Apr 26, 2026 Languages : ಕನ್ನಡ | English

ಲಂಡನ್‌ನಲ್ಲಿ 100 ರೂಪಾಯಿ ಹಿಡಿದು ಶಾಪಿಂಗ್‌ಗೆ ಹೋದ ಭಾರತೀಯ ಮಹಿಳೆ - ಕೊನೆಗೆ ಸಿಕ್ಕಿದ್ದೇನು ಗೊತ್ತಾ?

ಇವತ್ತಿನ ಕಾಲದಲ್ಲಿ ಕೈತುಂಬಾ ಸಂಬಳ ಬಂದ್ರೂ ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗಿರುತ್ತೆ. ನಮ್ಮ ದೇಶದಲ್ಲೇ ಹೀಗಿರಬೇಕಾದ್ರೆ, ಇನ್ನು ಲಂಡನ್‌ನಂತಹ ದುಬಾರಿ ನಗರದಲ್ಲಿ ಜೀವನ ಮಾಡೋದು ಅಂದುಕೊಂಡಷ್ಟು ಸುಲಭವಲ್ಲ. ಇತ್ತೀಚೆಗೆ ಭಾರತೀಯ ಮಹಿಳೆಯೊಬ್ಬರು ಲಂಡನ್‌ನಲ್ಲಿ ಒಂದು ವಿಚಿತ್ರ ಚಾಲೆಂಜ್ ಸ್ವೀಕರಿಸಿದ್ದಾರೆ. ಅದೇನಪ್ಪಾ ಅಂದ್ರೆ, ಕೇವಲ 100 ರೂಪಾಯಿ ಹಿಡಿದು ಅಲ್ಲಿನ ಸೂಪರ್ ಮಾರ್ಕೆಟ್‌ನಲ್ಲಿ ಏನು ಖರೀದಿಸಬಹುದು ಅಂತ!

ನೂರು ರೂಪಾಯಿಯ ಅಸಲಿ ಮೌಲ್ಯ ಬಯಲು ಮಾಡಿದ ವೈರಲ್ ವಿಡಿಯೋ
ನೂರು ರೂಪಾಯಿಯ ಅಸಲಿ ಮೌಲ್ಯ ಬಯಲು ಮಾಡಿದ ವೈರಲ್ ವಿಡಿಯೋ

ಸಾಮಾನ್ಯವಾಗಿ ನಾವೆಲ್ಲಾ ಏನಂದುಕೊಳ್ತೀವಿ ಅಂದ್ರೆ, ವಿದೇಶಕ್ಕೆ ಹೋದ್ರೆ ಡಾಲರ್ ಅಥವಾ ಪೌಂಡ್‌ನಲ್ಲಿ ಸಂಬಳ ಬರುತ್ತೆ, ಆರಾಮಾಗಿ ಲೈಫ್ ಎಂಜಾಯ್ ಮಾಡಬಹುದು ಅಂತ. ಆದರೆ ಅಲ್ಲಿನ ಖರ್ಚು ಕೂಡ ಅದೇ ರೇಂಜ್‌ನಲ್ಲಿ ಇರುತ್ತೆ ಅನ್ನೋದು ಈ ವಿಡಿಯೋ ನೋಡಿದ್ರೆ ಅರ್ಥವಾಗುತ್ತೆ. ಇನ್‌ಸ್ಟಾಗ್ರಾಮ್‌ನಲ್ಲಿ @veggiewander ಅನ್ನೋ ಖಾತೆಯಲ್ಲಿ ಶೇರ್ ಆಗಿರೋ ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

View this post on Instagram

A post shared by Gagan & Arun (@veggiewander)

100 ರೂಪಾಯಿ ತಗೊಂಡು ಶಾಪಿಂಗ್‌ಗೆ ಹೋದಾಗ...

ಆ ಮಹಿಳೆ ಕೈಯಲ್ಲಿ ನೂರು ರೂಪಾಯಿ ನೋಟು ಹಿಡಿದು ಲಂಡನ್‌ನ ಒಂದು ಅಂಗಡಿಗೆ ಹೋಗ್ತಾರೆ. 100 ರೂಪಾಯಿ ಅಂದ್ರೆ ಬ್ರಿಟಿಷ್ ಕರೆನ್ಸಿಯಲ್ಲಿ ಸುಮಾರು 0.80 ಪೌಂಡ್ ಆಗಬಹುದು.

ಮೊದಲ ಪ್ರಯತ್ನ: ತಿನ್ನೋಕೆ ಏನಾದ್ರೂ ಸಿಗುತ್ತಾ ಅಂತ ಸ್ಯಾಂಡ್‌ವಿಚ್ ಸೆಕ್ಷನ್‌ಗೆ ಹೋಗ್ತಾರೆ. ಅಲ್ಲಿ ಒಂದು ಸಾಧಾರಣ ಚೀಸ್ ಮತ್ತು ಈರುಳ್ಳಿ ಸ್ಯಾಂಡ್‌ವಿಚ್ ಬೆಲೆ ಬರೋಬ್ಬರಿ 1.50 ಪೌಂಡ್ (ಅಂದ್ರೆ ನಮ್ಮ ದೇಶದ ಸುಮಾರು 190 ರೂ.!). ಬಜೆಟ್ ಮೀರಿರೋದ್ರಿಂದ ಅದನ್ನ ಅಲ್ಲಿಗೆ ಬಿಡ್ತಾರೆ.

