Apr 7, 2026 Languages : ಕನ್ನಡ | English

ಹನುಮಂತನಿಗೆ ಮಂಗಳವಾರವೇ ಯಾಕೆ ಪ್ರಿಯ? ಇದರ ಹಿಂದಿರುವ ಅಸಲಿ ಕಾರಣ ಇಲ್ಲಿದೆ ನೋಡಿ!!

ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದೊಂದು ದಿನ ಒಂದೊಂದು ದೇವರಿಗೆ ಮೀಸಲು. ಅದರಲ್ಲಿ ಮಂಗಳವಾರ ಬಂತು ಅಂದ್ರೆ ಸಾಕು, ಎಲ್ಲರಿಗೂ ನೆನಪಾಗೋದು ಆ "ಬಜರಂಗಬಲಿ". ಹನುಮಂತ ಅಂದ್ರೆ ಶಕ್ತಿ, ಧೈರ್ಯ ಮತ್ತು ಭಕ್ತಿಯ ಸಂಕೇತ. ಕಾಟ ಕೊಡುವ ಸಂಕಷ್ಟಗಳನ್ನ ಓಡಿಸಲು ಹನುಮಂತನ ಮೊರೆ ಹೋಗುವುದು ನಮಗೆ ಮೊದಲಿನಿಂದಲೂ ಬಂದಿರುವ ಅಭ್ಯಾಸ. ಆದರೆ ಮಂಗಳವಾರವೇ ಯಾಕೆ ಹನುಮಂತನಿಗೆ ಅಷ್ಟು ವಿಶೇಷ? ಉಪವಾಸ ಮಾಡುವಾಗ ನಾವು ಮಾಡುವ ಸಣ್ಣ ತಪ್ಪುಗಳು ಪೂಜೆಯ ಫಲವನ್ನೇ ಇಲ್ಲವಾಗಿಸುತ್ತವೆಯೇ? ಇದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಮಂಗಳವಾರದ ಉಪವಾಸದಲ್ಲಿ ಉಪ್ಪು ಬಳಸಬಾರದು
ಮಂಗಳವಾರದ ಉಪವಾಸದಲ್ಲಿ ಉಪ್ಪು ಬಳಸಬಾರದು

ಮಂಗಳವಾರ ಯಾಕೆ ಸ್ಪೆಷಲ್? 

ಪುರಾಣಗಳ ಪ್ರಕಾರ, ಹನುಮಂತನು ಹುಟ್ಟಿದ್ದು ಮಂಗಳವಾರವಂತೆ. ಹಾಗಾಗಿ, ಈ ದಿನದಂದು ಆಂಜನೇಯನನ್ನ ಪೂಜೆ ಮಾಡಿದರೆ ಆತನಿಗೆ ಬೇಗ ಖುಷಿಯಾಗುತ್ತದೆ ಅನ್ನೋದು ಭಕ್ತರ ನಂಬಿಕೆ. ಅಷ್ಟೇ ಅಲ್ಲ, ಜ್ಯೋತಿಷ್ಯ ಶಾಸ್ತ್ರದಲ್ಲಿ 'ಮಂಗಳ' ಗ್ರಹಕ್ಕೆ ಹನುಮಂತನೇ ಅಧಿಪತಿ. ಯಾರ ಜಾತಕದಲ್ಲಿ ಮಂಗಳ ದೋಷ ಇರುತ್ತದೋ ಅಥವಾ ಜೀವನದಲ್ಲಿ ಪದೇ ಪದೇ ಅಡೆತಡೆಗಳು ಬರುತ್ತಿರುತ್ತವೋ, ಅಂತವರು ಮಂಗಳವಾರ ವ್ರತ ಮಾಡಿದರೆ ದೋಷಗಳೆಲ್ಲಾ ಕರಗಿ ಜೀವನದಲ್ಲಿ ಸುಖ-ಶಾಂತಿ ಸಿಗುತ್ತೆ.

ಉಪವಾಸ ಮಾಡುವಾಗ ಇವುಗಳ ಬಗ್ಗೆ ಎಚ್ಚರವಿರಲಿ!

ನಮ್ಮಲ್ಲಿ ತುಂಬಾ ಜನ ಮಂಗಳವಾರ ಉಪವಾಸ ಮಾಡ್ತಾರೆ. ಆದರೆ ಉಪವಾಸ ಅಂದ್ರೆ ಬರೀ ಊಟ ಬಿಡೋದಲ್ಲ, ಅದಕ್ಕೊಂದು ಶಿಸ್ತು ಇರಬೇಕು. ಈ ದಿನ ಪಾಲಿಸಬೇಕಾದ ಮುಖ್ಯ ನಿಯಮಗಳು ಇಲ್ಲಿವೆ:

ಉಪ್ಪಿನಿಂದ ದೂರವಿರಿ: ಹನುಮಂತನ ಉಪವಾಸ ಮಾಡುವಾಗ ಉಪ್ಪನ್ನು ಬಳಸಬಾರದು ಎಂದು ಹೇಳಲಾಗುತ್ತದೆ. ಉಪ್ಪು ಬಿಟ್ಟು ಸಾತ್ತ್ವಿಕ ಆಹಾರ ಸೇವಿಸುವುದು ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತದೆ.

