ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಈಗ ಹಿಂದೂ ಮಹಾಸಾಗರಕ್ಕೂ ವ್ಯಾಪಿಸಿದೆ. ಬುಧವಾರ ಮುಂಜಾನೆ ಶ್ರೀಲಂಕಾದ ಗಾಲೆ ಬಂದರು ನಗರದ ದಕ್ಷಿಣಕ್ಕೆ ಸುಮಾರು 40 ನಾಟಿಕಲ್ ಮೈಲಿ ದೂರದಲ್ಲಿ ಇರಾನ್ ನೌಕಾಪಡೆಯ ಹೆಮ್ಮೆಯ ಯುದ್ಧನೌಕೆಯಾದ 'ಐಆರ್‌ಐಎಸ್ ದೇನಾ' ಜಲಸಮಾಧಿಯಾಗಿದೆ. ಜಲಂತರಂಗಿ ದಾಳಿಯಿಂದಾಗಿ ಈ ನೌಕೆ ಮುಳುಗಿದೆ ಎಂದು ವರದಿಯಾಗಿದ್ದು, ಇದು ಕಳೆದ ಹಲವು ದಶಕಗಳಲ್ಲೇ ನಡೆದ ಅತ್ಯಂತ ಭೀಕರ ನೌಕಾ ಸಂಘರ್ಷ ಎಂದು ವಿಶ್ಲೇಷಿಸಲಾಗುತ್ತಿದೆ.
ಇರಾನ್ ನೌಕಾಪಡೆಯ ದಕ್ಷಿಣ ಫ್ಲೀಟ್‌ನ ಹೆಮ್ಮೆಯಾಗಿದ್ದ 'ಮೌಡ್ಜ್-ಕ್ಲಾಸ್' ಫ್ರಿಗೇಟ್ 'ಐಆರ್‌ಐಎಸ್ ದೇನಾ', ಭಾರತದ ವಿಶಾಖಪಟ್ಟಣದಲ್ಲಿ ನಡೆದ 'ಮಿಲನ್ 2026' ಬಹುರಾಷ್ಟ್ರೀಯ ನೌಕಾ ಸಮರಭ್ಯಾಸದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿತ್ತು. ಶ್ರೀಲಂಕಾದ ಕರಾವಳಿಯ ಸಮೀಪದಲ್ಲಿದ್ದಾಗ ನೌಕೆಯ ತಳಭಾಗದಲ್ಲಿ ಭಾರಿ ಸ್ಪೋಟ ಸಂಭವಿಸಿದೆ. ಈ ಸ್ಫೋಟದ ತೀವ್ರತೆಗೆ ನೌಕೆಯ ಹೊರಕವಚವು ಸಂಪೂರ್ಣವಾಗಿ ಹಾನಿಗೊಳಗಾಗಿ, ಕೆಲವೇ ಕ್ಷಣಗಳಲ್ಲಿ ಸಮುದ್ರದ ಪಾಲಾಗಿದೆ. ದಾಳಿ ನಡೆಸಿದ ಜಲಂತರಂಗಿ ಯಾವ ದೇಶಕ್ಕೆ ಸೇರಿದ್ದು ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲವಾದರೂ, ಈ ಭಾಗದಲ್ಲಿ ಸಕ್ರಿಯವಾಗಿರುವ ಅಮೆರಿಕ ಮತ್ತು ಇಸ್ರೇಲ್ ನೌಕಾಪಡೆಗಳ ಮೇಲೆ ಅನುಮಾನ ವ್ಯಕ್ತವಾಗಿದೆ.
ಈ ಯುದ್ಧನೌಕೆಯಲ್ಲಿ ಒಟ್ಟು 180 ಸಿಬ್ಬಂದಿಗಳಿದ್ದರು. ಶ್ರೀಲಂಕಾ ವಿದೇಶಾಂಗ ಸಚಿವ ವಿಜಿತ ಹೆರಾತ್ ಅವರು ಸಂಸತ್ತಿನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಘಟನೆಯಲ್ಲಿ 101 ನಾವಿಕರು ನಾಪತ್ತೆಯಾಗಿದ್ದಾರೆ. ಸಮುದ್ರದಲ್ಲಿನ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಉಳಿದವರನ್ನು ಪತ್ತೆ ಹಚ್ಚುವ ಸಾಧ್ಯತೆ ಕ್ಷೀಣಿಸುತ್ತಿದೆ. ಸುಮಾರು 78 ನಾವಿಕರು ಗಾಯಗೊಂಡಿದ್ದು, ಅವರಲ್ಲಿ 32 ಜನರನ್ನು ಶ್ರೀಲಂಕಾ ನೌಕಾಪಡೆಯು ಸಾವು-ಬದುಕಿನ ನಡುವೆ ರಕ್ಷಿಸಿದೆ. ರಕ್ಷಿಸಲ್ಪಟ್ಟವರಲ್ಲಿ ಹೆಚ್ಚಿನವರು ಭೀಕರ ಸುಟ್ಟ ಗಾಯಗಳು ಮತ್ತು ಸ್ಫೋಟದಿಂದ ಉಂಟಾದ ಗಂಭೀರ ಆಘಾತಗಳಿಗೆ ಒಳಗಾಗಿದ್ದಾರೆ.
ದುರಂತದ ಸುಳಿವು ಸಿಗುತ್ತಿದ್ದಂತೆಯೇ ಶ್ರೀಲಂಕಾ ನೌಕಾಪಡೆ ಮತ್ತು ವಾಯುಪಡೆ ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ. ಎರಡು ಬೃಹತ್ ಹಡಗುಗಳು ಮತ್ತು ಬೀಚ್‌ಕ್ರಾಫ್ಟ್ ವಿಮಾನವನ್ನು ಸ್ಥಳಕ್ಕೆ ರವಾನಿಸಲಾಗಿದೆ. ಗಾಯಗೊಂಡ ನಾವಿಕರನ್ನು ಗಾಲೆಯ ಕರಾಪಿಟಿಯಾ ಬೋಧನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ನಾಪತ್ತೆಯಾದವರಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆಯಾದರೂ ಸಮುದ್ರದ ಪ್ರಕ್ಷುಬ್ಧ ವಾತಾವರಣವು ಕಾರ್ಯಾಚರಣೆಗೆ ಅಡ್ಡಿಯುಂಟುಮಾಡುತ್ತಿದೆ.
ಈ ಘಟನೆಯು ಇರಾನ್ ಮತ್ತು ಅಮೆರಿಕ-ಇಸ್ರೇಲ್ ಕೂಟದ ನಡುವಿನ ಐದು ದಿನಗಳ ಸಂಘರ್ಷವನ್ನು ಹೊಸ ಮತ್ತು ಅಪಾಯಕಾರಿ ಹಂತಕ್ಕೆ ಕೊಂಡೊಯ್ದಿದೆ. ಅಂತರಾಷ್ಟ್ರೀಯ ಜಲಸೀಮೆಯಲ್ಲಿ ಇಂತಹ ಭೀಕರ ದಾಳಿ ನಡೆದಿರುವುದು ಹಿಂದೂ ಮಹಾಸಾಗರದ ಭದ್ರತೆಯ ಬಗ್ಗೆ ಆತಂಕ ಮೂಡಿಸಿದೆ. ಇದು ಕೇವಲ ಎರಡು ದೇಶಗಳ ನಡುವಿನ ಸಮರವಲ್ಲದೆ, ಇಡೀ ಪ್ರದೇಶದ ಸಾಗರಯಾನ ಮತ್ತು ವ್ಯಾಪಾರದ ಮೇಲೆ ಕರಿನೆರಳು ಬೀರಿದೆ.