ಅಮೆರಿಕಾದಲ್ಲಿ ನಡುಕ ಹುಟ್ಟಿಸಿದ ಹೆಬ್ಬಾವಿನ 120 ಮೊಟ್ಟೆಗಳು - ಕಾಡನ್ನೇ ಸರ್ವನಾಶ ಮಾಡ್ತಿರೋ ಭೀಕರ ಶಿಕಾರಿಗಳ ಕಥೆ!!

ಪ್ರಕೃತಿಯಲ್ಲಿ ಒಂದು ಜಾಗದ ಪ್ರಾಣಿ ಇನ್ನೊಂದು ಹೊಸ ಜಾಗಕ್ಕೆ ಎಂಟ್ರಿ ಕೊಟ್ಟು, ಅಲ್ಲಿ ತನ್ನ ಸಂತತಿಯನ್ನು ಬೆಳೆಸಲು ಶುರು ಮಾಡಿದರೆ ಇಡೀ ಪರಿಸರವೇ ಹೇಗೆ ತಲ್ಲಣಗೊಳ್ಳುತ್ತದೆ ಎಂಬುದಕ್ಕೆ ಅಮೆರಿಕಾದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ. ಅಮೆರಿಕಾದ ಫ್ಲೋರಿಡಾದಲ್ಲಿರುವ ಪ್ರಸಿದ್ಧ ಜೌಗು ಪ್ರದೇಶ ‘ಎವರ್‌ಗ್ಲೇಡ್ಸ್’ನಿಂದ (Everglades) ಇತ್ತೀಚೆಗೆ ಬಂದಿರುವ ಒಂದು ಶಾಕಿಂಗ್ ಸುದ್ದಿ ವಿಜ್ಞಾನಿಗಳು ಮತ್ತು ಪರಿಸರ ಪ್ರೇಮಿಗಳ ನಿದ್ದೆ ಗೆಡಿಸಿದೆ. 

ಏಷ್ಯಾದ ಹೆಬ್ಬಾವು ಅಮೆರಿಕಾ ಕಾಡಿಗೆ; | Photo Credit: https://www.instagram.com/snakeaholic/reels/
ಏಷ್ಯಾದ ಹೆಬ್ಬಾವು ಅಮೆರಿಕಾ ಕಾಡಿಗೆ; | Photo Credit: https://www.instagram.com/snakeaholic/reels/

ಅಲ್ಲಿನ ಪ್ರಸಿದ್ಧ ಹಾವಿನ ಶಿಕಾರಿಯೊಬ್ಬನಿಗೆ ಜೌಗು ಕಾಡಿನ ಮಧ್ಯೆ ಬರ್ಮೀಸ್ ಹೆಬ್ಬಾವುಗಳ (Burmese Python) ಎರಡು ಬೃಹತ್ ಗೂಡುಗಳು ಸಿಕ್ಕಿವೆ. ಆ ಗೂಡುಗಳಲ್ಲಿ ಒಂದಲ್ಲ ಎರಡಲ್ಲ, ಬರೋಬ್ಬರಿ 120 ಮೊಟ್ಟೆಗಳು ಪತ್ತೆಯಾಗಿವೆ! ಈ ಮೊಟ್ಟೆಗಳು ಮಾತ್ರ ಒಡೆದು ಮರಿಗಳಾಗಿದ್ದರೆ, ಒಂದೇ ಸಲಕ್ಕೆ 120 ಭೀಕರ ಶಿಕಾರಿಗಳು ಇಡೀ ಕಾಡನ್ನು ನಾಶ ಮಾಡಲು ಸಿದ್ಧವಾಗುತ್ತಿದ್ದವು. ಸದ್ಯ ಈ ಭೀಕರ ಆವಿಷ್ಕಾರದ ಕಥೆ ಇಂಟರ್ನೆಟ್‌ನಲ್ಲಿ ಭಾರಿ ನಡುಕ ಹುಟ್ಟಿಸಿದೆ.

ಹುಲ್ಲಿನ ಪೊದೆಗಳ ಮಧ್ಯೆ ಸಿಕ್ಕಿತು ಮೊಟ್ಟೆಗಳ ರಾಶಿ;