ಬಣ್ಣದ ಬಗ್ಗೆ ಗಮನವಿರಲಿ: ಮಂಗಳವಾರ ಅಂದ್ರೆ ಕೆಂಪು ಬಣ್ಣದ ದಿನ. ಪೂಜೆ ಮಾಡುವಾಗ ಕೆಂಪು ಬಟ್ಟೆ ಧರಿಸುವುದು ಹನುಮಂತನಿಗೆ ತುಂಬಾ ಪ್ರಿಯ. ಮರೆತೂ ಕೂಡ ಕಪ್ಪು ಅಥವಾ ಬಿಳಿ ಬಟ್ಟೆ ಹಾಕಿ ಪೂಜೆ ಮಾಡಬೇಡಿ, ಇದು ನಕಾರಾತ್ಮಕತೆ ತರಬಹುದು ಎನ್ನಲಾಗುತ್ತದೆ.

ದಾನ ಮಾಡಿದ ಸಿಹಿ ತಿನ್ನಬೇಡಿ: ಪೂಜೆ ಮಾಡಿ ಬೇರೆಯವರಿಗೆ ಸಿಹಿತಿಂಡಿ ಹಂಚುವುದು ಒಳ್ಳೆಯದು. ಆದರೆ ನೆನಪಿಡಿ, ನೀವು ದಾನ ಮಾಡಲೆಂದು ತಂದ ಸಿಹಿಯನ್ನು ನೀವೇ ತಿನ್ನಬಾರದು. ಇದು ಉಪವಾಸದ ಶಿಸ್ತನ್ನು ಹಾಳುಮಾಡುತ್ತದೆ.

ಮನಸ್ಸಿನ ಶುದ್ಧತೆ ಮುಖ್ಯ: ದೇಹದ ಶುದ್ಧತೆಯ ಜೊತೆಗೆ ಮನಸ್ಸು ಕೂಡ ಸ್ವಚ್ಛವಾಗಿರಬೇಕು. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡದೆ, ಸಿಟ್ಟು ಮಾಡಿಕೊಳ್ಳದೆ ಹನುಮಂತನ ನಾಮಸ್ಮರಣೆ ಮಾಡಬೇಕು.

ಪೂಜೆಯಿಂದ ಏನೆಲ್ಲಾ ಲಾಭ?

ಯಾರು ಭಕ್ತಿಯಿಂದ ಮಂಗಳವಾರ ಹನುಮಂತನಿಗೆ ಸಿಂಧೂರ ಹಚ್ಚಿ, ಹನುಮಾನ್ ಚಾಲೀಸಾ ಪಠಿಸುತ್ತಾರೋ ಅವರಿಗೆ ಎಂತಹದ್ದೇ ಸಂಕಷ್ಟ ಬಂದರೂ ಎದುರಿಸುವ ಧೈರ್ಯ ಸಿಗುತ್ತದೆ. ಮುಖ್ಯವಾಗಿ ಭಯ ಪಡುವವರಿಗೆ, ಮನಸ್ಸಿನಲ್ಲಿ ನೆಮ್ಮದಿ ಇಲ್ಲದವರಿಗೆ ಆಂಜನೇಯನ ಆರಾಧನೆ ಒಂದು ರಾಮಬಾಣ. ಶನಿ ದೋಷ ಇರುವವರು ಕೂಡ ಈ ದಿನ ಹನುಮಂತನ ಪೂಜೆ ಮಾಡುವುದರಿಂದ ಶನಿದೇವನ ಕಾಟದಿಂದ ಮುಕ್ತಿ ಪಡೆಯಬಹುದು.

ಹನುಮಂತನನ್ನು ನಂಬಿದವರಿಗೆ ಎಂದು ಮೋಸವಿಲ್ಲ ಎಂಬ ಮಾತಿದೆ. ಶ್ರದ್ಧೆ ಮತ್ತು ಭಕ್ತಿಯಿಂದ ಈ ಸಣ್ಣ ನಿಯಮಗಳನ್ನು ಪಾಲಿಸಿ ಪೂಜೆ ಮಾಡಿದರೆ, ಆ ಬಜರಂಗಬಲಿ ನಿಮ್ಮ ಬೆನ್ನೆಲುಬಾಗಿ ನಿಂತು ಕಾಪಾಡುವುದರಲ್ಲಿ ಸಂಶಯವೇ ಇಲ್ಲ.