ಧೂಮಪಾನ ಮಾಡುವುದಿಲ್ಲ ಎಂದರೆ ಲಂಗ್ಸ್‌ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ನಾವು ಪ್ರತಿದಿನ ಇರುವ ಪರಿಸರ ಕೂಡ ಶ್ವಾಸಕೋಶದ ಮೇಲೆ ಪರಿಣಾಮ ಬೀರಬಹುದು. ಹೊರಗಿನ ಹೊಗೆ, ಮನೆಯೊಳಗಿನ ಹೊಗೆ, ಧೂಳು, ರಾಸಾಯನಿಕಗಳು ಮತ್ತು ವ್ಯಾಯಾಮ ಮಾಡದಿರುವ ಅಭ್ಯಾಸವೂ ಉಸಿರಾಟದ ಆರೋಗ್ಯದ ಮೇಲೆ ಪರಿಣಾಮ ಬೀರುವ ಕಾರಣಗಳಾಗಿವೆ.
ಧೂಮಪಾನದಿಂದ ದೂರ ಇರುವುದು ಲಂಗ್ಸ್ ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದರ ಜೊತೆಗೆ ನಾವು ಉಸಿರಾಡುವ ಗಾಳಿ ಮತ್ತು ದಿನನಿತ್ಯದ ಕೆಲವು ಅಭ್ಯಾಸಗಳ ಬಗ್ಗೆಯೂ ಗಮನ ಕೊಡುವುದು ಅಗತ್ಯ ಎಂದು ಶ್ವಾಸಕೋಶ ತಜ್ಞ ಡಾ. ಅಂಕಿತ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ. ಪದೇಪದೇ ಕೆಮ್ಮು, ಉಬ್ಬಸ, ಎದೆ ಅಸ್ವಸ್ಥತೆ ಅಥವಾ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡರೆ ಅದನ್ನು ಸಾಮಾನ್ಯ ಎಂದು ನಿರ್ಲಕ್ಷಿಸಬಾರದು.
1. ಹೆಚ್ಚು ಹೊತ್ತು ಕಲುಷಿತ ಗಾಳಿಯಲ್ಲಿ ಇರುವುದು
ನಗರಗಳಲ್ಲಿ ವಾಹನಗಳ ಹೊಗೆ, ಧೂಳು ಮತ್ತು ಕೈಗಾರಿಕೆಗಳಿಂದ ಬರುವ ಹೊಗೆ ಗಾಳಿಯನ್ನು ಕಲುಷಿತಗೊಳಿಸುತ್ತದೆ. ಇಂತಹ ಗಾಳಿಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಉಸಿರಾಟದ ದಾರಿಯಲ್ಲಿ ತೊಂದರೆ ಉಂಟಾಗಬಹುದು. ಕೆಲವರಿಗೆ ಕೆಮ್ಮು ಅಥವಾ ಉಬ್ಬಸ ಕಾಣಿಸಿಕೊಳ್ಳಬಹುದು.
ಟ್ರಾಫಿಕ್ ಜಾಸ್ತಿ ಇರುವ ರಸ್ತೆಗಳು ಅಥವಾ ಧೂಳು ಹೆಚ್ಚಿರುವ ಪ್ರದೇಶಗಳಲ್ಲಿ ಕೆಲಸ ಮಾಡುವವರು ಹೆಚ್ಚು ಎಚ್ಚರಿಕೆ ವಹಿಸಬೇಕು. ಹೊರಗಿನ ಗಾಳಿ ಕಲುಷಿತವಾಗಿರುವ ಸಮಯದಲ್ಲಿ ಅನಗತ್ಯವಾಗಿ ಹೆಚ್ಚು ಹೊತ್ತು ಹೊರಗೆ ಇರುವುದನ್ನು ಕಡಿಮೆ ಮಾಡುವುದು ಒಳ್ಳೆಯದು.
2. ಮನೆಯೊಳಗೆ ಹೊಗೆ ತುಂಬಿಕೊಳ್ಳುವುದು
ಮನೆಯೊಳಗಿನ ಗಾಳಿಯ ಬಗ್ಗೆಯೂ ಗಮನ ಕೊಡಬೇಕು. ಅಡುಗೆ ಮಾಡುವಾಗ ಬರುವ ಹೊಗೆ, ಕಟ್ಟಿಗೆ ಅಥವಾ ಇತರ ಇಂಧನಗಳ ಹೊಗೆ, ಅಗರಬತ್ತಿ ಮತ್ತು ಸೊಳ್ಳೆ ಬತ್ತಿಯಿಂದ ಬರುವ ಹೊಗೆ ಕೋಣೆಯಲ್ಲೇ ಉಳಿದರೆ ಅದನ್ನು ನಾವು ಉಸಿರಾಡುತ್ತೇವೆ.
ಮನೆಯೊಳಗೆ ಗಾಳಿ ಸರಿಯಾಗಿ ಓಡಾಡದಿದ್ದರೆ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು. ಅಡುಗೆ ಮನೆಯಲ್ಲಿ ಎಕ್ಸಾಸ್ಟ್ ಬಳಸುವುದು, ಕಿಟಕಿ ತೆರೆದಿಡುವುದು ಮತ್ತು ಹೊಗೆ ಹೊರಗೆ ಹೋಗುವಂತೆ ನೋಡಿಕೊಳ್ಳುವುದು ಸಹಾಯ ಮಾಡುತ್ತದೆ.
3. ಕೆಲಸದ ಜಾಗದಲ್ಲಿ ಧೂಳು, ಹೊಗೆ
ಕೆಲವು ಉದ್ಯೋಗಗಳಲ್ಲಿ ಪ್ರತಿದಿನ ಧೂಳು, ರಾಸಾಯನಿಕ ಹೊಗೆ ಅಥವಾ ಸಣ್ಣ ಕಣಗಳ ನಡುವೆ ಕೆಲಸ ಮಾಡಬೇಕಾಗುತ್ತದೆ. ನಿರ್ಮಾಣ ಕೆಲಸ, ಕಾರ್ಖಾನೆ, ಪ್ರಯೋಗಾಲಯ ಮತ್ತು ಕೆಲವು ಕೈಗಾರಿಕಾ ಕೆಲಸಗಳಲ್ಲಿ ಇದು ಸಾಮಾನ್ಯ.
ಆದರೆ ಇದನ್ನು ಕೆಲಸದ ಭಾಗ ಎಂದು ಸುಮ್ಮನೆ ಬಿಡಬಾರದು. ಕೆಲಸದ ಸ್ಥಳದಲ್ಲಿ ನೀಡುವ ಮಾಸ್ಕ್ ಸೇರಿದಂತೆ ಸುರಕ್ಷತಾ ಸಾಧನಗಳನ್ನು ಸರಿಯಾಗಿ ಬಳಸಬೇಕು. ಪ್ರತಿದಿನ ಇಂತಹ ಧೂಳು ಅಥವಾ ರಾಸಾಯನಿಕ ಹೊಗೆಯನ್ನು ಉಸಿರಾಡುವುದು ಮುಂದೆ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು.
4. ಬೇರೆಯವರ ಸಿಗರೇಟ್ ಹೊಗೆ
ನೀವು ಸಿಗರೇಟ್ ಸೇದುವುದಿಲ್ಲ ಎಂದ ಮಾತ್ರಕ್ಕೆ ಹೊಗೆಯಿಂದ ಸಂಪೂರ್ಣ ದೂರ ಇದ್ದೀರಿ ಎಂದಲ್ಲ. ನಿಮ್ಮ ಪಕ್ಕದಲ್ಲಿರುವವರು ಧೂಮಪಾನ ಮಾಡಿದರೆ ಅವರ ಸಿಗರೇಟ್ ಹೊಗೆ ನಿಮ್ಮ ಉಸಿರಿನ ಮೂಲಕ ದೇಹಕ್ಕೆ ಹೋಗಬಹುದು. ಇದನ್ನು ಪರೋಕ್ಷ ಧೂಮಪಾನ ಎಂದು ಕರೆಯಲಾಗುತ್ತದೆ.
ಮನೆ ಮತ್ತು ಕಾರಿನೊಳಗೆ ಧೂಮಪಾನ ಮಾಡದಿರುವುದು ಉತ್ತಮ. ಮಕ್ಕಳಿರುವ ಮನೆಗಳಲ್ಲಿ ಈ ಬಗ್ಗೆ ಇನ್ನಷ್ಟು ಎಚ್ಚರಿಕೆ ವಹಿಸಬೇಕು.
5. ಮನೆ ಬಳಕೆಯ ಕೆಲವು ವಸ್ತುಗಳು
ಪೇಂಟ್, ಸೊಲ್ವೆಂಟ್, ಕೆಲವು ಕ್ಲೀನಿಂಗ್ ವಸ್ತುಗಳು ಸೇರಿದಂತೆ ನಾವು ದಿನನಿತ್ಯ ಬಳಸುವ ಕೆಲವು ವಸ್ತುಗಳಿಂದ ಗಟ್ಟಿಯಾದ ರಾಸಾಯನಿಕ ವಾಸನೆ ಮತ್ತು ಹೊಗೆ ಹೊರಬರಬಹುದು.
ಇವುಗಳನ್ನು ಬಳಸುವಾಗ ಕೋಣೆಯ ಕಿಟಕಿ ಅಥವಾ ಬಾಗಿಲು ತೆರೆದಿಡುವುದು ಒಳ್ಳೆಯದು. ಪ್ಯಾಕ್ ಮೇಲೆ ನೀಡಿರುವ ಸೂಚನೆಗಳನ್ನು ಪಾಲಿಸಬೇಕು. ಗಾಳಿ ಸರಿಯಾಗಿ ಓಡಾಡದ ಕೋಣೆಯಲ್ಲಿ ಇಂತಹ ವಸ್ತುಗಳನ್ನು ಬಳಸುವುದನ್ನು ತಪ್ಪಿಸುವುದು ಉತ್ತಮ.
6. ದಿನವಿಡೀ ಕುಳಿತುಕೊಳ್ಳುವುದು
ವ್ಯಾಯಾಮ ಮಾಡದೇ ದಿನವಿಡೀ ಕುಳಿತುಕೊಳ್ಳುವ ಅಭ್ಯಾಸವೂ ದೇಹದ ಫಿಟ್‌ನೆಸ್ ಮೇಲೆ ಪರಿಣಾಮ ಬೀರುತ್ತದೆ. ಇದು ಸಿಗರೇಟ್ ಅಥವಾ ವಾಯುಮಾಲಿನ್ಯದಂತೆ ನೇರವಾಗಿ ಲಂಗ್ಸ್‌ಗೆ ಹಾನಿ ಮಾಡುವುದಿಲ್ಲ. ಆದರೆ ದೈಹಿಕ ಸಾಮರ್ಥ್ಯ ಕಡಿಮೆಯಾದರೆ ಸಾಮಾನ್ಯ ಕೆಲಸ ಮಾಡುವಾಗಲೇ ಬೇಗ ಉಸಿರಾಡುವಂತಾಗಬಹುದು.
ಪ್ರತಿದಿನ ಸ್ವಲ್ಪ ಹೊತ್ತು ನಡೆಯುವುದು, ಸರಳ ವ್ಯಾಯಾಮ ಮಾಡುವುದು ಅಥವಾ ದೇಹಕ್ಕೆ ಹೊಂದುವ ಚಟುವಟಿಕೆಯಲ್ಲಿ ತೊಡಗುವುದು ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
7. ಕೆಮ್ಮು, ಉಸಿರಾಟದ ಸಮಸ್ಯೆಯನ್ನು ನಿರ್ಲಕ್ಷಿಸುವುದು
ಕೆಮ್ಮು ಬಂದಾಗ ಧೂಳು ಅಥವಾ ಹವಾಮಾನ ಬದಲಾವಣೆಯಿಂದ ಇರಬಹುದು ಎಂದು ಸುಮ್ಮನಾಗುವುದು ಸಾಮಾನ್ಯ. ಆದರೆ ಕೆಮ್ಮು ಬಹಳ ದಿನಗಳವರೆಗೆ ಮುಂದುವರಿದರೆ ಗಮನ ಕೊಡಬೇಕು.
ಪದೇಪದೇ ಉಬ್ಬಸ, ಎದೆ ಅಸ್ವಸ್ಥತೆ ಅಥವಾ ಕಾರಣ ಗೊತ್ತಿಲ್ಲದೆ ಉಸಿರಾಟ ಕಷ್ಟವಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಇಂತಹ ಲಕ್ಷಣಗಳಿಗೆ ಅಸ್ತಮಾ, ಉಸಿರಾಟದ ಮಾರ್ಗದ ಸಮಸ್ಯೆ, ಸೋಂಕು ಸೇರಿದಂತೆ ಹಲವು ಕಾರಣಗಳಿರಬಹುದು.
ಧೂಮಪಾನ ಮಾಡದಿರುವುದು ಲಂಗ್ಸ್ ಆರೋಗ್ಯ ಕಾಪಾಡಿಕೊಳ್ಳಲು ಒಳ್ಳೆಯ ಅಭ್ಯಾಸ. ಆದರೆ ಅದರ ಜೊತೆಗೆ ಮನೆಯೊಳಗಿನ ಹೊಗೆ, ಹೊರಗಿನ ಗಾಳಿ, ಕೆಲಸದ ಜಾಗದ ಧೂಳು ಮತ್ತು ದೈಹಿಕ ಚಟುವಟಿಕೆಯ ಬಗ್ಗೆಯೂ ಗಮನ ಕೊಡುವುದು ಅಗತ್ಯ. ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಪದೇಪದೇ ಕಾಣಿಸಿಕೊಂಡರೆ ಕಾರಣ ತಿಳಿದುಕೊಳ್ಳಲು ವೈದ್ಯರ ಸಲಹೆ ಪಡೆಯುವುದು ಉತ್ತಮ.