Apr 9, 2026 Languages : ಕನ್ನಡ | English

ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ‘ಸರ್ಪ್ರೈಸ್ ಸ್ಟ್ರೈಕ್’ - 10 ನಿಮಿಷಗಳಲ್ಲಿ 100 ಕಡೆ ದಾಳಿ, 254 ಮಂದಿ ಸಾವು!!

ವಿಶ್ವದ ಗಮನ ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮದ ಮೇಲಿರುವಾಗಲೇ, ಇಸ್ರೇಲ್ ಬುಧವಾರ ಲೆಬನಾನ್ ಮೇಲೆ ಭೀಕರ ವೈಮಾನಿಕ ದಾಳಿ ನಡೆಸುವ ಮೂಲಕ ಶಾಕ್ ನೀಡಿದೆ. ಕೇವಲ 10 ನಿಮಿಷಗಳಲ್ಲಿ 100ಕ್ಕೂ ಹೆಚ್ಚು ಕಡೆಗಳಲ್ಲಿ ಬಾಂಬ್ ಮಳೆ ಸುರಿಸಿರುವ ಇಸ್ರೇಲ್ ಸೈನ್ಯ, ಹೆಜ್ಬೊಲ್ಲಾ ಸಂಘಟನೆಯ ಬುಡವನ್ನೇ ಅಲ್ಲಾಡಿಸಿದೆ.

ಇಸ್ರೇಲ್‌ನ ಭೀಕರ ದಾಳಿ - ಲೆಬನಾನ್‌ನಲ್ಲಿ ಬಾಂಬ್ ಮಳೆ!! | Photo Credit: https://x.com/robinmonotti
ಇಸ್ರೇಲ್‌ನ ಭೀಕರ ದಾಳಿ - ಲೆಬನಾನ್‌ನಲ್ಲಿ ಬಾಂಬ್ ಮಳೆ!! | Photo Credit: https://x.com/robinmonotti

ಲೆಬನಾನ್‌ನ ಸಿವಿಲ್ ಡಿಫೆನ್ಸ್ ನೀಡಿರುವ ಮಾಹಿತಿಯ ಪ್ರಕಾರ, ಇಸ್ರೇಲ್ ಈ ದಾಳಿಯನ್ನು ಅತ್ಯಂತ ಯೋಜಿತವಾಗಿ ಮಾಡಿದೆ. ರಾಜಧಾನಿ ಬೈರುತ್ ಸೇರಿದಂತೆ ದೇಶಾದ್ಯಂತ ಇರುವ ಹೆಜ್ಬೊಲ್ಲಾದ ಸುಮಾರು 100 ಮಿಲಿಟರಿ ಬೇಸ್‌ಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ.