ಫ್ಲೋರಿಡಾದ ಕಾಡುಗಳಲ್ಲಿ ನಿರಂತರವಾಗಿ ಹಾವುಗಳ ಬೇಟೆಯಾಡುವ ಕೆವಿನ್ ಪಾವ್ಲಿಡಿಸ್ (Kevin Pavlidis) ಎಂಬ ವೃತ್ತಿಪರ ಸ್ನೇಕ್ ಹಂಟರ್ ಈ ಭಯಾನಕ ಗೂಡುಗಳನ್ನು ಪತ್ತೆ ಹಚ್ಚಿದ್ದಾರೆ. ಕೆವಿನ್ ತಾವು ಪತ್ತೆ ಹಚ್ಚಿದ ಈ ದೃಶ್ಯವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಾದ ‘ಸ್ನೇಕಾಹೋಲಿಕ್’ನಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬಿಳಿ ಬಣ್ಣದ ದೊಡ್ಡ ದೊಡ್ಡ ಮೊಟ್ಟೆಗಳು ಪೊದೆಗಳ ಹಿಂದೆ ಅಡಗಿಸಿಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಎರಡು ಬೇರೆ ಬೇರೆ ಗೂಡುಗಳಲ್ಲಿ ಒಟ್ಟು 120 ಮೊಟ್ಟೆಗಳು ಸಿಕ್ಕಿವೆ. ಒಂದೇ ಜಾಗದಲ್ಲಿ ಇಷ್ಟೊಂದು ಮೊಟ್ಟೆಗಳು ಸಿಕ್ಕಿರುವುದನ್ನು ನೋಡಿದರೆ, ಹಲವು ಹೆಣ್ಣು ಹೆಬ್ಬಾವುಗಳು ಒಟ್ಟಿಗೆ ಸೇರಿ ಇಲ್ಲಿ ಸಂತಾನೋತ್ಪತ್ತಿ ನಡೆಸುತ್ತಿವೆ ಎಂದು ವನ್ಯಜೀವಿ ತಜ್ಞರು ಅಂದಾಜಿಸಿದ್ದಾರೆ.

ಅಮೆರಿಕಾ ಕಾಡಿಗೆ ಏಷ್ಯಾದ ಹೆಬ್ಬಾವು ಬಂದಿದ್ದು ಹೇಗೆ?

ನಿಮಗೆ ಆಶ್ಚರ್ಯವಾಗಬಹುದು, ಈ ಬರ್ಮೀಸ್ ಹೆಬ್ಬಾವುಗಳು ಅಮೆರಿಕಾದ ಮೂಲ ನಿವಾಸಿಗಳಲ್ಲ! ಇವು ಮೂಲತಃ ಆಗ್ನೇಯ ಏಷ್ಯಾ (Southeast Asia) ದೇಶಗಳಲ್ಲಿ ಕಂಡುಬರುವ ಹಾವುಗಳು. ವರ್ಷಗಳ ಹಿಂದೆ ಅಮೆರಿಕಾದ ಜನರು ಇವುಗಳನ್ನು ವಿದೇಶಗಳಿಂದ ತಂದು ಸಾಕುಪ್ರಾಣಿಗಳಾಗಿ ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದರು. ಆದರೆ ಈ ಹಾವುಗಳು ಬೆಳೆದು 15 ಅಡಿಗಿಂತಲೂ ದೊಡ್ಡದಾದಾಗ ಅಥವಾ ಪಂಜರದಿಂದ ತಪ್ಪಿಸಿಕೊಂಡಾಗ, ಸಾಕಲು ಸಾಧ್ಯವಾಗದೇ ಜನರು ಇವುಗಳನ್ನು ಕಾಡಿಗೆ ತಂದು ಬಿಟ್ಟಿದ್ದಾರೆ. ಫ್ಲೋರಿಡಾದ ಬಿಸಿ ಮತ್ತು ತೇವಭರಿತ ವಾತಾವರಣ ಈ ಹೆಬ್ಬಾವುಗಳಿಗೆ ಸಖತ್ ಸೆಟ್ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಕಾಡುಗಳಲ್ಲಿ ಇವುಗಳನ್ನು ಬೇಟೆಯಾಡುವ ಬೇರೆ ಯಾವುದೇ ದೊಡ್ಡ ಪ್ರಾಣಿಗಳು ಇರಲಿಲ್ಲ. ಹಾಗಾಗಿ ಇವುಗಳ ಜನಸಂಖ್ಯೆ ರಾಕೆಟ್ ವೇಗದಲ್ಲಿ ಬೆಳೆದು ನಿಂತಿದೆ.

ಮೊಸಳೆ ಮತ್ತು ಜಿಂಕೆಗಳನ್ನೂ ಜೀವಂತ ನುಂಗುವ ರಾಕ್ಷಸರು!

ಈ ಬರ್ಮೀಸ್ ಹೆಬ್ಬಾವುಗಳು ನೋಡಲು ಎಷ್ಟು ದೈತ್ಯಾಕಾರವಾಗಿ ಇರುತ್ತವೆಯೋ, ಅಷ್ಟೇ ಕ್ರೂರ ಶಿಕಾರಿಗಳು ಕೂಡ ಹೌದು. ಪೂರ್ಣವಾಗಿ ಬೆಳೆದ ಒಂದು ಹೆಬ್ಬಾವು 15 ರಿಂದ 20 ಅಡಿ ಉದ್ದ ಇರುತ್ತದೆ. ಇವು ಕಾಡಿನ ಪಕ್ಷಿಗಳು, ಸಣ್ಣ ಜೀವಿಗಳು ಮಾತ್ರವಲ್ಲದೆ ದೊಡ್ಡ ಪ್ರಾಣಿಗಳನ್ನು ಬಿಡುತ್ತಿಲ್ಲ. ಇವುಗಳ ಹಸಿವು ಎಷ್ಟಿದೆ ಎಂದರೆ, ಇಡೀ ಜಿಂಕೆ ಮತ್ತು ಬೃಹತ್ ಮೊಸಳೆಗಳನ್ನು ಇವು ಜೀವಂತವಾಗಿ ನುಂಗಿ ನೀರು ಕುಡಿಯುತ್ತಿವೆ! ಕಳೆದ ಡಿಸೆಂಬರ್ 2022 ರಲ್ಲಿ ನೇಪಲ್ಸ್ ಎಂಬ ಪ್ರದೇಶದ ಹತ್ತಿರ ಸಿಕ್ಕಿದ 15 ಅಡಿ ಉದ್ದದ ಹೆಬ್ಬಾವಿನ ಹೊಟ್ಟೆಯನ್ನು ಕತ್ತರಿಸಿ ನೋಡಿದಾಗ, ಅದರೊಳಗೆ ಇಡೀ ಬಿಳಿ ಬಾಲದ ಜಿಂಕೆಯೊಂದು ಪತ್ತೆಯಾಗಿದ್ದು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು.

