Mar 2, 2026 Languages : ಕನ್ನಡ | English

ಇಸ್ರೇಲ್ ಮೇಲೆ ಇರಾನ್ ಅಟ್ಟಹಾಸ - ಬೀಟ್ ಶೆಮೆಶ್ ಮೇಲೆ ಕ್ಷಿಪಣಿ ಮಳೆ, 8 ಮಂದಿ ಸಾವು!!

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಅತ್ಯಂತ ಭೀಕರ ಹಂತಕ್ಕೆ ತಲುಪಿದೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಇರಾನ್ ನಡೆಸಿದ ಕ್ಷಿಪಣಿ ದಾಳಿಯು ಇಸ್ರೇಲ್‌ನ ಬೀಟ್ ಶೆಮೆಶ್ ನಗರವನ್ನು ನಡುಗಿಸಿದೆ. ಈ ದಾಳಿಯಲ್ಲಿ ಒಟ್ಟು ಎಂಟು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ, ಈ ಘಟನೆಯು ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರತೀಕಾರದ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷ
ಪ್ರತೀಕಾರದ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷ

ಜೆರುಸಲೆಂನಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಬೀಟ್ ಶೆಮೆಶ್ ನಗರದ ವಸತಿ ಪ್ರದೇಶವನ್ನು ಗುರಿಯಾಗಿಸಿಕೊಂಡು ಇರಾನ್ ಈ ದಾಳಿ ನಡೆಸಿದೆ, ಭಾನುವಾರ ನಡೆದ ಈ ನೇರ ಕ್ಷಿಪಣಿ ದಾಳಿಯು ಒಂದು ವಸತಿ ಸಮುಚ್ಚಯಕ್ಕೆ ಅಪ್ಪಳಿಸಿದೆ. ಇದರ ಪರಿಣಾಮವಾಗಿ ಕಟ್ಟಡವು ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳದಲ್ಲೇ ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಕೇವಲ ವಸತಿ ಕಟ್ಟಡ ಮಾತ್ರವಲ್ಲದೆ, ಯುದ್ಧದ ಸಮಯದಲ್ಲಿ ಜನರು ರಕ್ಷಣೆ ಪಡೆಯಲು ನಿರ್ಮಿಸಲಾಗಿದ್ದ ಬಾಂಬ್ ಶೆಲ್ಟರ್‌ಗಳಿಗೂ ಈ ದಾಳಿಯಿಂದ ಹಾನಿಯಾಗಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿದ್ದ ಸುಮಾರು ಒಂದು ಡಜನ್‌ಗೂ ಹೆಚ್ಚು ಮನೆಗಳ ಕಿಟಕಿಗಳು ಮತ್ತು ಗೋಡೆಗಳು ಕುಸಿದಿವೆ. ಶನಿವಾರದಿಂದ ಇರಾನ್ ನಡೆಸುತ್ತಿರುವ ನಿರಂತರ ದಾಳಿಗಳಲ್ಲಿ ಇಸ್ರೇಲ್‌ನಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ಈಗ ಒಂಬತ್ತಕ್ಕೆ ಏರಿಕೆಯಾಗಿದೆ.

ಗಾಯಾಳುಗಳ ಪರಿಸ್ಥಿತಿ

ಈ ಭೀಕರ ದಾಳಿಯಲ್ಲಿ ಕೇವಲ ಸಾವು ನೋವು ಮಾತ್ರವಲ್ಲದೆ, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ತಂಡಗಳ ಮಾಹಿತಿಯ ಪ್ರಕಾರ, ಒಬ್ಬ ಯುವತಿ ಸೇರಿದಂತೆ ಇಬ್ಬರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಮ್ಯಾಗೆನ್ ಡೇವಿಡ್ ಆಡಮ್ ಎಂಬ ತುರ್ತು ಸೇವಾ ಸಂಸ್ಥೆಯು ತಿಳಿಸಿರುವಂತೆ ನಾಲ್ಕು ವರ್ಷದ ಪುಟ್ಟ ಬಾಲಕನೊಬ್ಬನಿಗೂ ಗಾಯಗಳಾಗಿವೆ. ಒಟ್ಟಾರೆಯಾಗಿ 20ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಕ್ಷಣಾ ಕಾರ್ಯಾಚರಣೆ

ದಾಳಿ ನಡೆದ ತಕ್ಷಣ ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಕ್ಷಿಪಣಿ ಅಪ್ಪಳಿಸಿದ ಕಟ್ಟಡವು ಅವಶೇಷಗಳ ರಾಶಿಯಾಗಿ ಮಾರ್ಪಟ್ಟಿದ್ದು, ಅದರ ಅಡಿಯಲ್ಲಿ ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂದು ಪತ್ತೆ ಹಚ್ಚಲು ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳೀಯರು ಕೂಡ, ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.

ದಾಳಿಯ ಹಿನ್ನೆಲೆ

ಇರಾನ್ ಈ ದಾಳಿಯನ್ನು "ಪ್ರತೀಕಾರದ ಕ್ರಮ" ಎಂದು ಕರೆದಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್ ಕೆರಳಿದೆ. ತನ್ನ ನಾಯಕನ ಸಾವಿಗೆ ಇಸ್ರೇಲ್ ಕಾರಣ ಎಂದು ಆರೋಪಿಸಿರುವ ಇರಾನ್, ಈಗ ನೇರ ಯುದ್ಧಕ್ಕೆ ಇಳಿದಂತಿದೆ. ಈ ಸೇಡಿನ ಜ್ವಾಲೆಯು ಇಡೀ ಮಧ್ಯಪ್ರಾಚ್ಯ ಪ್ರದೇಶವನ್ನು ಆವರಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.

ಮುಂದಿನ ಬೆಳವಣಿಗೆಗಳು

ಈ ದಾಳಿಯು ಇಸ್ರೇಲ್ ಮತ್ತು ಇರಾನ್ ನಡುವಿನ ಹಗೆತನವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಇಸ್ರೇಲ್ ಸರ್ಕಾರವು ಈ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವ ಸಾಧ್ಯತೆ ಇದ್ದು. ಅಂತರಾಷ್ಟ್ರೀಯ ಸಮುದಾಯವು ಶಾಂತಿ ಕಾಪಾಡುವಂತೆ ಮನವಿ ಮಾಡುತ್ತಿದ್ದರೂ, ಪರಿಸ್ಥಿತಿ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಸಾಮಾನ್ಯ ಜನರು ಈ ಯುದ್ಧದ ಅನಿಶ್ಚಿತತೆಯ ನಡುವೆ ಭಯದಿಂದ ಬದುಕುವಂತಾಗಿದೆ.