ನಾವೆಲ್ಲರೂ ದೈನಂದಿನ ಜೀವನದಲ್ಲಿ ಅದೆಷ್ಟೋ ಇಂಗ್ಲಿಷ್ ಪದಗಳನ್ನು ಬಳಸುತ್ತೇವೆ. ‘ಓಕೆ’, ‘ಥ್ಯಾಂಕ್ಸ್’, ‘ಸಾರಿ’ ಇಲ್ಲದೆ ನಮ್ಮ ಮಾತು ಪೂರ್ಣವಾಗುವುದೇ ಇಲ್ಲ ಎಂಬಂತಾಗಿದೆ. ಆದರೆ ಮೈಸೂರಿನ ಐತಿಹಾಸಿಕ ಲಲಿತ ಮಹಲ್ ಪ್ಯಾಲೆಸ್‌ನಲ್ಲಿ ಕಳೆದ 15 ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಗಿರೀಶ್ ಅವರ ಶೈಲಿಯೇ ಬೇರೆ. ಪ್ರತಿದಿನ ಸಾವಿರಾರು ಪ್ರವಾಸಿಗರು ಬರುವ ಈ ಸ್ಥಳದಲ್ಲಿ ಗಿರೀಶ್ ಅವರು ಒಂದು ಆಂಗ್ಲ ಪದವನ್ನೂ ಬಳಸದೆ ಶುದ್ಧ ಕನ್ನಡದಲ್ಲೇ ಸಂವಹನ ನಡೆಸುತ್ತಾರೆ.
ಒಂದು ಆಂಗ್ಲ ಪದವಿಲ್ಲದ ಸಂಭಾಷಣೆ!
ಸಾಮಾನ್ಯವಾಗಿ ಅಂತರಾಷ್ಟ್ರೀಯ ಪ್ರವಾಸಿ ತಾಣಗಳಲ್ಲಿ ಇಂಗ್ಲಿಷ್ ಅನಿವಾರ್ಯ ಎಂಬ ಭಾವನೆ ಇದೆ. ಆದರೆ ಗಿರೀಶ್ ಅವರು ಇದನ್ನು ಸುಳ್ಳು ಮಾಡಿದ್ದಾರೆ. ಅರಮನೆಯ ಇತಿಹಾಸವಾಗಲಿ ಅಥವಾ ವಾಸ್ತುಶಿಲ್ಪದ ವಿವರಣೆಯಾಗಲಿ, ಅವರು ಬಳಸುವ ಭಾಷೆ ಮಾತ್ರ ಅಚ್ಚಗನ್ನಡ. ಇವರ ಈ ವಿಶಿಷ್ಟ ಶೈಲಿಯನ್ನು ಕಂಡು ಹೊರರಾಜ್ಯ ಮತ್ತು ವಿದೇಶಿ ಪ್ರವಾಸಿಗರು ಮೊದಲು ಆಶ್ಚರ್ಯಚಕಿತರಾಗುತ್ತಾರೆ, ನಂತರ ಅವರ ಭಾಷಾ ಪ್ರೇಮಕ್ಕೆ ಮಾರುಹೋಗುತ್ತಾರೆ. ಕೆಲವರಂತೂ ಇವರ ಮಾತು ಕೇಳಿ ಕನ್ನಡ ಕಲಿಯುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದಾರೆ
ಗಿರೀಶ್ ಕೇವಲ ಅರಮನೆಯ ಕಾವಲುಗಾರನಷ್ಟೇ ಅಲ್ಲ, ಬಿಡುವಿನ ವೇಳೆಯಲ್ಲಿ ಆಟೋ ಚಾಲಕರಾಗಿಯೂ ದುಡಿಯುತ್ತಾರೆ. ತಮ್ಮ ಆಟೋ ಏರುವ ಪ್ರಯಾಣಿಕರಿಗೂ ಕನ್ನಡದ ಮಹತ್ವವನ್ನು ತಿಳಿಸಿಕೊಡುತ್ತಾರೆ. ಇವರ ಮಾತಿನ ಹಾಸ್ಯ ಮತ್ತು ಸರಳತೆ ಎಂತವರನ್ನೂ ಸೆಳೆಯುತ್ತದೆ. "ಕನ್ನಡಕ್ಕಾಗಿ ಕೈ ಎತ್ತುವ ಮೊದಲು ಕನ್ನಡದಲ್ಲಿ ಮಾತನಾಡಿ" ಎಂಬುದು ಗಿರೀಶ್ ಅವರ ಪ್ರಮುಖ ಸಂದೇಶ. ನಾವು ನಮ್ಮ ಭಾಷೆಯನ್ನು ಗೌರವಿಸಿದಾಗ ಮಾತ್ರ ಅದರ ಮೌಲ್ಯ ಜಗತ್ತಿಗೆ ತಿಳಿಯುತ್ತದೆ ಎಂಬುದು ಅವರ ಅಚಲ ನಂಬಿಕೆ.
ಪ್ರವಾಸಿಗರಿಗೆ ಮಾದರಿ
ಗಿರೀಶ್ ಅವರ ಈ 15 ವರ್ಷಗಳ ಸತತ ಪ್ರಯತ್ನ ಇಂದು ಸಮಾಜಕ್ಕೆ ದೊಡ್ಡ ಮಾದರಿಯಾಗಿದೆ. ದೊಡ್ಡ ದೊಡ್ಡ ಪದವಿ ಪಡೆದವರೇ ಕನ್ನಡ ಬಳಸಲು ಮುಜುಗರ ಪಡುವ ಕಾಲದಲ್ಲಿ, ಅರಮನೆಯಂತಹ ಜಾಗತಿಕ ವೇದಿಕೆಯಲ್ಲಿ ಕನ್ನಡದ ಬಾವುಟ ಹಾರಿಸುತ್ತಿರುವ ಇವರ ಕಾರ್ಯ ಶ್ಲಾಘನೀಯ. ಸ್ಥಳೀಯ ಪ್ರವಾಸಿಗರು ಇವರ ಕಾರ್ಯವನ್ನು ಕನ್ನಡದ ಗೌರವ ಹೆಚ್ಚಿಸುವ ಕೆಲಸ ಎಂದು ಪ್ರಶಂಸಿಸುತ್ತಿದ್ದಾರೆ.
ಲಲಿತ ಮಹಲ್ ಅರಮನೆಯ ಭವ್ಯತೆಯ ಜೊತೆಗೆ ಗಿರೀಶ್ ಅವರ ಭಾಷಾ ಪ್ರೇಮವೂ ಅಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಮುಂದಿನ ಬಾರಿ ನೀವು ಮೈಸೂರಿಗೆ ಹೋದರೆ ಈ ಕನ್ನಡ ಕಂದನನ್ನು ಭೇಟಿಯಾಗುವುದನ್ನು ಮರೆಯಬೇಡಿ!