದ್ದು, ಈ ಸ್ಫೋಟದಲ್ಲಿ ಕಮಾಂಡರ್ ಅಲ್-ಫ್ರೇಜಿ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಐಸಿಸ್ (ISIS) ವಿರುದ್ಧದ ಕಠಿಣ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಫ್ರೇಜಿ, ಕಳೆದ ಎರಡು ದಶಕಗಳಿಂದ ಸಂಘಟನೆಯ ಶಕ್ತಿಯಾಗಿದ್ದರು.

ಈ ಹ*ತ್ಯೆಯ ನಂತರ ಬಾಗ್ದಾದ್‌ನಲ್ಲಿ ನಡೆದ ಅಂತ್ಯಕ್ರಿಯೆಯ ಮೆರವಣಿಗೆಯ ವೇಳೆ ಇರಾಕ್‌ನ ಇಸ್ಲಾಮಿಕ್ ರೆಸಿಸ್ಟೆನ್ಸ್ ಗುಂಪು ತೀವ್ರ ಎಚ್ಚರಿಕೆಯನ್ನು ನೀಡಿದೆ. ಇನ್ನು ಮುಂದೆ ತಾವು ಅಮೆರಿಕದ ಆಸ್ತಿಪಾಸ್ತಿಗಳು ಮತ್ತು ಅವರ ಮಿತ್ರರಾಷ್ಟ್ರಗಳ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ ಎಂದು ಹೇಳಿದೆ. ವಿಶೇಷವಾಗಿ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ನ್ಯಾಟೋ ರಾಷ್ಟ್ರಗಳ ಹಿತಾಸಕ್ತಿಗಳನ್ನು ಕಾನೂನುಬದ್ಧ ಗುರಿಗಳೆಂದು ಘೋಷಿಸಿದೆ. ಈ ವಾರ ಇರಾನ್ ಉಡಾಯಿಸಿದ ಕ್ಷಿಪಣಿಗಳನ್ನು ತಡೆಯಲು ನ್ಯಾಟೋ ರಾಷ್ಟ್ರಗಳು ಸಹಕರಿಸಿದ್ದೇ ಈ ಕೋಪಕ್ಕೆ ಮುಖ್ಯ ಕಾರಣವಾಗಿದೆ.

ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುಡಾನಿ ಅವರು ತಮ್ಮ ದೇಶವನ್ನು ಅಮೆರಿಕ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದ ದೂರವಿಡಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಇರಾನ್ ಬೆಂಬಲಿತ ಗುಂಪುಗಳು ಇರಾಕ್ ಮಣ್ಣನ್ನು ಬಳಸಿಕೊಂಡು ದಾಳಿ ನಡೆಸುತ್ತಿರುವುದು ಮತ್ತು ಅದಕ್ಕೆ ಪ್ರತಿಯಾಗಿ ಅಮೆರಿಕದ ಪಡೆಗಳು ಇರಾಕ್ ಒಳಗೇ ವೈಮಾನಿಕ ದಾಳಿ ನಡೆಸುತ್ತಿರುವುದು ದೇಶದ ಭದ್ರತೆಗೆ ದೊಡ್ಡ ಸವಾಲಾಗಿದೆ. ಇತ್ತೀಚೆಗೆ ಬಸ್ರಾದಲ್ಲಿ ಇರಾಕ್ ಸೇನೆಯು ನೆರೆಯ ಗಲ್ಫ್ ರಾಷ್ಟ್ರದ ಮೇಲೆ ದಾಳಿ ಮಾಡಲು ಸಜ್ಜಾಗಿದ್ದ ಕ್ಷಿಪಣಿ ಲಾಂಚರ್‌ಗಳನ್ನ ವಶಪಡಿಸಿಕೊಂಡಿರುವುದು ಪರಿಸ್ಥಿತಿಯ ಗಂಭೀರತೆಯನ್ನ ತೋರಿಸುತ್ತದೆ.

ಫೆಬ್ರವರಿ 28ರಂದು ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಅವರ ಸಾವಿಗೆ ಕಾರಣವಾದ ಅಮೆರಿಕ ಇಸ್ರೇಲ್ ಜಂಟಿ ಕಾರ್ಯಾಚರಣೆಯ ನಂತರ, ಕತೈಬ್ ಹೆಜ್ಬೊಲ್ಲಾ ಸಂಘಟನೆಯು ಈಗಾಗಲೇ ತನ್ನ 15ಕ್ಕೂ ಹೆಚ್ಚು ಹಿರಿಯ ಸದಸ್ಯರ ಕಳೆದುಕೊಂಡಿದೆ. ಈಗ ಅಲ್ ಫ್ರೇಜಿ ಅವರ ಸಾವು ಸಂಘಟನೆಯ ಕಾರ್ಯಾಚರಣೆಯ ಮೇಲೆ ದೊಡ್ಡ ಹೊಡೆತ ನೀಡಿದೆ. ಇರಾನ್ ಅಮೆರಿಕ ನಡುವಿನ ಈ ಪರೋಕ್ಷ ಯುದ್ಧದಲ್ಲಿ ಇರಾಕ್ ಮಣ್ಣು ಬಲಿಯಾಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. 

Latest News