ಶತಮಾನಗಳ ಕುತೂಹಲಕ್ಕೆ ವಿಜ್ಞಾನ ಈಗ ಹೊಸ ಆಯಾಮ ನೀಡುತ್ತಿದೆ. 100 ವರ್ಷಗಳ ಜೀವನಾವಧಿಯ ಮಿತಿಯನ್ನು ಮೀರಿ 200 ವರ್ಷಗಳವರೆಗೆ ಬದುಕುವ ಸಾಧ್ಯತೆಯನ್ನು ಸಂಶೋಧಕರು ಪರೀಕ್ಷಿಸುತ್ತಿದ್ದಾರೆ. ಈ ದೀರ್ಘಾಯುಷ್ಯದ ಕನಸು ನನಸಾಗಲು ಜೈವಿಕ ಇಂಜಿನಿಯರಿಂಗ್ ಮತ್ತು ಆಧುನಿಕ ಚಿಕಿತ್ಸೆಗಳು ಹೇಗೆ ಪೂರಕವಾಗಬಲ್ಲವು ಎಂಬುದು ಈಗಿನ ಪ್ರಮುಖ ಚರ್ಚೆಯ ವಿಷಯ.
ಇತಿಹಾಸದಲ್ಲಿ ಇದುವರೆಗೆ ಅತ್ಯಂತ ದೀರ್ಘಕಾಲ ಬದುಕಿದ ವ್ಯಕ್ತಿ ಎಂದರೆ ಫ್ರಾನ್ಸ್‌ನ ಜೀನ್ ಕ್ಯಾಲ್ಮೆಂಟ್. ಒಬ್ಬ ಮನುಷ್ಯ 122 ವರ್ಷ ಬದುಕಬಲ್ಲನೇ? ಹೌದು, ಅವರು ಆ ಸಾಧನೆ ಮಾಡಿ ವಿಶ್ವ ದಾಖಲೆ ಬರೆದಿದ್ದಾರೆ. ಆದರೆ, ವಿಜ್ಞಾನದ ಪ್ರಕಾರ ಮನುಷ್ಯನ ದೇಹದ 'ಎಕ್ಸ್‌ಪೈರಿ ಡೇಟ್' ಅಥವಾ ಮಿತಿ 115 ರಿಂದ 120 ವರ್ಷಗಳು ಮಾತ್ರ. ಯಾಕೆಂದರೆ, ನಮ್ಮ ಜೀವಕೋಶಗಳು ತಮ್ಮನ್ನು ತಾವು ಹೊಸತಾಗಿಸಿಕೊಳ್ಳುವ ಮ್ಯಾಜಿಕ್ ಈ ಅವಧಿಯ ನಂತರ ನಿಂತುಹೋಗುತ್ತದೆ.
200 ವರ್ಷಗಳ ಆಯುಷ್ಯ ಸಾಧ್ಯವೆನ್ನಲು ಕಾರಣಗಳು
ಕೆಲವು ವಿಜ್ಞಾನಿಗಳು ಮನುಷ್ಯ 200 ವರ್ಷ ಬದುಕಬಹುದು ಎಂದು ಹೇಳಲು ಪ್ರಮುಖವಾಗಿ ಮೂರು ಕಾರಣಗಳನ್ನ ನೀಡುತ್ತಾರೆ:
ಡಿಎನ್‌ಎ ಸಂಶೋಧನೆ: ನಮ್ಮ ವಯಸ್ಸಾಗಲು ಮುಖ್ಯ ಕಾರಣ ಡಿಎನ್‌ಎ ಹಾನಿ. ಆದರೆ ಪ್ರಕೃತಿಯಲ್ಲಿ ಬೋಹೆಡ್ ತಿಮಿಂಗಿಲದಂತಹ ಪ್ರಾಣಿಗಳು 200 ವರ್ಷಗಳಿಗೂ ಹೆಚ್ಚು ಕಾಲ ಬದುಕುತ್ತವೆ. ಅವುಗಳ ದೇಹದಲ್ಲಿ ಡಿಎನ್‌ಎ ಹಾನಿಯನ್ನ ತಾವೇ ಸರಿಪಡಿಸಿಕೊಳ್ಳುವ ಅದ್ಭುತ ವ್ಯವಸ್ಥೆ ಇರುತ್ತದೆ. ಅದೇ ತಂತ್ರಜ್ಞಾನವನ್ನು ಮಾನವನ ಮೇಲೆ ಪ್ರಯೋಗಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.
