ನೋಟಿನ ಮಳೆಯಲ್ಲಿ ಮುಳುಗಿದ ಜನಪದ ಗಾಯಕ - ಧಾರ್ಮಿಕ ಕಾರ್ಯಕ್ರಮದಲ್ಲಿ ಕೋಟಿ ಕೋಟಿ ಹಣದ ಪ್ರದರ್ಶನ!! ವಿಡಿಯೋ;

ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಗುಜರಾತಿ ಜನಪದ ಗಾಯಕರೊಬ್ಬರ ಮೇಲೆ ಭಕ್ತರು ಕೋಟಿ ಕೋಟಿ ರೂಪಾಯಿ ನೋಟುಗಳ ಮಳೆ ಸುರಿಸಿರುವ ವಿಲಕ್ಷಣ ಘಟನೆಯೊಂದು ಗುಜರಾತ್‌ನಲ್ಲಿ ನಡೆದಿದೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭೀಕರವಾಗಿ ವೈರಲ್ ಆಗುತ್ತಿದ್ದು, ಪರ-ವಿರೋಧದ ದೊಡ್ಡ ಸಾಂಸ್ಕೃತಿಕ ಚರ್ಚೆಯನ್ನೇ ಹುಟ್ಟುಹಾಕಿದೆ!

ಜನಪದ ಗಾಯಕನ ಮೇಲೆ ಕೋಟಿ ಕೋಟಿ ನೋಟುಗಳ ಮಳೆ! | Photo Credit: https://x.com/DeshGujarat
ಜನಪದ ಗಾಯಕನ ಮೇಲೆ ಕೋಟಿ ಕೋಟಿ ನೋಟುಗಳ ಮಳೆ! | Photo Credit: https://x.com/DeshGujarat

ಗುಜರಾತ್‌ನ ಖಂಭಾಲಿಯಾದಲ್ಲಿ ನಡೆದ "ಶ್ರೀಮದ್ ಭಾಗವತ್ ಸಪ್ತಾಹ" ಎಂಬ ಪವಿತ್ರ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಪ್ರಸಿದ್ಧ ‘ಡೈರೋ’ (Dayro) ಜನಪದ ಗಾಯಕರಾದ ಕೀರ್ತಿದಾನ್ ಗಧ್ವಿ ಮತ್ತು ಮಾಯಾಭಾಯಿ ಅಹೀರ್ ಅವರು ವೇದಿಕೆಯಲ್ಲಿ ಭಜನೆ ಮತ್ತು ಜಾನಪದ ಗೀತೆಗಳನ್ನು ಹಾಡಲು ಶುರು ಮಾಡುತ್ತಿದ್ದಂತೆ, ಕಾರ್ಯಕ್ರಮಕ್ಕೆ ಬಂದಿದ್ದ ನೂರಾರು ಭಕ್ತರು ಮುಗಿಬಿದ್ದು ಇಬ್ಬರು ಗಾಯಕರ ಮೇಲೆ ನೋಟುಗಳ ಸುರಿಮಳೆಗೈದಿದ್ದಾರೆ. ಗಾಯಕರು ಕುಳಿತಿದ್ದ ಜಾಗ ಇಡೀ ನೋಟುಗಳ ರಾಶಿಯಿಂದಲೇ ಮುಚ್ಚಿಹೋಗಿತ್ತು!

ವಿಶೇಷವಾಗಿ ಸೌರಾಷ್ಟ್ರ ಭಾಗದ ಜನರಿಗೆ ಈ ‘ಡೈರೋ’ ಕಾರ್ಯಕ್ರಮಗಳು ಹೊಸದೇನಲ್ಲ. ಇದೊಂದು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಹಳೆಯ ಸಾಂಪ್ರದಾಯಿಕ ಜಾನಪದ ಕಲಾ ಪ್ರಕಾರವಾಗಿದೆ. ಇಂತಹ ಧಾರ್ಮಿಕ ಮತ್ತು ಸಾಮಾಜಿಕ ಕೂಟಗಳಲ್ಲಿ ಗಾಯಕರು ದೈವಿಕ ಹಾಡುಗಳನ್ನು ಅಥವಾ ಭಜನೆಗಳನ್ನು ಹಾಡುವಾಗ ಭಕ್ತರು ಮತ್ತು ಪ್ರೇಕ್ಷಕರು ತಮ್ಮ ಸಂತೋಷ ಹಾಗೂ ಭಕ್ತಿಯ ಸಂಕೇತವಾಗಿ ಹಣವನ್ನು ವೇದಿಕೆಯ ಮೇಲೆ ಎಸೆಯುತ್ತಾರೆ. ಇದನ್ನು ಅಲ್ಲಿನ ಜನ ಸ್ಥಳೀಯವಾಗಿ ಒಂದು ಗೌರವದ ಆಚರಣೆ ಎಂದೇ ಭಾವಿಸುತ್ತಾರೆ!

