Mar 1, 2026 Languages : ಕನ್ನಡ | English

ಸಾಮಾನ್ಯರ ಜೇಬಿಗೆ ಕತ್ತರಿ? ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ!!

ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಿಂದ ಇರಾನ್ ನಲುಗಿಹೋಗಿದೆ, ಈ ಭೀಕರ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಮೇನಿ ಅವರು ಹತರಾಗಿರುವುದು ಇಡೀ ವಿಶ್ವದ ಗಮನ ಸೆಳೆದಿದೆ. 

ಹರ್ಮುಜ್ ಜಲಮಾರ್ಗದಲ್ಲಿ ತೈಲ ಟ್ಯಾಂಕರ್ ಮೇಲೆ ಮಿಸೈಲ್ ದಾಳಿ
ಹರ್ಮುಜ್ ಜಲಮಾರ್ಗದಲ್ಲಿ ತೈಲ ಟ್ಯಾಂಕರ್ ಮೇಲೆ ಮಿಸೈಲ್ ದಾಳಿ

ಖಮೇನಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಭಾರತ ಸೇರಿದಂತೆ ವಿಶ್ವದಾದ್ಯಂತ ಇರುವ ಶಿಯಾ ಮುಸ್ಲಿಮರು ಕಂಬನಿ ಮಿಡಿಯುತ್ತಿದ್ದಾರೆ. ಆದರೆ, ಈ ಹತ್ಯೆಯಿಂದ ಕೆರಳಿರುವ ಇರಾನ್, ನೇರವಾಗಿ ಅಮೆರಿಕ ಅಥವಾ ಇಸ್ರೇಲ್ ಮೇಲೆ ತಿರುಗೇಟು ನೀಡಲು ಸಾಧ್ಯವಾಗದೆ, ತನ್ನ ಆಕ್ರೋಶವನ್ನು ಇತರ ರಾಷ್ಟ್ರಗಳ ಮೇಲೆ ತೀರಿಸಿಕೊಳ್ಳುತ್ತಿದೆ.

ಇರಾನ್‌ನ ಈ ಆಕ್ರೋಶಕ್ಕೆ ಈಗ ಭಾರತೀಯ ಸಿಬ್ಬಂದಿಗಳಿದ್ದ ತೈಲ ಟ್ಯಾಂಕರ್ ಬಲಿಯಾಗಿದೆ. ಒಮಾನ್ ಸಮೀಪದ ಹರ್ಮುಜ್ ಜಲಮಾರ್ಗದಲ್ಲಿ ಸಾಗುತ್ತಿದ್ದ ಬೃಹತ್ ತೈಲ ಹಡಗಿನ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದೆ. ಈ ಹಡಗಿನಲ್ಲಿ ಒಟ್ಟು 20 ಮಂದಿ ಸಿಬ್ಬಂದಿಗಳಿದ್ದರು, ಅವರ ಪೈಕಿ 15 ಮಂದಿ ಭಾರತೀಯರು ಎಂಬುದು ಆತಂಕಕಾರಿ ವಿಷಯವಾಗಿದೆ. ಇರಾನ್ ಉಡಾಯಿಸಿದ ಮಿಸೈಲ್ ಹಡಗಿಗೆ ನೇರವಾಗಿ ಅಪ್ಪಳಿಸಿದ ಪರಿಣಾಮ, ಸಮುದ್ರದ ಮಧ್ಯದಲ್ಲೇ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ತೈಲ ಹೊತ್ತಿ ಉರಿದಿದೆ. ಈ ದಾಳಿಯಲ್ಲಿ ನಾಲ್ವರು ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಒಮಾನ್‌ನ ಕಡಲ ಭದ್ರತಾ ಪಡೆ (Maritime Security) ಸ್ಥಳಕ್ಕೆ ಧಾವಿಸಿ ಅವರ ರಕ್ಷಣೆಗೆ ಮುಂದಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹರ್ಮುಜ್ ಜಲಮಾರ್ಗವು ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ. ಹೆಚ್ಚಿನ ದೇಶಗಳಿಗೆ ತೈಲ ಪೂರೈಕೆಯಾಗುವುದು ಇದೇ ಹಾದಿಯ ಮೂಲಕ. ಈಗ ಇರಾನ್ ಈ ಮಾರ್ಗವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಏರುಪೇರು ಉಂಟುಮಾಡಲಿದೆ. ಭಾರತಕ್ಕೆ ಆಮದು ಮಾಡಿಕೊಳ್ಳುವ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಇದರ ನೇರ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಬಹುದು. ಸರಕು ಸಾಗಾಣಿಕೆ ಸ್ಥಗಿತಗೊಂಡರೆ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗುವ ಭೀತಿ ಎದುರಾಗಿದೆ.

ಅರಬ್ ರಾಷ್ಟ್ರಗಳ ಮೇಲೆ ಇರಾನ್ ದಾಳಿ

ಇರಾನ್ ಕೇವಲ ಹಡಗುಗಳ ಮೇಲೆ ಮಾತ್ರವಲ್ಲದೆ, ತನ್ನ ನೆರೆಯ ಅರಬ್ ರಾಷ್ಟ್ರಗಳ ಮೇಲೂ ಮುಗಿಬಿದ್ದಿದೆ. ದುಬೈ, ಅಬುಧಾಬಿ ಮತ್ತು ಕುವೈಟ್‌ನಂತಹ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ವಿಶೇಷವಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆಯೂ ದಾಳಿ ನಡೆದಿರುವುದು ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿದೆ. ಅಮೆರಿಕದ ಸೇನಾ ನೆಲೆಗಳನ್ನು ನಾಶಪಡಿಸುವ ಉದ್ದೇಶದಿಂದ ಇರಾನ್ ನಡೆಸುತ್ತಿರುವ ಈ ದಾಳಿಗಳಲ್ಲಿ ಸಾಮಾನ್ಯ ನಾಗರಿಕರು ಕೂಡ ಜೀವ ಕಳೆದುಕೊಳ್ಳುತ್ತಿದ್ದಾರೆ.

ಖಮೇನಿ ಹತ್ಯೆಯ ನಂತರ ಇರಾನ್ ನಿಯಂತ್ರಣ ತಪ್ಪಿದಂತೆ ವರ್ತಿಸುತ್ತಿದೆ. ಬಲಿಷ್ಠ ರಾಷ್ಟ್ರಗಳಾದ ಅಮೆರಿಕ ಮತ್ತು ಇಸ್ರೇಲ್ ಎದುರು ಶಕ್ತಿ ಪ್ರದರ್ಶನ ಮಾಡಲು ಸಾಧ್ಯವಾಗದ ಇರಾನ್, ಈ ರೀತಿಯ "ಪರೋಕ್ಷ ದಾಳಿ"ಗಳ ಮೂಲಕ ವಿಶ್ವಕ್ಕೆ ತೊಂದರೆ ನೀಡುತ್ತಿದೆ.