ಶೇ. 99 ರಷ್ಟು ಸ್ಥಳೀಯ ಪ್ರಾಣಿಗಳು ನಾಶ!

ಈ ವಿದೇಶಿ ಹೆಬ್ಬಾವುಗಳ ಅತಿಯಾದ ಶಿಕಾರಿಯಿಂದಾಗಿ ಎವರ್‌ಗ್ಲೇಡ್ಸ್ ಕಾಡಿನ ಮೂಲ ಪ್ರಾಣಿಗಳು ಈಗ ಸಂಪೂರ್ಣವಾಗಿ ವಿನಾಶದ ಅಂಚಿಗೆ ತಲುಪಿವೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ನೀಡಿರುವ ಅಧಿಕೃತ ವರದಿಯ ಪ್ರಕಾರ, ಈ ಹೆಬ್ಬಾವುಗಳು ಕಾಡನ್ನು ಆಕ್ರಮಿಸಿಕೊಂಡಾಗಿನಿಂದ ಅಲ್ಲಿನ ರಕೂನ್ ಪ್ರಾಣಿಗಳ ಸಂಖ್ಯೆ ಶೇಕಡಾ 99.3 ರಷ್ಟು, ಒಪೊಸಮ್ ಪ್ರಾಣಿಗಳ ಸಂಖ್ಯೆ ಶೇಕಡಾ 98.9 ರಷ್ಟು ಮತ್ತು ಬಾಬ್‌ಕ್ಯಾಟ್ ಎಂಬ ಕಾಡು ಬೆಕ್ಕುಗಳ ಸಂಖ್ಯೆ ಶೇಕಡಾ 87.5 ರಷ್ಟು ಕುಸಿದಿದೆ. ಇವುಗಳ ಜೊತೆಗೆ ಸ್ಥಳೀಯ ನರಿಗಳು ಮತ್ತು ಮೊಲಗಳು ಈಗ ಹೆಸರಿಗಷ್ಟೇ ಉಳಿದುಕೊಂಡಿವೆ.

ಸರ್ಕಾರದ ‘ಪೈಥಾನ್ ಚಾಲೆಂಜ್’ ಅಭಿಯಾನ!

ಈ ಭೀಕರ ಪರಿಸರ ಕಂಟಕದಿಂದ ಕಾಡನ್ನು ರಕ್ಷಿಸಲು ಫ್ಲೋರಿಡಾ ಸರ್ಕಾರ ಪ್ರತ್ಯೇಕ ವನ್ಯಜೀವಿ ಏಜೆನ್ಸಿಗಳನ್ನು ನೇಮಿಸಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಕಾಡಿನಲ್ಲಿ ಹಾವುಗಳನ್ನು ಪತ್ತೆ ಹಚ್ಚಲು ಹಂಟರ್‌ಗಳಿಗೆ ದೊಡ್ಡ ಮಟ್ಟದ ಸಂಬಳ ನೀಡಲಾಗುತ್ತಿದೆ. ಅದರಲ್ಲೂ ಮೊಟ್ಟೆ ಇಡುವ ಹೆಣ್ಣು ಹಾವನ್ನು ಹಿಡಿದರೆ ಬಂಪರ್ ಬಹುಮಾನ ಸಿಗುತ್ತದೆ. ಇಷ್ಟೇ ಅಲ್ಲದೆ, ಪ್ರತಿ ವರ್ಷ ಸಾರ್ವಜನಿಕರಿಗಾಗಿ ‘ಫ್ಲೋರಿಡಾ ಪೈಥಾನ್ ಚಾಲೆಂಜ್’ (Florida Python Challenge) ಎಂಬ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಯಾರು ಅತಿ ಹೆಚ್ಚು ಮತ್ತು ಅತಿ ದೊಡ್ಡ ಹೆಬ್ಬಾವುಗಳನ್ನು ಹಿಡಿಯುತ್ತಾರೋ ಅವರಿಗೆ ಸರ್ಕಾರದಿಂದ ಲಕ್ಷ ಲಕ್ಷ ನಗದು ಪುರಸ್ಕಾರಗಳನ್ನು ನೀಡಿ ಗೌರವಿಸಲಾಗುತ್ತಿದೆ.  

Latest News