Apr 21, 2026 Languages : ಕನ್ನಡ | English

ಪರಮಾಣು ಯುದ್ಧದ ಭೀತಿ: ನಿಮ್ಮ ಪ್ರಾಣ ಉಳಿಸಬಲ್ಲ ಆ ಒಂದು ಪುಟ್ಟ 'ಮ್ಯಾಜಿಕ್' ಮಾತ್ರೆ ಯಾವುದು ಗೊತ್ತಾ?

ಇಂದಿನ ಯುದ್ಧದ ಭೀತಿಯ ನಡುವೆ ಪರಮಾಣು ದಾಳಿಯ ಆತಂಕ ಎಲ್ಲೆಡೆ ಮನೆಮಾಡಿದೆ. ಇಂತಹ ಸಮಯದಲ್ಲಿ ಕೇವಲ ಬಂಕರ್‌ಗಳಷ್ಟೇ ಸಾಲದು, ಜೀವ ಉಳಿಸಲು ಪೊಟ್ಯಾಸಿಯಮ್ ಅಯೋಡೈಡ್ (KI) ಎಂಬ ಪುಟ್ಟ ಮಾತ್ರೆ ಬಹಳ ಮುಖ್ಯ. ಇರಾನ್ ಈಗಾಗಲೇ ಇದನ್ನು ತನ್ನ ಜನರಿಗೆ ಹಂಚುತ್ತಿರುವುದು ಇದರ ಗಂಭೀರತೆಗೆ ಸಾಕ್ಷಿ.

ಪರಮಾಣು ದಾಳಿಯ ಭೀತಿ: ಪೊಟ್ಯಾಸಿಯಮ್ ಅಯೋಡೈಡ್ ಮಾತ್ರೆಯ ಮಹತ್ವ!!
ಪರಮಾಣು ದಾಳಿಯ ಭೀತಿ: ಪೊಟ್ಯಾಸಿಯಮ್ ಅಯೋಡೈಡ್ ಮಾತ್ರೆಯ ಮಹತ್ವ!!

ಏನಿದು ಮಾತ್ರೆ? ಇದರ ಕೆಲಸವೇನು?

ಪರಮಾಣು ಅವಘಡ ಸಂಭವಿಸಿದಾಗ ಗಾಳಿಯಲ್ಲಿ 'ವಿಕಿರಣಶೀಲ ಅಯೋಡಿನ್-131' ಬಿಡುಗಡೆಯಾಗುತ್ತದೆ. ಇದು ಗಾಳಿ, ನೀರು ಅಥವಾ ಆಹಾರದ ಮೂಲಕ ನಮ್ಮ ದೇಹ ಸೇರಿ ನೇರವಾಗಿ ಗಂಟಲಲ್ಲಿರುವ ಥೈರಾಯ್ಡ್ ಗ್ರಂಥಿಯನ್ನು ಅಟ್ಯಾಕ್ ಮಾಡುತ್ತದೆ. ನಮ್ಮ ದೇಹವು ಸ್ವಾಭಾವಿಕವಾಗಿ ಅಯೋಡಿನ್ ಹೀರಿಕೊಳ್ಳುವ ಗುಣ ಹೊಂದಿರುವುದರಿಂದ, ಈ ವಿಷಕಾರಿ ವಿಕಿರಣವನ್ನೂ ಹೀರಿಕೊಂಡು ಬಿಡುತ್ತದೆ. ಇದರಿಂದ ಮುಂದೆ ಥೈರಾಯ್ಡ್ ಕ್ಯಾನ್ಸರ್ ಉಂಟಾಗುವ ಅಪಾಯವಿರುತ್ತದೆ. ಅದರಲ್ಲೂ ಮಕ್ಕಳು, ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗೆ ಇದರಿಂದ ಹೆಚ್ಚಿನ ಪ್ರಾಣಾಪಾಯವಿರುತ್ತದೆ. ಈ ಅಪಾಯ ತಡೆಯಲು ಅಯೋಡಿನ್ ಮಾತ್ರೆಗಳು ರಕ್ಷಣಾ ಕವಚದಂತೆ ಕೆಲಸ ಮಾಡುತ್ತವೆ. 

ಪೊಟ್ಯಾಸಿಯಮ್ ಅಯೋಡೈಡ್ (KI) ಮಾತ್ರೆಗಳು ಇಲ್ಲಿ ನಮಗೆ ಒಂದು 'ರಕ್ಷಣಾ ಕವಚ'ವಾಗಿ ಕೆಲಸ ಮಾಡುತ್ತವೆ. ಈ ಮಾತ್ರೆಯಲ್ಲಿ 'ಸ್ಥಿರ ಅಥವಾ ಸುರಕ್ಷಿತ ಅಯೋಡಿನ್' ಇರುತ್ತದೆ. ನಾವು ಈ ಮಾತ್ರೆ ಸೇವಿಸಿದಾಗ, ನಮ್ಮ ಥೈರಾಯ್ಡ್ ಗ್ರಂಥಿಯು ಈ ಸುರಕ್ಷಿತ ಅಯೋಡಿನ್‌ನಿಂದ ಪೂರ್ತಿ ಭರ್ತಿಯಾಗುತ್ತದೆ. ನಂತರ ಹೊರಗಿನಿಂದ ಬರುವ ಅಪಾಯಕಾರಿ ವಿಕಿರಣಶೀಲ ಅಯೋಡಿನ್ ಅನ್ನು ಹೀರಿಕೊಳ್ಳಲು ಅಲ್ಲಿ ಜಾಗವೇ ಇರುವುದಿಲ್ಲ. ಪರಿಣಾಮವಾಗಿ, ಆ ವಿಷಕಾರಿ ಅಂಶಗಳು ದೇಹದಲ್ಲಿ ಸಂಗ್ರಹವಾಗದೆ ಮೂತ್ರದ ಮೂಲಕ ಹೊರಗೆ ಹೋಗುತ್ತವೆ.

ಇದನ್ನ ಯಾವಾಗ ತೆಗೆದುಕೊಳ್ಳಬೇಕು?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಈ ಮಾತ್ರೆಯ ಪರಿಣಾಮ ನಮ್ಮ ದೇಹದಲ್ಲಿ ಸುಮಾರು 24 ಗಂಟೆಗಳ ಕಾಲ ಮಾತ್ರ ಇರುತ್ತದೆ. ಹಾಗಾಗಿ ಸಮಯದ ಪ್ರಜ್ಞೆ ಇಲ್ಲಿ ಬಹಳ ಮುಖ್ಯ. 

ಸರಿಯಾದ ಸಮಯ - ವಿಕಿರಣಕ್ಕೆ ತುತ್ತಾಗುವ ಸ್ವಲ್ಪ ಮೊದಲು ಅಥವಾ ತುತ್ತಾದ ತಕ್ಷಣ ಇದನ್ನು ಸೇವಿಸುವುದು ಅತ್ಯಂತ ಪರಿಣಾಮಕಾರಿ.
ತಡವಾದರೆ ಅಪಾಯ - ವಿಕಿರಣಕ್ಕೆ ಒಡ್ಡಿಕೊಂಡ 3 - 4 ಗಂಟೆಗಳ ನಂತರ ಸೇವಿಸಿದರೆ ಇದರ ಕೆಲಸ ಮಾಡುವ ಶಕ್ತಿ ಗಣನೀಯವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.

ನೆನಪಿಡಿ: ಈ ಮಾತ್ರೆ ಕೇವಲ ಥೈರಾಯ್ಡ್ ಗ್ರಂಥಿಯನ್ನ ಮಾತ್ರ ರಕ್ಷಿಸುತ್ತದೆಯೇ ಹೊರತು ಇಡೀ ದೇಹವನ್ನಲ್ಲ. ಅಂದರೆ ವಿಕಿರಣದಿಂದ ಚರ್ಮಕ್ಕಾಗುವ ಹಾನಿ ಅಥವಾ ಇತರ ಅಂಗಗಳ ಮೇಲಾಗುವ ಪರಿಣಾಮವನ್ನ ಇದು ತಡೆಯಲಾರದು.

