ಹಿಮಾಲಯದ ಪಾದಬೆಟ್ಟಗಳಲ್ಲಿ ವಾಸಿಸುವ ಒಂದು ಅದ್ಭುತ ಜೀವಿಯ ಬಗ್ಗೆ ಇಂದು ನಾವು ತಿಳಿಯೋಣ. ಮನುಷ್ಯರ ಕಣ್ಣಿಗೆ ಅಷ್ಟು ಸುಲಭವಾಗಿ ಕಾಣಿಸದ ಈ ಹಾವನ್ನು ನೋಡುವುದೇ ಒಂದು ಅದೃಷ್ಟ. ಕೆಂಪು ಬಣ್ಣದ ಈ ಹಾವು ನೋಡಲು ಎಷ್ಟು ಸುಂದರವೋ, ಅಷ್ಟೇ ನಿಗೂಢ ಕೂಡ. ಇದರ ಹೆಸರು 'ರೆಡ್ ಕೋರಲ್ ಕುಕ್ರಿ' (Red Coral Kukri Snake).
ಈ ಹಾವಿನ ಬಗ್ಗೆ ವಿಜ್ಞಾನ ಲೋಕದಲ್ಲೂ ಸಾಕಷ್ಟು ಕುತೂಹಲಗಳಿವೆ. ಅಷ್ಟಕ್ಕೂ ಈ ಹಾವಿಗೆ ಯಾಕೆ ಕುಕ್ರಿ ಎಂಬ ಹೆಸರು ಬಂತು? ಇದು ವಿಷಕಾರಿಯೇ? ಇಲ್ಲಿದೆ ಸಂಪೂರ್ಣ ಮಾಹಿತಿ.
1. ಏನಿದು 'ಕುಕ್ರಿ' ಹೆಸರಿನ ರಹಸ್ಯ?
ಈ ಹಾವಿನ ಹಲ್ಲುಗಳು ನೇಪಾಳದ ಪ್ರಸಿದ್ಧ ಚಾಕು 'ಕುಕ್ರಿ' ಮಾದರಿಯಲ್ಲಿ ಬಾಗಿರುತ್ತವೆ. ಹಾಗಾಗಿ ಇದಕ್ಕೆ ಈ ಹೆಸರು ಬಂದಿದೆ. ವಿಶೇಷವೆಂದರೆ, ಈ ಹಲ್ಲುಗಳನ್ನು ಅದು ಬೇಟೆ ಆಡಲು ಬಳಸುವುದಿಲ್ಲ, ಬದಲಾಗಿ ಮೊಟ್ಟೆಗಳನ್ನು ಒಡೆದು ತಿನ್ನಲು ಬಳಸುತ್ತದೆ.
2. ಇದು ವಿಷಕಾರಿಯೇ?
ಖಂಡಿತ ಇಲ್ಲ! ಈ ರೆಡ್ ಕೋರಲ್ ಕುಕ್ರಿ ಹಾವುಗಳು ವಿಷರಹಿತ (Non-venomous). ಇವುಗಳಿಂದ ಮನುಷ್ಯರಿಗೆ ಯಾವುದೇ ಪ್ರಾಣಾಪಾಯವಿಲ್ಲ. ಕೆಂಪು ಮತ್ತು ಕಿತ್ತಳೆ ಬಣ್ಣದಲ್ಲಿ ಹೊಳೆಯುವ ಈ ಹಾವು ಅತ್ಯಂತ ಶಾಂತ ಸ್ವಭಾವದ್ದು.
3. ಎಲ್ಲಿ ವಾಸಿಸುತ್ತದೆ?