ಬಂದ ಹಣವೆಲ್ಲಾ ಹೋಗೋದು ಎಲ್ಲಿಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್;

ವೇದಿಕೆಯ ಮೇಲೆ ಲಕ್ಷ ಲಕ್ಷ ಹಣ ಸಾರ್ವಜನಿಕವಾಗಿ ಪ್ರದರ್ಶನವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಈ ಗಲಾಟೆಗೆ ಬ್ರೇಕ್ ಹಾಕಿರುವ ಕಾರ್ಯಕ್ರಮದ ಆಯೋಜಕರು, ಹಣದ ಸದ್ಬಳಕೆಯ ಬಗ್ಗೆ ಮಹತ್ವದ ಸ್ಪಷ್ಟನೆ ನೀಡಿದ್ದಾರೆ.

ಇಲ್ಲಿ ವೇದಿಕೆಯ ಮೇಲೆ ಬಿದ್ದಿರುವ ಹಣ ವೈಯಕ್ತಿಕವಾಗಿ ಯಾವೊಬ್ಬ ಗಾಯಕನ ಜೇಬಿಗೂ ಹೋಗುವುದಿಲ್ಲ. ಈ ಧಾರ್ಮಿಕ ಕಾರ್ಯಕ್ರಮದ ಖರ್ಚು-ವೆಚ್ಚಗಳನ್ನು ಹೊರತುಪಡಿಸಿ, ಇಲ್ಲಿ ಸಂಗ್ರಹವಾಗಿರುವ ಪ್ರತಿಯೊಂದು ರೂಪಾಯಿಯನ್ನೂ ಅಹಮದಾಬಾದ್‌ನಲ್ಲಿರುವ ‘ಗುಜರಾತ್ ಅಹೀರ್ ಕನ್ಯಾ ಛಾತ್ರಾಲಯ’ (ಹೆಣ್ಣುಮಕ್ಕಳ ಉಚಿತ ಹಾಸ್ಟೆಲ್) ನಿರ್ಮಾಣಕ್ಕೆ ಹಾಗೂ ಸ್ಥಳೀಯ ಗೋಶಾಲೆಗಳ ನಿರ್ವಹಣೆಗೆ ಸಂಪೂರ್ಣವಾಗಿ ಬಳಸಲಾಗುತ್ತದೆ, ಎಂದು ಆಯೋಜಕರು ತಿಳಿಸಿದ್ದಾರೆ.

ಆಚರಣೆಯನ್ನು ಬೆಂಬಲಿಸಿದ ಸ್ಥಳೀಯ ನಿವಾಸಿಗಳು;

ಆಯೋಜಕರ ಈ ನಿರ್ಧಾರವನ್ನು ಸ್ಥಳೀಯರು ಮುಕ್ತಕಂಠದಿಂದ ಬೆಂಬಲಿಸಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವಾಗಲು ಮತ್ತು ಮೂಕಪ್ರಾಣಿಗಳಾದ ಹಸುಗಳ ರಕ್ಷಣೆಗೆ ಸಮುದಾಯದ ಜನರು ಒಟ್ಟಾಗಿ ಸೇರಿ ತಮ್ಮ ಕೈಲಾದ ಆರ್ಥಿಕ ಸಹಾಯವನ್ನು ಈ ಸಾಂಪ್ರದಾಯಿಕ ರೂಪದಲ್ಲಿ ಮಾಡುತ್ತಿದ್ದಾರೆ. ಇದನ್ನು ಯಾರೂ ತಪ್ಪು ತಿಳಿಯಬಾರದು ಮತ್ತು ನೆಗೆಟಿವ್ ಆಗಿ ನೋಡಬಾರದು ಎಂದು ಸ್ಥಳೀಯ ಸಾರ್ವಜನಿಕರು ವಾದಿಸಿದ್ದಾರೆ.

