ಅಥೇನ್ಸ್ (ಗ್ರೀಸ್): ಭಾರೀ ಮಳೆಯಿಂದ ಗ್ರೀಸ್ ದೇಶ ತತ್ತರಿಸಿ ಹೋಗಿದೆ. ಅನಿರೀಕ್ಷಿತ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳಲ್ಲಿ ನದಿಯಂತೆ ನೀರು ಹರಿಯುತ್ತಿದೆ. ಸ್ಯಾಂಟೋರಿನಿ ಪ್ರದೇಶದಲ್ಲಿ ಮಳೆಯಿಂದ ನೀರು ಮಣ್ಣು ಸಮೇತ ಹರಿದು, ಇಡೀ ಪ್ರದೇಶ ಕೆಂಪು ಬಣ್ಣಕ್ಕೆ ತಿರುಗಿರುವ ದೃಶ್ಯ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಮನೆ ಬಳಕೆಯ ವಸ್ತುಗಳು ನೀರಿನಲ್ಲಿ ತೇಲಿ ಹೋಗಿದ್ದು, ಜನರು ತಮ್ಮ ಆಸ್ತಿಪಾಸ್ತಿಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಮಳೆಯಿಂದಾಗಿ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿವೆ. ಅನೇಕ ಮನೆಗಳು ಹಾನಿಗೊಳಗಾಗಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.
ಸ್ಥಳೀಯರು, “ಮಳೆ ಯಾವಾಗ ನಿಲ್ಲುತ್ತೋ ಅಂತ ಶಪಿಸುವಂತಾಗಿದೆ. ಇಂತಹ ಮಳೆಯನ್ನು ನಾವು ಎಂದಿಗೂ ನೋಡಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ತಜ್ಞರ ಅಭಿಪ್ರಾಯದಲ್ಲಿ, ಹವಾಮಾನ ಬದಲಾವಣೆ ಮತ್ತು ಅತಿಯಾದ ಮಳೆಗಾಲದ ಪರಿಣಾಮವಾಗಿ ಇಂತಹ ಅವಾಂತರಗಳು ಹೆಚ್ಚಾಗುತ್ತಿವೆ.
ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದ್ದು, ರಕ್ಷಣಾ ತಂಡಗಳನ್ನು ನಿಯೋಜಿಸಿದೆ. ಜನರಿಗೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಕಲ್ಪಿಸಲಾಗುತ್ತಿದೆ. ಆದರೆ, ಮಳೆ ಇನ್ನೂ ಮುಂದುವರಿಯುತ್ತಿರುವುದರಿಂದ ಪರಿಸ್ಥಿತಿ ಗಂಭೀರವಾಗಿಯೇ ಉಳಿದಿದೆ. ಹೌದು, ಈ ಘಟನೆ ಗ್ರೀಸ್ ದೇಶದ ಜನರಿಗೆ ಕೇವಲ ಪ್ರಕೃತಿ ಅವಾಂತರವಲ್ಲ, ಹವಾಮಾನ ಬದಲಾವಣೆಯ ಗಂಭೀರ ಎಚ್ಚರಿಕೆಯಾಗಿದೆ. ಜನರು ತಮ್ಮ ಜೀವನವನ್ನು ಪುನಃ ಸಾಮಾನ್ಯ ಸ್ಥಿತಿಗೆ ತರುವ ಹೋರಾಟದಲ್ಲಿ ತೊಡಗಿದ್ದಾರೆ.