ಮನೆಯ ಟಾಯ್ಲೆಟ್‌, AC ಒಳಗೂ ಇರಬಹುದು ನಾಗರಹಾವು - ಬೇಸಿಗೆಯಲ್ಲಿ ಹಾವುಗಳು ಮನೆ ನುಗ್ಗಲು ಕಾರಣವೇನು?

ಕರ್ನಾಟಕ ಸೇರಿದಂತೆ ದೇಶದಾದ್ಯಂತ ಸದ್ಯ ಬಿಸಿಲಿನ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆಯಾಗ್ತಿದೆ. ಸೆಕೆಗೆ ಮನುಷ್ಯರೇ ಹೈರಾಣಾಗಿ ಹೋಗಿದ್ದಾರೆ. ಇಂಥ ಹೊತ್ತಲ್ಲೇ ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಬೆಚ್ಚಿಬೀಳಿಸುವ ವಿಡಿಯೋಗಳು ವೈರಲ್ ಆಗ್ತಿವೆ. ಯಾರದ್ದೋ ಮನೆಯ ಟಾಯ್ಲೆಟ್ ಸೀಟ್ ಒಳಗಿಂದ ಭೀಕರ ನಾಗರಹಾವು ಹೆಡೆಬಿಚ್ಚಿ ನಿಂತಿದ್ರೆ, ಇನ್ಯಾರದ್ದೋ ಎಸಿ (AC) ಕಾಂಪ್ರೆಸರ್ ಅಥವಾ ವಾಷಿಂಗ್ ಮೆಷಿನ್ ಒಳಗಿಂದ ಹೆಬ್ಬಾವುಗಳನ್ನು ರೆಸ್ಕ್ಯೂ ಮಾಡಲಾಗುತ್ತಿದೆ. ಕಾಡು-ಮೇಡಿನಲ್ಲಿ ಇರಬೇಕಾದ ವಿಷಸರ್ಪಗಳು ಈಗ ನೇರವಾಗಿ ನಮ್ಮ ಬೆಡ್‌ರೂಮ್, ಕಿಚನ್‌ಗಳಿಗೆ ಲಗ್ಗೆ ಇಡುತ್ತಿವೆ.

ಮನೆಗೆ ಹಾವು ಬಂದರೆ ಏನು ಮಾಡಬೇಕು? | Photo Credit: https://www.facebook.com/Timesnow?__tn__=-UC
ಮನೆಗೆ ಹಾವು ಬಂದರೆ ಏನು ಮಾಡಬೇಕು? | Photo Credit: https://www.facebook.com/Timesnow?__tn__=-UC

ಕಾಡಿನ ಜೀವಿಗಳು ದಿಢೀರ್ ಅಂತ ನಾಡಿನ ಮನೆಗಳಿಗೆ ನುಗ್ಗುತ್ತಿರೋದಕ್ಕೆ ಕೇವಲ ಅರಣ್ಯ ನಾಶ ಕಾರಣವಲ್ಲ; ಇದರ ಹಿಂದೆ ವಿಜ್ಞಾನ ಅಡಗಿದೆ! ಬಿಸಿಲು ಹೆಚ್ಚಾದಾಗ ಹಾವುಗಳ ಜಗತ್ತಿನಲ್ಲಿ ಏನಾಗುತ್ತೆ? ಅವು ನಿಮ್ಮ ಮನೆಗಳನ್ನೇ ಯಾಕೆ ಟಾರ್ಗೆಟ್ ಮಾಡ್ತಿವೆ ಅನ್ನೋದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಹಾವುಗಳ ಬಿಲಗಳು ಈಗ 'ಕಾದ ಹೆಂಚು'!

ನಮ್ಮ ನಿಮ್ಮ ದೇಹದ ತಾಪಮಾನ (Body Temperature) ಯಾವಾಗಲೂ ಒಂದೇ ಸಮನಾಗಿರುತ್ತದೆ. ಆದರೆ ಹಾವುಗಳ ಕಥೆ ಹಾಗಿಲ್ಲ. ಸೈನ್ಸ್ ಪ್ರಕಾರ ಹಾವುಗಳು 'ಕೋಲ್ಡ್‌-ಬ್ಲಡೆಡ್' (Cold-Blooded) ಅಂದರೆ ಶೀತಲ ರಕ್ತದ ಪ್ರಾಣಿಗಳು. ಅಂದರೆ, ಹೊರಗಿನ ಹವಾಮಾನಕ್ಕೆ ತಕ್ಕಂತೆ ಇವುಗಳ ಮೈ ಉಷ್ಣತೆ ಬದಲಾಗುತ್ತದೆ. ತಾವಾಗಿಯೇ ದೇಹದ ತಾಪಮಾನವನ್ನು ನಿಯಂತ್ರಿಸಿಕೊಳ್ಳುವ ಶಕ್ತಿ ಇವುಗಳಿಗಿಲ್ಲ.

ಯಾವಾಗ ಹೊರಗೆ ಬಿಸಿಲು 40 ಡಿಗ್ರಿ ದಾಟುತ್ತದೆಯೋ, ಆಗ ಭೂಮಿಯ ಒಳಗಿರುವ ಹಾವುಗಳ ಬಿಲಗಳು ಮತ್ತು ಹುತ್ತಗಳು ಒವನ್ (Oven) ಅಥವಾ ಕಾದ ಹೆಂಚಿನಂತೆ ಬೆಂದು ಹೋಗುತ್ತವೆ. ಒಳಗಡೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾದಾಗ, ಜೀವ ಉಳಿಸಿಕೊಳ್ಳಲು ಹಾವುಗಳು ತಂಪಾದ ಜಾಗ ಹುಡುಕುತ್ತಾ ಕಡ್ಡಾಯವಾಗಿ ಹೊರಗೆ ಬರಲೇಬೇಕಾಗುತ್ತದೆ.

ನಿಮ್ಮ ಮನೆಯಲ್ಲೇ ಇವೆ ಹಾವುಗಳ 'ಫೇವರಿಟ್ ಸ್ಪಾಟ್ಸ್'!

ಭೂಮಿಯ ಒಳಗಿನಿಂದ ತಪ್ತವಾಗಿ ಹೊರಬರುವ ಹಾವುಗಳಿಗೆ ಬೇಕಾಗಿರುವುದು ಕೇವಲ ತಂಪು ಮತ್ತು ನೀರು. ನಮ್ಮ ಮನೆಗಳಲ್ಲಿ ಇವುಗಳಿಗೆ ಬೇಕಾದ ಅತ್ಯುತ್ತಮ ಎಸಿ ವಾತಾವರಣ ಸಿಗುತ್ತದೆ!

ಟಾಯ್ಲೆಟ್ ಪೈಪ್ ಮತ್ತು ಕಮೋಡ್ - ವೆಸ್ಟರ್ನ್ ಟಾಯ್ಲೆಟ್‌ಗಳ ಪೈಪ್‌ಗಳಲ್ಲಿ ಯಾವಾಗಲೂ ನೀರಿರುವುದರಿಂದ ಮತ್ತು ತಂಪಾಗಿರುವುದರಿಂದ ಹಾವುಗಳು ಈಜುತ್ತಾ ನೇರವಾಗಿ ಕಮೋಡ್ ಒಳಗೆ ಬಂದು ಕುಳಿತುಕೊಳ್ಳುತ್ತವೆ.

AC ಮತ್ತು ವಾಷಿಂಗ್ ಮೆಷಿನ್ - ಇವುಗಳ ಹಿಂಭಾಗದ ಕಂಪ್ರೆಸರ್ ಅಥವಾ ಮೋಟಾರ್ ಬಳಿ ಇರುವ ತೇವಾಂಶ ಮತ್ತು ನೆರಳು ಹಾವುಗಳಿಗೆ ಬೆಸ್ಟ್ ಹೈಡಿಂಗ್ ಪ್ಲೇಸ್ ಆಗಿ ಕಾಣಿಸುತ್ತದೆ.

ಕೂಲರ್ ಮತ್ತು ಗಾರ್ಡನ್ - ಮನೆ ಮುಂದೆ ಇಡುವ ಕೂಲರ್‌ನ ಒದ್ದೆ ಹುಲ್ಲು ಹಾಗೂ ಗಿಡಗಳ ಕುಂಡಗಳ ಕೆಳಗಿನ ಒದ್ದೆ ಮಣ್ಣು ಹಾವುಗಳನ್ನು ಆಕರ್ಷಿಸುತ್ತವೆ.

ಕುಡಿಯುವ ನೀರು - ಬಿಸಿಲಿಗೆ ನದಿ, ಕೆರೆಗಳು ಒಣಗುವುದರಿಂದ ಕೇವಲ ನೀರು ಹುಡುಕಿಕೊಂಡು ಕೂಡ ಹಾವುಗಳು ಮನೆಗಳ ನಲ್ಲಿ ಅಥವಾ ಬಾತ್‌ರೂಮ್‌ಗಳಿಗೆ ನುಗ್ಗುತ್ತವೆ.

ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!

ನೆನಪಿರಲಿ, ಈ ಕಡು ಬೇಸಿಗೆಯಲ್ಲಿ ಹೊರಗೆ ಬರುವ ಹಾವುಗಳು ತುಂಬಾ ಕೋಪ ಮತ್ತು ಒತ್ತಡದಲ್ಲಿ ಇರುತ್ತವೆ. ಅವುಗಳು ಯಾರಿಗೂ ಕಚ್ಚಬೇಕು ಎಂದು ಬರುವುದಿಲ್ಲ, ಆದರೆ ತಂಪು ಜಾಗ ಸಿಗದೆ ಒದ್ದಾಡುತ್ತಿರುತ್ತವೆ. ಇಂಥ ಸಮಯದಲ್ಲಿ ನಾವು ಸ್ವಲ್ಪ ಕೆಣಕಿದರೂ ಅಥವಾ ಅಜಾಗರೂಕತೆಯಿಂದ ಕಾಲನ್ನಿಟ್ಟರೂ ಅವು ತಕ್ಷಣವೇ ಅಟ್ಯಾಕ್ ಮಾಡುತ್ತವೆ.

ನಿಮ್ಮ ಸುರಕ್ಷತೆಗಾಗಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ;

ಕಸದ ರಾಶಿ ಇಡಬೇಡಿ - ಮನೆ ಸುತ್ತಮುತ್ತ ಹಳೆ ಪ್ಲಾಸ್ಟಿಕ್, ಒಣಗಿದ ತರಗೆಲೆ ಅಥವಾ ಕಬಾಡ್ ವಸ್ತುಗಳನ್ನು ರಾಶಿ ಹಾಕಬೇಡಿ. ಇವು ಹಾವುಗಳಿಗೆ ತಂಗುದಾಣವಾಗುತ್ತವೆ.

ಟಾರ್ಚ್ ಬಳಸಿ - ರಾತ್ರಿ ವೇಳೆ ಗಾರ್ಡನ್‌ಗೆ ಹೋಗುವಾಗ ಅಥವಾ ಕತ್ತಲಿರುವ ಬಾತ್‌ರೂಮ್‌ಗೆ ಹೋಗುವಾಗ ಮೊದಲು ಲೈಟ್ ಆನ್ ಮಾಡಿ ಅಥವಾ ಟಾರ್ಚ್ ಬಳಸಿ ಪರಿಶೀಲಿಸಿ.

ಸ್ವಂತ ಸಾಹಸ ಬೇಡ - ಮನೆಯೊಳಗೆ ಹಾವು ಕಂಡ ತಕ್ಷಣ ನೀವೇ ಕೋಲು ಹಿಡಿದು ಹೊಡೆಯಲು ಅಥವಾ ಹಿಡಿಯಲು ಹೋಗಬೇಡಿ. ಇದರಿಂದ ಹಾವಿಗೆ ಅಪಾಯ ಅನಿಸಿ ಅದು ನಿಮ್ಮ ಮೇಲಕ್ಕೇ ನೆಗೆಯಬಹುದು. ತಕ್ಷಣವೇ ನಿಮ್ಮ ಏರಿಯಾದ ಸ್ನೇಕ್ ರೆಸ್ಕ್ಯೂವರ್ ಅಥವಾ ಅರಣ್ಯ ಇಲಾಖೆಗೆ ಕರೆ ಮಾಡಿ.

ಮನವಿ - ಪ್ರಕೃತಿಯ ಆಹಾರ ಸರಪಳಿಯಲ್ಲಿ ಹಾವುಗಳ ಪಾತ್ರ ಬಹಳ ಮುಖ್ಯ. ಅವುಗಳನ್ನು ಕೊಲ್ಲುವ ಬದಲು ತಜ್ಞರ ಸಹಾಯದಿಂದ ಸುರಕ್ಷಿತವಾಗಿ ಕಾಡಿಗೆ ಬಿಡಿ. ಪರಿಸರ ಮತ್ತು ಮೂಕ ಜೀವಿಗಳ ಸಂರಕ್ಷಣೆಯನ್ನು Sapthashwa TV ಸದಾ ಬೆಂಬಲಿಸುತ್ತದೆ. (ಇದು ಸಾಮಾನ್ಯ ಜಾಗೃತಿಗಾಗಿ ನೀಡಲಾದ ಮಾಹಿತಿ). 

Latest News