"ಇದು ಭಕ್ತಿಯಲ್ಲ, ದುಡ್ಡಿನ ಅಹಂಕಾರ!" - ಕೆರಳಿದ ಹಿರಿಯ ಪತ್ರಕರ್ತೆ

ಆದರೆ, ಧಾರ್ಮಿಕ ಕಾರ್ಯಕ್ರಮದ ಹೆಸರಿನಲ್ಲಿ ಸಾರ್ವಜನಿಕವಾಗಿ ಹಣವನ್ನು ಈ ರೀತಿ ಪ್ರದರ್ಶನ ಮಾಡುವುದರ ವಿರುದ್ಧ ದೇಶದ ಪ್ರಮುಖ ವಿಶ್ಲೇಷಕರು ಕಿಡಿಕಾರಿದ್ದಾರೆ. ಖ್ಯಾತ ಹಿರಿಯ ಮಹಿಳಾ ಪತ್ರಕರ್ತೆ ಶೀಲಾ ಭಟ್ ಸೇರಿದಂತೆ ಹಲವು ಗಣ್ಯರು ಈ ದೃಶ್ಯಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.

"ಪವಿತ್ರವಾದ ಧಾರ್ಮಿಕ ವೇದಿಕೆಯಲ್ಲಿ ಇಂತಹ ದೃಶ್ಯಗಳನ್ನು ನೋಡುವುದೇ ಅಸಹ್ಯಕರವಾಗಿದೆ. ಇದು ಅತ್ಯಂತ ಅಗ್ಗದ ಮತ್ತು ಕೆಟ್ಟ ಪ್ರದರ್ಶನ. ಸತ್ಕಾರ್ಯಕ್ಕೆ ದಾನ ಮಾಡಬೇಕೆಂದರೆ ಅದನ್ನು ಗೌಪ್ಯವಾಗಿ ಅಥವಾ ವ್ಯವಸ್ಥಿತವಾಗಿ ಬ್ಯಾಂಕ್ ಖಾತೆಗಳ ಮೂಲಕ ಮಾಡಬಹುದು. ಅದನ್ನು ಬಿಟ್ಟು ದೇವರ ಹೆಸರಿನಲ್ಲಿ, ಇಷ್ಟು ಕೀಳಾಗಿ ದುಡ್ಡಿನ ಅಹಂಕಾರವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ನಮ್ಮ ಸಂಸ್ಕೃತಿಗೆ ಶೋಭೆ ತರುವುದಿಲ್ಲ," ಎಂದು ಟೀಕಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಾಂಸ್ಕೃತಿಕ ಮಹಾಯುದ್ಧ!

ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಎರಡು ಬಣಗಳಾಗಿ ಜಗಳವಾಡುತ್ತಿದ್ದಾರೆ. ಒಂದು ಕಡೆಯ ಜನ, "ಸಮುದಾಯದ ಒಳಿತಿಗಾಗಿ ಮತ್ತು ಶಿಕ್ಷಣಕ್ಕಾಗಿ ಜನರು ಉದಾರವಾಗಿ ದಾನ ಮಾಡುತ್ತಿರುವುದು ಹೆಮ್ಮೆಯ ವಿಷಯ, ಇದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೊಂದು ಕಡೆಯ ನೆಟ್ಟಿಗರು, "ದೇವಸ್ಥಾನ ಮತ್ತು ಪ್ರವಚನ ಕೇಂದ್ರಗಳು ಭಕ್ತಿ ಮತ್ತು ಸರಳತೆಯ ಸಂಕೇತವಾಗಿರಬೇಕೇ ಹೊರತು, ಶ್ರೀಮಂತರ ಹಣದ ಪ್ರದರ್ಶನದ ಅಖಾಡವಾಗಬಾರದು," ಎಂದು ಕಮೆಂಟ್ ಮಾಡುತ್ತಿದ್ದಾರೆ.

ಹೆಣ್ಣುಮಕ್ಕಳ ಹಾಸ್ಟೆಲ್ ನೆಪದಲ್ಲಿ ನಡೆದ ಈ ಕೋಟಿ ಕೋಟಿ ನೋಟುಗಳ ಮಳೆ ಈಗ ದೇಶಾದ್ಯಂತ ದೊಡ್ಡ ಸಾಂಸ್ಕೃತಿಕ ಮತ್ತು ನೈತಿಕ ಚರ್ಚೆಗೆ ಗ್ರಾಸವಾಗಿರುವುದಂತೂ ನಿಜ.

Latest News