ಜಗತ್ತಿನಲ್ಲಿ ಎಷ್ಟೋ ತರಹದ ಪ್ರೀತಿ, ಕರುಣೆಯ ಕಥೆಗಳನ್ನು ನಾವು ಕೇಳಿರುತ್ತೇವೆ. ಆದರೆ ರಾಜಸ್ಥಾನದ ಥಾರ್ ಮರುಭೂಮಿಯ ಮಡಿಲಿನಲ್ಲಿ ನಡೆಯುತ್ತಿರುವ ಒಂದು ಅಪರೂಪದ ಮತ್ತು ಎದೆ ತುಂಬಿ ಬರುವಂತಹ ಮಾನವೀಯತೆಯ ಕಥೆ ಇಡೀ ಪ್ರಪಂಚಕ್ಕೇ ಮಾದರಿಯಾಗಿದೆ. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಧೋಲಿಯಾ ಮತ್ತು ಖೇತೋಲಾಯಿ ಎಂಬ ಹಳ್ಳಿಗಳಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಮನೆಗಳ ಅಂಗಳದಲ್ಲಿ ಒಂದು ಅದ್ಭುತ ದೃಶ್ಯ ಕಣ್ಣಿಗೆ ಬೀಳುತ್ತದೆ. ಅಲ್ಲಿನ ಮನೆಗಳಲ್ಲಿ ಜಿಂಕೆಯ ಪುಟ್ಟ ಮರಿಗಳು ಮಕ್ಕಳ ಜೊತೆ ಆಟ ಆಡುತ್ತಿರುತ್ತವೆ, ಇನ್ನು ಕೆಲವು ಕಡೆ ಮಹಿಳೆಯರು ಆ ಜಿಂಕೆ ಮರಿಗಳನ್ನು ಮಡಿಲಲ್ಲಿ ಮಲಗಿಸಿಕೊಂಡು ಸ್ವಂತ ಮಕ್ಕಳಂತೆ ದೇವರೆಂದು ಸಾಕುತ್ತಿದ್ದಾರೆ.
ಇದು ಕೇವಲ ಪ್ರಾಣಿಗಳ ಮೇಲಿರುವ ದಯೆಯಲ್ಲ, ಇದು ಪ್ರಕೃತಿ ಮತ್ತು ಮನುಷ್ಯನ ನಡುವೆ ಇರುವ ನೂರಾರು ವರ್ಷಗಳ ಹಳೆಯ ಆತ್ಮೀಯ ಸಂಬಂಧ. ಇದನ್ನು ಅಲ್ಲಿನ 'ಬಿಷ್ಣೋಯಿ' (Bishnoi) ಸಮುದಾಯದ ಜನ ತಮ್ಮ ಉಸಿರಾಗಿಸಿಕೊಂಡಿದ್ದಾರೆ.
ಅನಾಥ ಜಿಂಕೆ ಮರಿಗಳಿಗೆ ಬಿಷ್ಣೋಯಿ ಮಹಿಳೆಯರೇ ತಾಯಂದಿರು!
ಥಾರ್ ಮರುಭೂಮಿಯ ಭಾಗದಲ್ಲಿ ಹಗಲು-ರಾತ್ರಿ ವಾಹನಗಳ ಸಂಚಾರ, ಬೀದಿನಾಯಿಗಳ ದಾಳಿ ಅಥವಾ ಇನ್ಯಾವುದೋ ಅಪಘಾತಗಳಿಂದಾಗಿ ತಾಯಿ ಜಿಂಕೆಗಳು (ಹೇರಣಿ) ಸಾವನ್ನಪ್ಪುವುದು ಹೆಚ್ಚು. ಇಂತಹ ಸಂದರ್ಭದಲ್ಲಿ ತಾಯಿಯಿಲ್ಲದ ಆ ಪುಟ್ಟ ಜಿಂಕೆ ಮರಿಗಳು ಅನಾಥವಾಗಿ, ಅಸಹಾಯಕವಾಗಿ ಮರುಭೂಮಿಯಲ್ಲಿ ಅಲೆಯುತ್ತವೆ. ಇದನ್ನು ಕಂಡ ತಕ್ಷಣ ಬಿಷ್ಣೋಯಿ ಸಮುದಾಯದ ಮಹಿಳೆಯರು ಆ ಮರಿಗಳನ್ನು ಪ್ರೀತಿಯಿಂದ ತಮ್ಮ ಮನೆಗೆ ಎತ್ತಿಕೊಂಡು ಬರುತ್ತಾರೆ.
