ಬೊಲಿವಿಯಾ ರಾಜಧಾನಿ ಲಾ ಪಾಜ್ ಸಮೀಪದ ಎಲ್ ಆಲ್ಟೊ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಒಂದು ಭಯಾನಕ ವಿಮಾನ ದುರಂತ ಸಂಭವಿಸಿದೆ. ಸರ್ಕಾರದ ಕೋಟ್ಯಂತರ ರೂಪಾಯಿ ಮೌಲ್ಯದ ಹೊಸ ನೋಟುಗಳನ್ನು ಹೊತ್ತೊಯ್ಯುತ್ತಿದ್ದ 'ಹರ್ಕ್ಯುಲಸ್ ಸಿ-130' Hercules C-130 ಎಂಬ ಕಾರ್ಗೋ ವಿಮಾನವು ಇಳಿಯುವ ಸಮಯದಲ್ಲಿ ನಿಯಂತ್ರಣ ತಪ್ಪಿ ರನ್-ವೇಯಿಂದ ಜಾರಿ ಪಕ್ಕದ ಹೆದ್ದಾರಿಗೆ ನುಗ್ಗಿದೆ.
ಈ ಭೀಕರ ಪತನದ ಸಮಯದಲ್ಲಿ ವಿಮಾನವು ರಸ್ತೆಯಲ್ಲಿದ್ದ ವಾಹನಗಳ ಮೇಲೆ ಅಪ್ಪಳಿಸಿದ್ದಲ್ಲದೆ, ನಂತರ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಸುಮಾರು 15 ಜನರು ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತರಲ್ಲಿ ವಿಮಾನದ ಸಿಬ್ಬಂದಿ ಹಾಗೂ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಸೇರಿದ್ದಾರೆ ಎನ್ನಲಾಗಿದೆ. ಈ ಅಪಘಾತದ ತೀವ್ರತೆಗೆ ಸುಮಾರು 15ಕ್ಕೂ ಹೆಚ್ಚು ಕಾರುಗಳು ಮತ್ತು ಇತರ ವಾಹನಗಳು ಸಂಪೂರ್ಣವಾಗಿ ನುಜ್ಜುಗುಜ್ಜಾಗಿವೆ.
A C-130H Hercules with the Bolivian Air Force crashed earlier this evening on a major roadway outside of El Alto International Airport in La Paz, Bolivia, killing 15 and injuring more than 30. The C-130, which had departed from Santa Cruz several hours before carrying new… pic.twitter.com/uP1VTAaFNb
— OSINTdefender (@sentdefender) February 28, 2026
ರಸ್ತೆಯುದ್ದಕ್ಕೂ ನೋಟುಗಳ ರಾಶಿ
ವಿಮಾನವು ಬೊಲಿವಿಯಾದ ಸೆಂಟ್ರಲ್ ಬ್ಯಾಂಕ್‌ಗೆ ಸೇರಿದ ಹೊಸದಾಗಿ ಮುದ್ರಿಸಲಾದ ಕರೆನ್ಸಿಯನ್ನು ಸಾಗಿಸುತ್ತಿತ್ತು. ವಿಮಾನ ಪತನಗೊಂಡ ರಭಸಕ್ಕೆ ಅದರಲ್ಲಿದ್ದ ಹಣದ ಪೆಟ್ಟಿಗೆಗಳು ಒಡೆದು ಹೋಗಿದ್ದು, ಲಕ್ಷಾಂತರ ನೋಟುಗಳು ಹೆದ್ದಾರಿಯ ಉದ್ದಕ್ಕೂ ಗಾಳಿಯಲ್ಲಿ ಹಾರಿ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ರಸ್ತೆಯಲ್ಲಿ ಹಣ ಬಿದ್ದಿರುವುದನ್ನು ಕಂಡ ಸ್ಥಳೀಯ ಸಾರ್ವಜನಿಕರು ಮತ್ತು ದಾರಿಹೋಕರು ತಕ್ಷಣವೇ ಹಣವನ್ನು ಸಂಗ್ರಹಿಸಲು ಮುಗಿಬಿದ್ದರು. ಇದರಿಂದಾಗಿ ಸ್ಥಳದಲ್ಲಿ ಭಾರೀ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಮತ್ತು ಚೆಲ್ಲಿದ್ದ ಹಣವನ್ನು ರಕ್ಷಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಘಟನಾ ಸ್ಥಳದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಸ್ತೆಯಲ್ಲಿ ಶವಗಳು, ಧ್ವಂಸಗೊಂಡ ವಾಹನಗಳು ಮತ್ತು ಹಣದ ರಾಶಿ ಬಿದ್ದಿರುವುದು ಜನರನ್ನು ಬೆಚ್ಚಿಬೀಳಿಸಿದೆ.
ಬ್ಯಾಂಕ್ ಸ್ಪಷ್ಟನೆ ಮತ್ತು ತನಿಖೆ
ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಬೊಲಿವಿಯಾದ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷ ಡೇವಿಡ್ ಎಸ್ಪಿನೋಜಾ ಅವರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ರಸ್ತೆಯಲ್ಲಿ ಬಿದ್ದಿರುವ ನೋಟುಗಳಿಗೆ ಇನ್ನೂ ಕಾನೂನುಬದ್ಧ ಮಾನ್ಯತೆ ಸಿಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ನೋಟುಗಳು ಚಲಾವಣೆಗೆ ಬರಲು ಸಿದ್ಧವಾಗಿದ್ದರೂ, ಅವುಗಳಿಗೆ ಅಧಿಕೃತ ಸರಣಿ ಸಂಖ್ಯೆಗಳನ್ನು Serial Numbers ಇನ್ನೂ ನೀಡಿರಲಿಲ್ಲ. ಹೀಗಾಗಿ ಸಾರ್ವಜನಿಕರು ಆಯ್ದುಕೊಂಡ ಹಣದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಎಲ್ ಆಲ್ಟೊ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ವಾಯುಪಡೆಯ ಅಧಿಕಾರಿಗಳು ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಮಾನವ ತಪ್ಪೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ನಾಪತ್ತೆಯಾಗಿರುವ ವಿಮಾನದ ಸಿಬ್ಬಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ.