ತುಮಕೂರಿನ ಪ್ರಸಿದ್ಧ ಸಿದ್ದಗಂಗಾ ಮಠದಲ್ಲಿ 15 ದಿನಗಳ ಜಾತ್ರಾ ಮಹೋತ್ಸವ ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ. ಭಕ್ತಿ, ಸಂಸ್ಕೃತಿ ಮತ್ತು ವ್ಯಾಪಾರದ ಸಂಗಮವಾಗಿರುವ ಈ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಜಾತ್ರೆಯ ಸಂಭ್ರಮ ಮಠದ ಆವರಣವನ್ನು ಆವರಿಸಿದೆ. ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಮೊದಲನೆಯದಾಗಿ ದನಗಳ ಜಾತ್ರೆ ಜನರ ಗಮನ ಸೆಳೆಯುತ್ತಿದೆ.
ರಾಜ್ಯದ ಹಲವಾರು ಜಿಲ್ಲೆಗಳಿಂದ ಸಾವಿರಾರು ದನಗಳನ್ನು ವ್ಯಾಪಾರಕ್ಕಾಗಿ ತರಲಾಗಿದ್ದು, ಇಲ್ಲಿ 60 ಸಾವಿರ ರೂಪಾಯಿಯಿಂದ ಹಿಡಿದು 16 ಲಕ್ಷ ರೂಪಾಯಿ ಮೌಲ್ಯದವರೆಗಿನ ವಿವಿಧ ತಳಿಯ ದನಗಳು ಲಭ್ಯವಿರುತ್ತದೆ. ಜಾತ್ರೆಯ ಪ್ರಯುಕ್ತ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಕಳೆದ 60 ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಈ ಪ್ರದರ್ಶನಕ್ಕೆ ತನ್ನದೇ ಆದ ಇತಿಹಾಸವಿದೆ. ರೈತರು ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗುವ ಅನೇಕ ವಸ್ತುಗಳು ಇಲ್ಲಿ ಪ್ರದರ್ಶನದಲ್ಲಿವೆ.
ಧಾರ್ಮಿಕ ಕಾರ್ಯಕ್ರಮಗಳಲ್ಲಿಯೇ ಪ್ರಮುಖವಾದ ರಥೋತ್ಸವ ಫೆಬ್ರವರಿ 16ರಂದು ನಡೆಯಲಿದೆ. ಈ ದಿನ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಕಳೆ ನೀಡಲು 15 ದಿನಗಳ ಕಾಲ 31 ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು 13 ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಒಟ್ಟಾರೆ ಭಕ್ತಿ, ವ್ಯಾಪಾರ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ ಮುಂದಿನ 15 ದಿನಗಳ ಕಾಲ ನಡೆಯಲಿದ್ದು, ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆ ಇದೆ.