Mar 18, 2026 Languages : ಕನ್ನಡ | English

ರಾಜ್ಯಕ್ಕೆ ವರುಣನ ಎಂಟ್ರಿ - ಎಲ್ಲಿ ಸುರಿಯಿತು ಆಲಿಕಲ್ಲು? ಎಲ್ಲೆಲ್ಲಿ ಬಿರುಗಾಳಿ ಅಬ್ಬರ? ಪೂರ್ಣ ವರದಿ ಇಲ್ಲಿದೆ!!

ಕರ್ನಾಟಕದಲ್ಲಿ ಕಾಡುತ್ತಿದ್ದ ಭೀಕರ ಬೇಸಿಗೆಯ ಬಿಸಿಲಿಗೆ ಕೊನೆಗೂ ವರುಣದೇವ ತಂಪೆರೆದಿದ್ದಾನೆ. ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಜನರಲ್ಲಿ ಸಂತಸ ಮೂಡಿಸಿದೆ.

ಸುಡು ಬಿಸಿಲಿಗೆ ಬ್ರೇಕ್, ರಾಜ್ಯದಾದ್ಯಂತ ಆಲಿಕಲ್ಲು ಮಳೆಯ ಅಬ್ಬರ
ಸುಡು ಬಿಸಿಲಿಗೆ ಬ್ರೇಕ್, ರಾಜ್ಯದಾದ್ಯಂತ ಆಲಿಕಲ್ಲು ಮಳೆಯ ಅಬ್ಬರ

ಬೆಂಗಳೂರಿನಲ್ಲಿ 'ಕೂಲ್ ಕೂಲ್' ವಾತಾವರಣ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಅತಿಯಾದ ಸೆಖೆ ಇತ್ತು. ಆದರೆ ಇಂದು ಸಂಜೆ ಹೊತ್ತಿಗೆ ದಿಢೀರ್ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ನಗರದ ಹಲವೆಡೆ ಆಲಿಕಲ್ಲು ಮಳೆ ಸುರಿಯಿತು. ಮೆಜೆಸ್ಟಿಕ್, ಜಯನಗರ, ಶಾಂತಿನಗರ, ಮಾರ್ಕೆಟ್ ಮತ್ತು ಬಸವೇಶ್ವರ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ನೆಲದ ಮೇಲೆ ಮುತ್ತಿನಂತೆ ಬಿದ್ದ ಆಲಿಕಲ್ಲುಗಳನ್ನು ಕಂಡು ಸಿಟಿ ಮಂದಿ ಫುಲ್ ಖುಷ್ ಆಗಿದ್ದಾರೆ. ಈ ಮಳೆಯಿಂದಾಗಿ ನಗರದ ತಾಪಮಾನ ಗಣನೀಯವಾಗಿ ಇಳಿಕೆಯಾಗಿದ್ದು, ಹಿತವಾದ ವಾತಾವರಣ ನಿರ್ಮಾಣವಾಗಿದೆ.

ಜಮ್ಮು-ಕಾಶ್ಮೀರದಂತಾದ ದಾವಣಗೆರೆ!

ದಾವಣಗೆರೆ ಜಿಲ್ಲೆಯ ಗುಮ್ಮನೂರು, ಹೆಬ್ಬಾಳ್ ಮತ್ತು ಆನಗೋಡು ಭಾಗಗಳಲ್ಲಿ ಸುರಿದ ಆಲಿಕಲ್ಲು ಮಳೆ ಎಷ್ಟು ಜೋರಾಗಿತ್ತೆಂದರೆ, ರಸ್ತೆಗಳೆಲ್ಲಾ ಬಿಳಿ ಬಣ್ಣದ ಮಂಜಿನಿಂದ ಆವೃತವಾದಂತೆ ಕಾಣುತ್ತಿದ್ದವು. ಇದನ್ನು ನೋಡಿದ ಸ್ಥಳೀಯರು ತಮ್ಮ ಗ್ರಾಮಗಳು ಜಮ್ಮು-ಕಾಶ್ಮೀರದಂತೆ ಕಾಣುತ್ತಿವೆ ಎಂದು ಸಂಭ್ರಮಿಸಿದರು.

ಚಾಮರಾಜನಗರದಲ್ಲಿ ವರುಣನ ರುದ್ರನರ್ತನ

ಚಾಮರಾಜನಗರದಲ್ಲಿ ಮಳೆ ಬರಿ ತಂಪು ನೀಡಿದ್ದಲ್ಲದೆ, ಬಿರುಗಾಳಿಯೊಂದಿಗೆ ಅಬ್ಬರಿಸಿದೆ. ಭಾರಿ ಗಾಳಿಯ ರಭಸಕ್ಕೆ ತೆಂಗಿನ ಗರಿಗಳು ಉದುರಿ ಬಿದ್ದಿದ್ದು, ವಾಹನ ಸವಾರರು ರಸ್ತೆ ಕಾಣದೆ ಪರದಾಡುವಂತಾಯಿತು. ಸತತ ಎರಡು ದಿನಗಳಿಂದ ಸುರಿಯುತ್ತಿರುವ ಈ ಅಕಾಲಿಕ ಮಳೆಯಿಂದಾಗಿ ಜನರು ಅಚ್ಚರಿಗೊಂಡಿದ್ದರೆ, ರೈತರು ಬೆಳೆ ಹಾನಿಯ ಆತಂಕದಲ್ಲಿದ್ದಾರೆ.

ಮೈಸೂರು ಮತ್ತು ದಕ್ಷಿಣ ಕನ್ನಡದಲ್ಲೂ ವರ್ಷಧಾರೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುಮಾರು ಒಂದು ಗಂಟೆ ಕಾಲ ನಿರಂತರವಾಗಿ ಮಳೆ ಸುರಿಯಿತು. ಈ ವರ್ಷದ ಮೊದಲ ಮಳೆಯನ್ನು ಮೈಸೂರಿಗರು ಸಂಭ್ರಮದಿಂದ ಸ್ವಾಗತಿಸಿದ್ದಾರೆ.

ಕಡಬ (ದಕ್ಷಿಣ ಕನ್ನಡ): ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲೂ ಆಲಿಕಲ್ಲು ಮಳೆಯಾಗಿದ್ದು, ಕರಾವಳಿಯ ಬಿಸಿಲ ಧಗೆಗೆ ಮಳೆರಾಯ ಬ್ರೇಕ್ ಹಾಕಿದ್ದಾನೆ.

ರಾಜ್ಯದಾದ್ಯಂತ ಆರಂಭವಾಗಿರುವ ಈ ಬೇಸಿಗೆ ಮಳೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ದೊಡ್ಡ ಮಟ್ಟದ ನೆಮ್ಮದಿ ನೀಡಿದೆ. ಕೃಷಿ ಚಟುವಟಿಕೆಗಳಿಗೂ ಈ ಮಳೆ ಹೊಸ ಚೈತನ್ಯ ನೀಡುವ ನಿರೀಕ್ಷೆಯಿದೆ.

Latest News