ಮನೆಗೆ ತಂದ ನವಜಾತ ಜಿಂಕೆ ಮರಿಯನ್ನು ಚಳಿಯಾಗದಂತೆ ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿ, ಮಗುವಿನಂತೆ ಮಲಗಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ತಾಯಿಯ ಹಾಲಿಲ್ಲದೆ ಆ ಮರಿ ಸತ್ತು ಹೋಗಬಾರದು ಎಂಬ ಕಾರಣಕ್ಕೆ ಆ ಗ್ರಾಮದ ತಾಯಂದಿರು ಮತ್ತು ಸೋದರಿಯರು ತಮ್ಮ ಸ್ವಂತ ಮಕ್ಕಳಂತೆ ಆ ಜಿಂಕೆ ಮರಿಗಳಿಗೂ ಹಾಲುಣಿಸುತ್ತಾರೆ! ಹೌದು, ಇದು ಕೇಳಲು ಆಶ್ಚರ್ಯವೆನಿಸಿದರೂ ಅಪ್ಪಟ ಸತ್ಯ. ಇದೇ ಕಾರಣಕ್ಕೆ ಆ ಹಳ್ಳಿಗಳಲ್ಲಿ ಜಿಂಕೆಗಳು ಕಾಡುಪ್ರಾಣಿಗಳಂತೆ ಇರದೆ, ಮನುಷ್ಯರ ನಡುವೆ ಯಾವುದೇ ಭಯವಿಲ್ಲದೇ ಕುಟುಂಬದ ಸದಸ್ಯರಂತೆ ಓಡಾಡಿಕೊಂಡಿರುತ್ತವೆ.
550 ವರ್ಷಗಳ ಇತಿಹಾಸ ಮತ್ತು 29 ತತ್ವಗಳು
ಪ್ರಕೃತಿ ಮತ್ತು ವನ್ಯಜೀವಿಗಳನ್ನು ರಕ್ಷಿಸುವ ಈ ಬಿಷ್ಣೋಯಿ ಸಮುದಾಯದ ಸಂಸ್ಕೃತಿ ಇವತ್ತಿನದಲ್ಲ. ಸುಮಾರು 550 ವರ್ಷಗಳ ಹಿಂದೆ 'ಗುರು ಜಂಭೇಶ್ವರ್' ಅವರು ಬಿಷ್ಣೋಯಿ ಸಮುದಾಯವನ್ನು ಸ್ಥಾಪಿಸಿದ್ದರು. ಅವರು ತಮ್ಮ ಜನರಿಗೆ ಬಾಳಲು 29 ಪ್ರಮುಖ ನಿಯಮಗಳನ್ನು (ತತ್ವಗಳನ್ನು) ನೀಡಿದ್ದರು. ಅದರಲ್ಲಿ ಪ್ರಾಣಿ ರಕ್ಷಣೆ, ಗಿಡ-ಮರಗಳನ್ನು ಬೆಳೆಸುವುದು ಮತ್ತು ಪರಿಸರದ ಸಮತೋಲನ ಕಾಯ್ದುಕೊಳ್ಳುವುದು ಎಲ್ಲಕ್ಕಿಂತ ಮೊದಲನೆಯ ಮತ್ತು ಅತ್ಯುನ್ನತ ನಿಯಮವಾಗಿದೆ. 'ಬಿಷ್-ನೋಯಿ' ಅಂದರೆ ಹಿಂದಿಯಲ್ಲಿ 20 (ಬೀಸ್) ಮತ್ತು 9 (ನೋ) ಸೇರಿ 29 ನಿಯಮಗಳನ್ನು ಪಾಲಿಸುವವರು ಎಂದರ್ಥ.
ಇತಿಹಾಸ ಪ್ರಸಿದ್ಧ 'ಖೇಜರ್ಲಿ' ಬಲಿದಾನ
ವನ್ಯಜೀವಿಗಳು ಮತ್ತು ಪರಿಸರಕ್ಕಾಗಿ ಪ್ರಾಣ ಕೊಡುವ ಈ ಛಲ ಬಿಷ್ಣೋಯಿ ಜನರ ರಕ್ತದಲ್ಲೇ ಹರಿದು ಬಂದಿದೆ. ಇದಕ್ಕೆ ಇತಿಹಾಸದಲ್ಲಿ ಒಂದು ದೊಡ್ಡ ಉದಾಹರಣೆಯಿದೆ. ಕ್ರಿಸ್ತಶಕ 1730 ರಲ್ಲಿ ಜೋಧ್‌ಪುರದ ಖೇಜರ್ಲಿ ಗ್ರಾಮದಲ್ಲಿ ರಾಜನ ಆಜ್ಞೆಯಂತೆ ಹಸಿರು 'ಖೇಜಡಿ' ಮರಗಳನ್ನು ಕತ್ತರಿಸಲು ಬಂದಾಗ, 'ಅಮೃತಾ ದೇವಿ ಬಿಷ್ಣೋಯಿ' ಎಂಬ ಧೀಮಂತ ಮಹಿಳೆಯ ನೇತೃತ್ವದಲ್ಲಿ ಇಡೀ ಗ್ರಾಮವೇ ಮರಗಳನ್ನು ಅಪ್ಪಿಕೊಂಡು ನಿಂತಿತು.
