Feb 16, 2026 Languages : ಕನ್ನಡ | English

ಪುಸ್ತಕ ಓದಿದರೆ ಆಯಸ್ಸು ಹೆಚ್ಚುತ್ತದೆಯೇ? ಈ ಕುರಿತು ವಿಜ್ಞಾನ ಏನು ಹೇಳುತ್ತದೆ ಗೊತ್ತಾ?

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಿದಂತೆ, ಪುಸ್ತಕ ಓದುವ ಹವ್ಯಾಸ ಬಹುತೇಕ ಮಂದಿಯಲ್ಲಿ ಕಡಿಮೆಯಾಗುತ್ತಿದೆ. ಆದರೆ ಪುಸ್ತಕಗಳು ನಮ್ಮ ಜೀವನದ ನಿಜವಾದ ಸಂಗಾತಿಗಳು. ಅವು ಕೇವಲ ಜ್ಞಾನವರ್ಧನೆಗೆ ಮಾತ್ರವಲ್ಲ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ಸಹಕಾರಿಯಾಗುತ್ತವೆ ಎಂಬುದನ್ನು ವೈಜ್ಞಾನಿಕ ಅಧ್ಯಯನಗಳು ದೃಢಪಡಿಸುತ್ತವೆ.

ಪುಸ್ತಕ ಓದಿದರೆ ಆರೋಗ್ಯ, ಶಾಂತಿ ಮತ್ತು ಆಯಸ್ಸು – ವಿಜ್ಞಾನ ದೃಢಪಡಿಸಿದ ಅಂಶಗಳು
ಪುಸ್ತಕ ಓದಿದರೆ ಆರೋಗ್ಯ, ಶಾಂತಿ ಮತ್ತು ಆಯಸ್ಸು – ವಿಜ್ಞಾನ ದೃಢಪಡಿಸಿದ ಅಂಶಗಳು

ಪುಸ್ತಕ ಓದುವುದರಿಂದ ಮಾನಸಿಕ ಶಕ್ತಿ ಹೆಚ್ಚುತ್ತದೆ, ಆಲೋಚನಾ ಪ್ರಕ್ರಿಯೆ ಸುಧಾರಿಸುತ್ತದೆ. ಪ್ರತಿದಿನ ಓದುವ ಅಭ್ಯಾಸದಿಂದ ಹೊಸ ಪದಗಳ ಪರಿಚಯವಾಗುತ್ತದೆ, ಭಾಷಾ ಸಾಮರ್ಥ್ಯ ವೃದ್ಧಿಯಾಗುತ್ತದೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಅತ್ಯಂತ ಮುಖ್ಯ. ಪೋಷಕರು ಬಾಲ್ಯದಲ್ಲಿಯೇ ಅವರ ವಯಸ್ಸಿಗೆ ತಕ್ಕ ಪುಸ್ತಕಗಳನ್ನು ಪರಿಚಯಿಸಿ ಓದಲು ಪ್ರೇರೇಪಿಸಬೇಕು.

ಮಕ್ಕಳಷ್ಟೇ ಅಲ್ಲ, ಪೋಷಕರೂ ಸಹ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಓದು ವ್ಯಕ್ತಿತ್ವ ವಿಕಸನದ ಅವಿಭಾಜ್ಯ ಅಂಗ. ಪುಸ್ತಕಗಳು ನಮ್ಮ ಜ್ಞಾನವನ್ನು ವಿಸ್ತರಿಸಿ, ಹೊಸ ವಿಚಾರಗಳನ್ನು ಕಲಿಸುತ್ತವೆ. ಕಥೆಗಳು ಹಾಗೂ ವಿಷಯಗಳನ್ನು ನೆನಪಿಟ್ಟುಕೊಳ್ಳುವುದರಿಂದ ಜ್ಞಾಪಕ ಶಕ್ತಿ ಸುಧಾರಿಸುತ್ತದೆ.

ಪುಸ್ತಕ ಓದುವುದರಿಂದ ಮೆದುಳು ಸದಾ ಕ್ರಿಯಾಶೀಲವಾಗಿರುತ್ತದೆ. ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಹೆಚ್ಚುತ್ತದೆ, ಸೃಜನಶೀಲತೆ ವೃದ್ಧಿಸುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ, ಮನಸ್ಸಿಗೆ ಶಾಂತಿ ಹಾಗೂ ಸಮಾಧಾನ ಸಿಗುತ್ತದೆ. ಭಾಷಾ ಕೌಶಲ್ಯ, ಶಬ್ದಕೋಶ ಮತ್ತು ವ್ಯಾಕರಣದಲ್ಲಿ ಸ್ಪಷ್ಟ ಸುಧಾರಣೆ ಕಂಡುಬರುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಒಟ್ಟಾರೆ ಓದುವಿಕೆ ಏಕಾಗ್ರತೆ, ಸ್ಮರಣೆ ಮತ್ತು ಬರವಣಿಗೆ ಸಾಮರ್ಥ್ಯವನ್ನು ಬಲಪಡಿಸುತ್ತದೆ.

ಅಧ್ಯಯನಗಳು ಸೂಚಿಸುವಂತೆ, ಪುಸ್ತಕ ಓದುವ ಅಭ್ಯಾಸವು ಆಯಸ್ಸು ಹೆಚ್ಚಲು ಸಹ ಕಾರಣವಾಗುತ್ತದೆ. ದಿನಕ್ಕೆ ಕನಿಷ್ಠ 10–20 ಪುಟ ಓದಲು ಸಮಯ ಮೀಸಲಿಡುವುದು ಉತ್ತಮ. ಬೆಳಗ್ಗೆ 30–40 ನಿಮಿಷ, ಸಂಜೆ ಅಥವಾ ಮಲಗುವ ಮುನ್ನ ಓದುವುದರಿಂದ ಒತ್ತಡ ನಿವಾರಣೆಯಾಗುತ್ತದೆ ಮತ್ತು ಉತ್ತಮ ನಿದ್ರೆಯೂ ಲಭ್ಯವಾಗುತ್ತದೆ.

ಪುಸ್ತಕಗಳು ಜ್ಞಾನದ ಸಂಕೇತ. ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜೊತೆಗೆ ಇತರರಲ್ಲಿಯೂ ಓದುವ ಅಭಿರುಚಿ ಮೂಡಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು.

ಓದಲೇಬೇಕಾದ ಕೆಲವು ಉತ್ತಮ ಪುಸ್ತಕಗಳು:

  • ಮಕ್ಕಳಿಗೆ: ರಾಮಾಯಣ, ಮಹಾಭಾರತ
  • ಸ್ವಾಮಿ ಜಗದಾತ್ಮನಂದರ ಬದುಕಲು ಕಲಿಯಿರಿ
  • ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ನೆನಪಿನ ದೋಣಿಯಲ್ಲಿ
  • ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು
  • ಎಸ್.ಎಲ್. ಭೈರಪ್ಪ ಅವರ ಪರ್ವ
  • ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಚಿದಂಬರ ರಹಸ್ಯ
  • ವಸುಧೇಂದ್ರ ಅವರ ತೇಜೋ ತುಂಗಾಭದ್ರ
  • ಗುರುರಾಜ ಕರ್ಜಗಿ ಅವರ ಕರುನಾಳು ಬಾ ಬೆಳಕೆ
  • ಸುಧಾಮೂರ್ತಿ ಅವರ ಮನದ ಮಾತು
  • ಎ.ಆರ್. ಮಣಿಕಾಂತ್ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು
  • ಈ ಕೃತಿಗಳು ಕೇವಲ ಸಾಹಿತ್ಯವಲ್ಲ, ಬದುಕಿಗೆ ಸ್ಫೂರ್ತಿ ನೀಡುವ ಬೆಳಕು.

Latest News