ಎರಡನೇ ಪ್ರಯತ್ನ: ಕುಡಿಯೋಕೆ ಒಂದು ಲೀಟರ್ ಬೇಡ, ಬರೀ ಅರ್ಧ ಲೀಟರ್ ನೀರಿನ ಬಾಟಲಿ ತಗೊಳೋಣ ಅಂತ ಹೋದ್ರೆ, ಅದರ ಬೆಲೆ 1.15 ಪೌಂಡ್ (ಸುಮಾರು 145 ರೂ.!). ಇದು ಕೂಡ ಬಜೆಟ್‌ನಲ್ಲಿ ಬರಲಿಲ್ಲ.

ಮೂರನೇ ಪ್ರಯತ್ನ: ಮನೆಯಲ್ಲಿ ಅಡುಗೆ ಮಾಡೋಕೆ ಒಂದು ಎಲೆಕೋಸು ತಗೋಣ ಅಂದ್ರೆ ಅದರ ಬೆಲೆ 113 ರೂಪಾಯಿ, ಇನ್ನು ಓರಿಯೊ ಬಿಸ್ಕೆಟ್ ಪ್ಯಾಕೆಟ್ ಬೆಲೆ 200 ರೂಪಾಯಿಗೂ ಹೆಚ್ಚು!

ಕೊನೆಗೂ ಸಿಕ್ಕಿದ್ದು ಒಂದೇ ವಸ್ತು!

ಅಂಗಡಿಯಲ್ಲೆಲ್ಲಾ ಹುಡುಕಾಡಿ ಕೊನೆಗೆ ಆಕೆಗೆ ತನ್ನ ಬಜೆಟ್‌ನಲ್ಲಿ ಸಿಕ್ಕಿದ್ದು ಒಂದೇ ಒಂದು ಪುಟ್ಟ ಕ್ಯಾರೆಟ್ ಪ್ಯಾಕೆಟ್. ಅದರ ಬೆಲೆ 0.60 ಪೌಂಡ್, ಅಂದ್ರೆ ನಮ್ಮ ದೇಶದ ಸುಮಾರು 75 ರೂಪಾಯಿ. ಅಯ್ಯೋ, 100 ರೂಪಾಯಿಗೆ ಲಂಡನ್‌ನಲ್ಲಿ ಸಿಗೋದು ಬರೀ ಕ್ಯಾರೆಟ್ ಮಾತ್ರನಾ ಅಂತ ನೆಟ್ಟಿಗರು ಶಾಕ್ ಆಗಿದ್ದಾರೆ!

ನೆಟ್ಟಿಗರ ಚರ್ಚೆ ಹೇಗಿದೆ?

ಈ ವಿಡಿಯೋ ನೋಡಿ ಜನ ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ.

"ನಮ್ಮ ಭಾರತದಲ್ಲಿ 100 ರೂಪಾಯಿ ತಗೊಂಡು ಹೋದ್ರೆ ಒಂದು ಚೀಲದ ತುಂಬಾ ತರಕಾರಿ ತರಬಹುದು" ಅಂತ ಒಬ್ಬರು ಹೇಳಿದ್ರೆ,

"ಬರೀ ಬೆಲೆಯನ್ನು ನೋಡಬೇಡಿ, ಅಲ್ಲಿ ಸಿಗೋ ಸಂಬಳವನ್ನೂ ನೋಡಿ. ಅಲ್ಲಿನ ಆದಾಯಕ್ಕೆ ತಕ್ಕಂತೆ ಬೆಲೆ ಇರುತ್ತೆ" ಅಂತ ಇನ್ನೊಬ್ಬರು ಲಾಜಿಕ್ ಮಾತಾಡಿದ್ದಾರೆ.

ಒಟ್ಟಿನಲ್ಲಿ, ಕರೆನ್ಸಿ ಮೌಲ್ಯ ಮತ್ತು ಕೊಳ್ಳುವ ಶಕ್ತಿ (Purchasing Power) ದೇಶದಿಂದ ದೇಶಕ್ಕೆ ಎಷ್ಟು ವ್ಯತ್ಯಾಸ ಇರುತ್ತೆ ಅನ್ನೋದಕ್ಕೆ ಈ ಚಾಲೆಂಜ್ ಒಂದು ಬೆಸ್ಟ್ ಎಕ್ಸಾಂಪಲ್.

ನಮ್ಮೂರಿನಲ್ಲಿ 100 ರೂಪಾಯಿಗೆ ರಾಜನಂತೆ ಶಾಪಿಂಗ್ ಮಾಡಬಹುದು ಅನ್ನೋದು ಈ ವಿಡಿಯೋ ನೋಡಿದ ಮೇಲೆ ಹೆಮ್ಮೆ ಅನ್ಸೋದು ಸುಳ್ಳಲ್ಲ!

Latest News