ಈ ದಾಳಿಯಲ್ಲಿ ಇದುವರೆಗೆ ಸುಮಾರು 254 ಜನರು ಸಾವನ್ನಪ್ಪಿದ್ದಾರೆ ಮತ್ತು 1,160ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಸ್ರೇಲ್ ಸೈನ್ಯದ (IDF) ವೇಗ ಎಷ್ಟಿತ್ತೆಂದರೆ, ಕೇವಲ 10 ನಿಮಿಷಗಳಲ್ಲಿ 100 ಟಾರ್ಗೆಟ್‌ಗಳನ್ನು ಧ್ವಂಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಲೆಬನಾನ್‌ನ ಆರೋಗ್ಯ ಸಚಿವರು ಜನರಿಗೆ ರಸ್ತೆಗಳನ್ನು ಬಿಟ್ಟುಕೊಡುವಂತೆ ಮನವಿ ಮಾಡಿದ್ದಾರೆ. ಆಂಬ್ಯುಲೆನ್ಸ್‌ಗಳು ಸಂಚರಿಸಲು ದಾರಿ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕುಸಿದು ಬಿದ್ದ ಕಟ್ಟಡಗಳ ನಡುವೆ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ವಿಶೇಷ ಅಂದ್ರೆ, ಅಮೆರಿಕ ಮತ್ತು ಇರಾನ್ ನಡುವೆ ಇತ್ತೀಚೆಗಷ್ಟೇ ಎರಡು ವಾರಗಳ ಕದನ ವಿರಾಮಕ್ಕೆ (Ceasefire) ಒಪ್ಪಿಗೆ ಸಿಕ್ಕಿತ್ತು. ಆದರೆ ಈ ದಾಳಿಯಿಂದ ಆ ಒಪ್ಪಂದ ಈಗ ಮುರಿದು ಬೀಳುವ ಹಂತಕ್ಕೆ ಬಂದಿದೆ. ಈ ಬಗ್ಗೆ ಅಮೆರಿಕಾದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಪ್ರತಿಕ್ರಿಯಿಸಿದ್ದು, "ಇದೊಂದು ತಪ್ಪು ತಿಳುವಳಿಕೆ ಅಷ್ಟೆ. ಕದನ ವಿರಾಮದಲ್ಲಿ ಲೆಬನಾನ್ ಕೂಡ ಸೇರಿದೆ ಎಂದು ಇರಾನ್ ಅಂದುಕೊಂಡಿತ್ತು, ಆದರೆ ನಾವು ಅಂತಹ ಯಾವುದೇ ಭರವಸೆ ನೀಡಿರಲಿಲ್ಲ. ಇರಾನ್ ಈ ಒಪ್ಪಂದದಿಂದ ಹಿಂದೆ ಸರಿದರೆ ಅದು ಅವರ ದಡ್ಡತನವಾಗುತ್ತದೆ," ಎಂದಿದ್ದಾರೆ. ಡೊನಾಲ್ಡ್ ಟ್ರಂಪ್ ಕೂಡ ಇದೇ ಮಾತು ಹೇಳಿದ್ದು, ಲೆಬನಾನ್ ಸಂಘರ್ಷವು ನಮ್ಮ ಒಪ್ಪಂದಕ್ಕೆ ಸೇರಿಲ್ಲದ 'ಪ್ರತ್ಯೇಕ ಕಿರಿಕಿರಿ' ಎಂದಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ತಮ್ಮ ನಿರ್ಧಾರದಲ್ಲಿ ಅಚಲವಾಗಿದ್ದಾರೆ. ಉತ್ತರ ಇಸ್ರೇಲ್ ಮೇಲಿರುವ ಬೆದರಿಕೆ ಸಂಪೂರ್ಣವಾಗಿ ನಿಲ್ಲುವವರೆಗೆ ಮತ್ತು ಹೆಜ್ಬೊಲ್ಲಾ ಸಂಘಟನೆಯನ್ನು ನಿಶಸ್ತ್ರಗೊಳಿಸುವವರೆಗೆ ಯುದ್ಧ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಕ್ಷಣಾ ಸಚಿವ ಕಾಟ್ಜ್ ಅವರು ಹೆಜ್ಬೊಲ್ಲಾ ನಾಯಕ ನಯಿಮ್ ಖಾಸೆಮ್‌ಗೆ ನೇರ ವಾರ್ನಿಂಗ್ ಕೊಟ್ಟಿದ್ದು, "ಇರಾನ್ ಪರವಾಗಿ ಈ ರೀತಿ ಆಟವಾಡುವುದನ್ನು ನಿಲ್ಲಿಸದಿದ್ದರೆ, ಮುಂದಿನ ಸರದಿ ನಿಂದೇ!" ಎಂದು ಎಚ್ಚರಿಸಿದ್ದಾರೆ.

ಇಸ್ರೇಲ್‌ನ ಈ ದಿಢೀರ್ ದಾಳಿಯಿಂದ ಇರಾನ್ ಕೆಂಡಾಮಂಡಲವಾಗಿದೆ. "ಇಸ್ರೇಲ್ ಲೆಬನಾನ್‌ನಲ್ಲಿ ಈ ರೀತಿ ಒಪ್ಪಂದವನ್ನು ಉಲ್ಲಂಘಿಸುವುದನ್ನು ಮುಂದುವರಿಸಿದರೆ, ನಾವು ಮತ್ತೆ ಯುದ್ಧಕ್ಕೆ ಇಳಿಯಲು ಸಿದ್ಧರಿದ್ದೇವೆ" ಎಂದು ಇರಾನ್ ಸರ್ಕಾರಕ್ಕೆ ಹತ್ತಿರವಿರುವ ಮೂಲಗಳು ತಿಳಿಸಿವೆ. ಶಾಂತಿಯ ನಿರೀಕ್ಷೆಯಲ್ಲಿದ್ದ ಮಧ್ಯಪ್ರಾಚ್ಯದಲ್ಲಿ ಈಗ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ. ಈ ಸಂಘರ್ಷ ಎಲ್ಲಿಗೆ ಹೋಗಿ ನಿಲ್ಲುತ್ತೋ ಅನ್ನೋ ಆತಂಕ ಇಡೀ ಜಗತ್ತನ್ನು ಕಾಡ್ತಿದೆ.

Latest News