ಸ್ವಂತ ನಿರ್ಧಾರ ಬೇಡ, ಎಚ್ಚರಿಕೆ ಇರಲಿ

ಭಾರತವೂ ಸೇರಿದಂತೆ ಹಲವು ದೇಶಗಳು ಇಂತಹ ತುರ್ತು ಪರಿಸ್ಥಿತಿಗಾಗಿ ಅಯೋಡಿನ್ ಮಾತ್ರೆಗಳ ದೊಡ್ಡ ದಾಸ್ತಾನು ಇರಿಸಿಕೊಂಡಿವೆ. ಆದರೆ, ಇದನ್ನು ಮನೆಯಲ್ಲಿರುವ ಜ್ವರದ ಮಾತ್ರೆಗಳಂತೆ ತಮಗೆ ಬೇಕೆಂದಾಗ ಸೇವಿಸಬಾರದು. ಅದಕ್ಕೆ ಕೆಲವು ಪ್ರಮುಖ ಕಾರಣಗಳಿವೆ:

ಸರ್ಕಾರದ ಸೂಚನೆ ಇರಲಿ - ಪರಮಾಣು ತುರ್ತು ಪರಿಸ್ಥಿತಿ ಬಂದಾಗ ಸರ್ಕಾರದ ಅಥವಾ ಆರೋಗ್ಯ ಇಲಾಖೆಯ ಅಧಿಕೃತ ಆದೇಶ ಬಂದಾಗ ಮಾತ್ರ ಇದನ್ನು ಬಳಸಬೇಕು. ಅನಗತ್ಯವಾಗಿ ಸೇವಿಸುವುದು ಬೇರೆ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.

ಪಾರ್ಶ್ವ ಪರಿಣಾಮಗಳು - ಅತಿಯಾದ ಅಥವಾ ತಜ್ಞರ ಸಲಹೆ ಇಲ್ಲದೆ ಬಳಸುವುದರಿಂದ ಚರ್ಮದ ಅಲರ್ಜಿ, ಹೊಟ್ಟೆಯ ಸಮಸ್ಯೆ ಅಥವಾ ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯಲ್ಲಿ ಶಾಶ್ವತ ಏರುಪೇರಾಗಬಹುದು.

ಎಲ್ಲಾ ವಿಕಿರಣಗಳಿಗಲ್ಲ - ಇದು ಕೇವಲ 'ವಿಕಿರಣಶೀಲ ಅಯೋಡಿನ್'ನಿಂದ ಮಾತ್ರ ರಕ್ಷಿಸುತ್ತದೆ. ಪರಮಾಣು ಸ್ಫೋಟದಿಂದ ಬಿಡುಗಡೆಯಾಗುವ ಸೀಸಿಯಮ್ ಅಥವಾ ಪ್ಲುಟೋನಿಯಂನಂತಹ ಇತರ ಭಯಾನಕ ವಿಕಿರಣಗಳಿಂದ ಇದು ಯಾವುದೇ ರಕ್ಷಣೆ ನೀಡುವುದಿಲ್ಲ.

ಪರಮಾಣು ದಾಳಿಯಂತಹ ಕಠಿಣ ಸಮಯದಲ್ಲಿ ಸರಿಯಾದ ಸಮಯಕ್ಕೆ ಈ ಔಷಧಿಯನ್ನು ಬಳಸುವುದರಿಂದ ಥೈರಾಯ್ಡ್ ಕ್ಯಾನ್ಸರ್ ಅಪಾಯವನ್ನು ಶೇಕಡಾ 90 ರಷ್ಟು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಯುದ್ಧದ ಭೀತಿಯ ನಡುವೆ ಈ ಪುಟ್ಟ ಮಾತ್ರೆ ಇಂದು ಲಕ್ಷಾಂತರ ಜನರ ಪಾಲಿಗೆ 'ಸಂಜೀವಿನಿ'ಯಂತೆ ಕಾಣುತ್ತಿದೆ. ಆದರೂ, ಇಂತಹ ಭೀಕರ ಪರಿಸ್ಥಿತಿ ಜಗತ್ತಿಗೆ ಎಂದಿಗೂ ಬಾರದಿರಲಿ ಎನ್ನುವುದೇ ನಮ್ಮೆಲ್ಲರ ಆಶಯ. ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ ಇತರರಿಗೂ ಹಂಚಿಕೊಳ್ಳಿ ಮತ್ತು ಜಾಗತಿಕ ವಿದ್ಯಮಾನಗಳ ಬಗ್ಗೆ ಸದಾ ಎಚ್ಚರದಿಂದಿರಿ.