ಆಧುನಿಕ ವೈದ್ಯಕೀಯ ತಂತ್ರಜ್ಞಾನ: ಇಂದು ನಮ್ಮಲ್ಲಿ 'ಜೈವಿಕ ವಯಸ್ಸನ್ನು' ಅಳೆಯುವ ಸಾಧನಗಳಿವೆ. ಜೊತೆಗೆ "ಸ್ಟೆಮ್ ಸೆಲ್ ಥೆರಪಿ" ಮತ್ತು "ಜೀನ್ ಎಡಿಟಿಂಗ್" ಮೂಲಕ ಹಾನಿಗೊಳಗಾದ ಅಂಗಗಳನ್ನು ಸರಿಪಡಿಸುವ ಶಕ್ತಿ ವಿಜ್ಞಾನಕ್ಕೆ ಸಿಕ್ಕಿದೆ. ಭವಿಷ್ಯದಲ್ಲಿ ಪ್ರಯೋಗಾಲಯದಲ್ಲಿ ಬೆಳೆದ ಕೃತಕ ಅಂಗಗಳನ್ನ ಮನುಷ್ಯನಿಗೆ ಅಳವಡಿಸುವ ಮೂಲಕ ಆಯಸ್ಸನ್ನು ಹೆಚ್ಚಿಸಬಹುದು ಎಂಬುದು ವಿಜ್ಞಾನಿಗಳ ನಂಬಿಕೆ.
ಕೃತಕ ಬುದ್ಧಿಮತ್ತೆ (AI): ಆರೋಗ್ಯ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನವು ರೋಗಗಳನ್ನು ಮೊದಲೇ ಪತ್ತೆಹಚ್ಚಲು ಮತ್ತು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಔಷಧಿಗಳನ್ನು ತಯಾರಿಸಲು ಸಹಾಯ ಮಾಡುತ್ತಿದೆ.
ಇನ್ನೊಂದೆಡೆ, ಅನೇಕ ವಿಜ್ಞಾನಿಗಳು 200 ವರ್ಷಗಳ ಆಯುಷ್ಯ ಎಂಬುದು ಒಂದು ಕನಸು ಮಾತ್ರ ಎಂದು ಹೇಳುತ್ತಾರೆ. ಅವರ ಪ್ರಕಾರ, ಮಾನವನ ದೇಹವು ಒಂದು ಯಂತ್ರದಂತೆ. ಎಷ್ಟೇ ರಿಪೇರಿ ಮಾಡಿದರೂ ಒಂದು ಹಂತದ ನಂತರ ದೇಹದ ಮೂಲ ಜೀವಕೋಶಗಳು ಸಂಪೂರ್ಣವಾಗಿ ದಣಿದು ಹೋಗುತ್ತವೆ. ಅಲ್ಲದೆ, ಪರಿಸರ ಮಾಲಿನ್ಯ, ಹೊಸ ರೀತಿಯ ರೋಗಗಳು ಮತ್ತು ಮಾನಸಿಕ ಒತ್ತಡಗಳು ಮಾನವನ ಆಯಸ್ಸನ್ನ ಕಡಿಮೆ ಮಾಡುತ್ತಿವೆ ಹೊರತು ಹೆಚ್ಚಿಸುತ್ತಿಲ್ಲ ಎಂಬುದು ಇವರ ವಾದ.
ಮುಂದೆ ನೂರು ವರ್ಷ ಬಾಳುವುದು ಅಷ್ಟು ಕಷ್ಟದ ಕೆಲಸವಲ್ಲ. ವಿಜ್ಞಾನ ಬೆಳೆದಂತೆ ಮನುಷ್ಯ 150 ವರ್ಷಗಳ ಕಾಲವೂ ಜೀವಿಸಬಹುದು. ಆದರೆ 200 ವರ್ಷಗಳ ಕಾಲ ಬದುಕುವ ವಿಚಾರ ಇನ್ನೂ ಕೇವಲ ಒಂದು ಚರ್ಚೆಯಾಗಿಯೇ ಉಳಿದಿದೆ ಹೊರತು ಅದು ಸದ್ಯಕ್ಕೆ ಸಾಧ್ಯವಿಲ್ಲ.
ಭವಿಷ್ಯದ ಸಂಶೋಧನೆಗಳು ಮನುಷ್ಯನ ಆಯಸ್ಸನ್ನು ಎಲ್ಲಿಗೆ ಕೊಂಡೊಯ್ಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ಆರೋಗ್ಯಕರ ಜೀವನಶೈಲಿ ಮತ್ತು ವಿಜ್ಞಾನದ ನೆರವು ಸೇರಿದರೆ ದೀರ್ಘಾಯುಷ್ಯ ಪಡೆಯುವುದು ಅಸಾಧ್ಯವೇನಲ್ಲ.