ಮರಗಳನ್ನು ಉಳಿಸಲು ಅಂದು ಬರೋಬ್ಬರಿ 362 ಬಿಷ್ಣೋಯಿ ಜನರು ತಮ್ಮ ತಲೆಗಳನ್ನೇ ಕತ್ತರಿಸಿಕೊಂಡು ಬಲಿದಾನ ಮಾಡಿದರು! ಈ ಐತಿಹಾಸಿಕ ಘಟನೆಯೇ ಮುಂದೆ ಭಾರತದಲ್ಲಿ ನಡೆದ ಪ್ರಸಿದ್ಧ 'ಚಿಪ್ಕೋ ಚಳವಳಿ'ಗೆ (Chipko Movement) ದೊಡ್ಡ ಪ್ರೇರಣೆಯಾಯಿತು.
ಪ್ರೀತಿಯಿಂದಲೇ ಜಿಂಕೆಗಳನ್ನು ಗೆದ್ದ ಹಳ್ಳಿಗರು
ಗ್ರಾಮದ ನಿವಾಸಿಗಳಾದ ನಿರ್ಮಲಾ ಬಿಷ್ಣೋಯಿ ಮತ್ತು ಶಿವ ಸೋನಿಯಾ ಮಾಂಜೂ ಅವರು ಹೇಳುವಂತೆ, "ನಮ್ಮ ಹಳ್ಳಿಗಳಲ್ಲಿ ಜಿಂಕೆಗಳು ನಮ್ಮನ್ನು ಕಂಡು ಹೆದರುವುದೇ ಇಲ್ಲ. ನಮ್ಮ ಮಕ್ಕಳು ಅವುಗಳ ಜೊತೆಯೇ ಆಟ ಆಡುತ್ತಾ ಬೆಳೆಯುತ್ತಾರೆ. ಗಾಯಗೊಂಡ ಅಥವಾ ಅನಾಥ ಜಿಂಕೆ ಮರಿ ಸಿಕ್ಕರೆ ನಮ್ಮ ಮನೆಯ ಮಹಿಳೆಯರು ರಾತ್ರಿಯಿಡೀ ನಿದ್ದೆಗೆಟ್ಟು ಅವುಗಳ ಉಪಚಾರ ಮಾಡುತ್ತಾರೆ." ಇನ್ನು ಕಡು ಬೇಸಿಗೆಯಲ್ಲಿ ವನ್ಯಜೀವಿಗಳು ಮತ್ತು ಪಕ್ಷಿಗಳು ಬಾಯಾರಿಕೆಯಿಂದ ಸಾಗಬಾರದು ಎಂದು ತಮ್ಮ ಜಮೀನು ಹಾಗೂ ಮನೆಗಳ ಸುತ್ತಮುತ್ತ ನೀರಿನ ಕುಂಡಗಳನ್ನು ನಿರ್ಮಿಸಿ ದಿನಾ ನೀರು ತುಂಬಿಸಿಡುತ್ತಾರೆ.
ಅಖಿಲ ಭಾರತ ಜೀವ ರಕ್ಷಾ ಬಿಷ್ಣೋಯಿ ಸಭಾದ ಅಧ್ಯಕ್ಷರಾದ ರಾಮಧನ್ ಬಿಷ್ಣೋಯಿ ಹೇಳುವಂತೆ, "ಜಿಂಕೆ ಅತ್ಯಂತ ಶಾಂತ ಮತ್ತು ಮೂಕ ಪ್ರಾಣಿ. ಯಾರಾದರೂ ಇವುಗಳನ್ನು ಬೇಟೆಯಾಡಿದರೆ ಅಥವಾ ಗಾಯಗೊಳಿಸಿದರೆ ನಮ್ಮ ಇಡೀ ಸಮಾಜಕ್ಕೆ ಭೀಕರ ನೋವಾಗುತ್ತದೆ. ವನ್ಯಜೀವಿಗಳನ್ನು ರಕ್ಷಿಸುವುದು ನಮ್ಮ ಸಾಂಸ್ಕೃತಿಕ ಹೆಮ್ಮೆ." ಸ್ವಂತ ಮಗುವಿನಂತೆ ಪ್ರಾಣಿಗಳನ್ನು ಪ್ರೀತಿಸುವ ಈ ಮರುಭೂಮಿಯ ತಾಯಂದಿರ ಮಮತೆಗೆ ಜಗತ್ತೇ ತಲೆಬಾಗಬೇಕಿದೆ.