ಇವುಗಳು ಮುಖ್ಯವಾಗಿ ಭಾರತ ಮತ್ತು ನೇಪಾಳದ ಹಿಮಾಲಯದ ತಪ್ಪಲು ಪ್ರದೇಶಗಳಲ್ಲಿ ಕಂಡುಬರುತ್ತವೆ. ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಅರಣ್ಯ ಪ್ರದೇಶಗಳಲ್ಲಿ ಇವುಗಳ ವಾಸವಿದೆ. ಇವುಗಳು ಹಗಲಿನಲ್ಲಿ ಹೆಚ್ಚಾಗಿ ನೆಲದ ಅಡಿಯಲ್ಲಿ ಅಡಗಿರುತ್ತವೆ ಮತ್ತು ರಾತ್ರಿ ಸಮಯದಲ್ಲಿ ಮಾತ್ರ ಹೊರಬರುತ್ತವೆ. ಇದೇ ಕಾರಣಕ್ಕೆ ಇವುಗಳನ್ನು ನೋಡುವುದು ಬಹಳ ಕಷ್ಟ.
4. ಮೊದಲ ಬಾರಿ ಪತ್ತೆಯಾಗಿದ್ದು ಯಾವಾಗ?
ಈ ಅಪರೂಪದ ಪ್ರಬೇಧದ ಬಗ್ಗೆ ಪ್ರಪಂಚಕ್ಕೆ ಮೊದಲು ತಿಳಿದಿದ್ದು 1936ರಲ್ಲಿ, ಉತ್ತರ ಪ್ರದೇಶದ ಖೇರಿ ಜಿಲ್ಲೆಯಲ್ಲಿ. ಆ ನಂತರ ಬಹಳ ವರ್ಷಗಳ ಕಾಲ ಈ ಹಾವು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬಿಹಾರದ ವಾಲ್ಮೀಕಿ ಟೈಗರ್ ರಿಸರ್ವ್ ಮತ್ತು ಪಶ್ಚಿಮ ಬಂಗಾಳದಲ್ಲಿ ಇವುಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ. ಇವುಗಳು ಈಗ ಬಾಂಗ್ಲಾದೇಶದವರೆಗೂ ಹರಡಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
5. ಹಾವಿನ ವಿಶಿಷ್ಟ ರೂಪ ಹೇಗಿರುತ್ತದೆ?
ಈ ಹಾವಿನ ಇಡೀ ದೇಹವು ಮೇಲ್ಭಾಗದಲ್ಲಿ ಚಮಕುವ ಕೆಂಪು ಅಥವಾ ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ಹೊಟ್ಟೆಯ ಭಾಗವು ಗುಲಾಬಿ ಅಥವಾ ತಿಳಿ ಹಳದಿ ಬಣ್ಣದಲ್ಲಿರುತ್ತದೆ. ಇದರ ತಲೆ ಚಿಕ್ಕದಾಗಿದ್ದು, ಕುತ್ತಿಗೆಗಿಂತ ಹೆಚ್ಚು ಅಗಲವಿರುವುದಿಲ್ಲ. ತನ್ನ ವಿಶಿಷ್ಟ ಬಣ್ಣದಿಂದಾಗಿ ಇದನ್ನು ಬೇರೆ ಹಾವುಗಳಿಗಿಂತ ಸುಲಭವಾಗಿ ಗುರುತಿಸಬಹುದು.
ಸಂರಕ್ಷಣೆ ಅತೀ ಅಗತ್ಯ:
ಈ ಹಾವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಇರಿಸಲಾಗಿದೆ. ಐಯುಸಿಎನ್ (IUCN) ಪಟ್ಟಿಯಲ್ಲಿ ಇದು 'ಕಡಿಮೆ ಆತಂಕ'ದ ಗುಂಪಿನಲ್ಲಿದ್ದರೂ, ಇದು ಬಹಳ ಅಪರೂಪವಾಗಿರುವುದರಿಂದ ಅರಣ್ಯ ಇಲಾಖೆ ಇದರ ರಕ್ಷಣೆಗೆ ವಿಶೇಷ ಗಮನ ಹರಿಸುತ್ತಿದೆ.
ನಮ್ಮ ಪರಿಸರದ ಜೀವವೈವಿಧ್ಯತೆಯಲ್ಲಿ ಇಂತಹ ಪ್ರತಿಯೊಂದು ಜೀವಿಯೂ ಮುಖ್ಯ. ಪ್ರಕೃತಿಯ ಈ ಸುಂದರ 'ಕೆಂಪು ದೈತ್ಯ'ನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ ತಿಳಿಸಿ..