Mar 27, 2026 Languages : ಕನ್ನಡ | English

83ನೇ ಅಲೆಯ ಭೀಕರ ದಾಳಿಗೆ ಕ್ಷಣಗಣನೆ - ಅಮೆರಿಕ ಸೇನಾಪಡೆಗಳ ವಿರುದ್ಧ ಇರಾನ್ ಸೇನೆಯ 'ಮಹಾಯುದ್ಧ'ದ ಘೋಷಣೆ!!

ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ತಾರಕಕ್ಕೇರಿದ್ದು, ಇರಾನ್ ಸರ್ಕಾರ ಅಲ್ಲಿನ ನಾಗರಿಕರಿಗೆ ಅತ್ಯಂತ ಭಯಾನಕ ಎಚ್ಚರಿಕೆಯೊಂದನ್ನು ನೀಡಿದೆ. "ಅಮೆರಿಕ ಸೇನಾಪಡೆಗಳು ಎಲ್ಲೆಲ್ಲಿ ನೆಲೆಗೊಂಡಿವೆಯೋ, ಆ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡಿ," ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (IRGC) ಸೂಚನೆ ನೀಡಿದೆ.

ಯುದ್ಧದ ಮುನ್ಸೂಚನೆ? ಇರಾನ್ ನೀಡಿದ ತುರ್ತು ಸಂದೇಶ ಜಗತ್ತನ್ನು ಬೆಚ್ಚಿಬೀಳಿಸಿದೆ!
ಯುದ್ಧದ ಮುನ್ಸೂಚನೆ? ಇರಾನ್ ನೀಡಿದ ತುರ್ತು ಸಂದೇಶ ಜಗತ್ತನ್ನು ಬೆಚ್ಚಿಬೀಳಿಸಿದೆ!

ಇರಾನ್ ಸುಮ್ಮನೆ ಕೂರುವ ಲಕ್ಷಣ ಕಾಣಿಸುತ್ತಿಲ್ಲ. ಗುರುವಾರವಷ್ಟೇ ತನ್ನ ಭೀಕರ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಅಮೆರಿಕ ಮತ್ತು ಇಸ್ರೇಲಿ ಮಿಲಿಟರಿ ಬೇಸ್‌ಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಘೋಷಿಸಿದೆ. ಇದನ್ನು ಅವರು 'ಆಪರೇಷನ್ ಟ್ರೂ ಪ್ರಾಮಿಸ್ 4' (Operation True Promise 4) ಎಂದು ಕರೆದಿದ್ದಾರೆ. ಈಗಾಗಲೇ 83ನೇ ಅಲೆಯ ದಾಳಿಗೆ ಸಿದ್ಧತೆ ನಡೆಸಿರುವ ಇರಾನ್, ನಾಗರಿಕರ ಹಾನಿ ತಪ್ಪಿಸಲು ಈ ಮುನ್ನೆಚ್ಚರಿಕೆ ನೀಡಿದೆ.

ಅಮೆರಿಕ ಮತ್ತು ಇಸ್ರೇಲಿ ಪಡೆಗಳ ವಿರುದ್ಧ ಇರಾನ್ ಸಖತ್ ಕೆಂಡಾಮಂಡಲವಾಗಿದೆ. "ತಮ್ಮ ಮಿಲಿಟರಿ ನೆಲೆಗಳನ್ನು ರಕ್ಷಿಸಿಕೊಳ್ಳುವ ಧೈರ್ಯವಿಲ್ಲದ ಅಮೆರಿಕನ್-ಜಿಯೋನಿಸ್ಟ್ ಪಡೆಗಳು, ಇಸ್ಲಾಂ ಹೋರಾಟಗಾರರ ಭಯದಿಂದ ಮುಗ್ಧ ನಾಗರಿಕರನ್ನು 'ಮಾನವ ಗುರಾಣಿ'ಯಾಗಿ ಬಳಸಿಕೊಳ್ಳುತ್ತಿವೆ," ಎಂದು ಇರಾನ್ ಗಂಭೀರ ಆರೋಪ ಮಾಡಿದೆ. ನಮ್ಮ ದೇಶದ ಪ್ರಮುಖ ವ್ಯಕ್ತಿಗಳನ್ನು ಕೊಂದ ಅಮೆರಿಕ ಮತ್ತು ಇಸ್ರೇಲ್ ಪಡೆಗಳನ್ನು ನಿರ್ಮೂಲನೆ ಮಾಡುವುದು ನಮ್ಮ ಕರ್ತವ್ಯ, ಹಾಗಾಗಿ ಅವರ ಸೇನಾ ನೆಲೆಗಳ ಹತ್ತಿರ ಸುಳಿಯಬೇಡಿ ಎಂದು ಇರಾನ್ ನಾಗರಿಕರಿಗೆ ತಿಳಿಸಿದೆ.

ಟ್ರಂಪ್ ಹೇಳಿಕೆಗೆ ಇರಾನ್ ತಿರುಗೇಟು

ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ಇರಾನ್ ಮಾತುಕತೆಗಾಗಿ ಹಪಹಪಿಸುತ್ತಿದೆ" ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಇರಾನ್‌ನ ಲೆಫ್ಟಿನೆಂಟ್ ಕರ್ನಲ್ ಇಬ್ರಾಹಿಂ ಝೋಲ್ಫಾಘರಿ ಅವರು ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ. "ಮಧ್ಯಪ್ರಾಚ್ಯದಲ್ಲಿ ನೀವು ಮಾಡಿರುವ ಯಾವುದೇ ಆರ್ಥಿಕ ಹೂಡಿಕೆಯ ಕುರುಹು ಇಲ್ಲದಂತೆ ಮಾಡುತ್ತೇವೆ. ನಮ್ಮ ಉದ್ದೇಶ ಈಡೇರುವವರೆಗೂ ಹಳೆಯ ಇಂಧನ ಮತ್ತು ತೈಲ ಬೆಲೆಗಳನ್ನು ನೀವು ಕನಸಿನಲ್ಲೂ ನೋಡಲು ಸಾಧ್ಯವಿಲ್ಲ," ಎಂದು ಅಮೆರಿಕದ ಆರ್ಥಿಕತೆಗೆ ಪೆಟ್ಟು ನೀಡುವ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ ಈ ಸರಣಿ ಎಚ್ಚರಿಕೆಗಳಿಂದಾಗಿ ಪಶ್ಚಿಮ ಏಷ್ಯಾದಲ್ಲಿ ವಾಸಿಸುತ್ತಿರುವ ಜನರಲ್ಲಿ ನಡುಕ ಶುರುವಾಗಿದೆ. ಪ್ರೆಸ್ ಟಿವಿ ಮೂಲಕ ರವಾನೆಯಾಗಿರುವ ಈ ಸಂದೇಶವು ಯುದ್ಧದ ಮುನ್ಸೂಚನೆಯಂತೆ ಕಾಣುತ್ತಿದ್ದು, ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಮತ್ತು ಇಂಧನ ಸರಬರಾಜಿನ ಮೇಲೆ ಇದು ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಮೆರಿಕ ಮತ್ತು ಇರಾನ್ ನಡುವಿನ ಈ 'ಇಗೋ' ಫೈಟ್ ಈಗ ಸಾಮಾನ್ಯ ಜನರ ಬದುಕನ್ನು ಬೀದಿಗೆ ತರುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಸಂಘರ್ಷ ಎಲ್ಲಿಗೆ ಹೋಗಿ ನಿಲ್ಲುತ್ತದೋ ಕಾದು ನೋಡಬೇಕು.

Latest News