Wednesday, Nov 25, 2026
|
Advertisement

ಸೀತೆಯೂರಿಗೆ ರೈಲು ಬಂತು, ಹನುಮನ ಅಂಜನಾದ್ರಿಯಿಂದ ಅಯೋಧ್ಯೆಗೆ ಯಾವಾಗ ಟ್ರೈನ್!!

ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಿಂದ ಸೀತಾಮಾತೆಯ ಜನ್ಮಸ್ಥಳವೆಂದು ಪ್ರಸಿದ್ಧವಾಗಿರುವ ನೇಪಾಳದ ಜನಕಪುರ ಧಾಮಕ್ಕೆ ನೇರ ರೈಲು ಸೇವೆ ಆರಂಭವಾಗುತ್ತಿರುವ ಬೆನ್ನಲ್ಲೇ, ಕರ್ನಾಟಕದ ಹನುಮನ ಜನ್ಮಸ್ಥಳವೆಂದು ನಂಬಲಾಗಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಿಂದ ಅಯೋಧ್ಯೆಗೆ ನೇರ ರೈಲು ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು, | Photo Credit: https://www.instagram.com/mr_shreyansh_jain/\https://www.instagram.com/mahigraphy__/?e=386a0a52-7b40-420a-9698-c5a0b4409672&g=5
ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು, | Photo Credit: https://www.instagram.com/mr_shreyansh_jain/\https://www.instagram.com/mahigraphy__/?e=386a0a52-7b40-420a-9698-c5a0b4409672&g=5

ಭಾರತ ಮತ್ತು ನೇಪಾಳದ ಧಾರ್ಮಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಅಯೋಧ್ಯೆ–ಜನಕಪುರ ನಡುವೆ 'ಸರಯೂ-ಕಮಲಾ ಎಕ್ಸ್‌ಪ್ರೆಸ್' ರೈಲಿಗೆ 2026ರ ನವೆಂಬರ್ 23ರಂದು ಚಾಲನೆ ನೀಡಲಾಗಿದೆ. ಸುಮಾರು 604 ಕಿಲೋಮೀಟರ್ ದೂರವನ್ನು ಸಂಪರ್ಕಿಸುವ ಈ ರೈಲು ರಾಮಾಯಣಕ್ಕೆ ಸಂಬಂಧಿಸಿದ ಎರಡು ಪ್ರಮುಖ ಧಾರ್ಮಿಕ ಕ್ಷೇತ್ರಗಳ ನಡುವಿನ ಪ್ರಯಾಣವನ್ನು ಸುಲಭಗೊಳಿಸಲಿದೆ.  ಇದೇ ಬೆಳವಣಿಗೆ ಕರ್ನಾಟಕದ ಅಂಜನಾದ್ರಿ–ಅಯೋಧ್ಯೆ ನೇರ ರೈಲು ಸಂಪರ್ಕದ ಬೇಡಿಕೆಗೆ ಮತ್ತೊಮ್ಮೆ ಮಹತ್ವ ತಂದಿದೆ.

Advertisement

ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಬೇಡಿಕೆ ಯಾವಾಗ ಶುರುವಾಯಿತು?

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದಲ್ಲಿರುವ ಅಂಜನಾದ್ರಿ ಬೆಟ್ಟವನ್ನು ಹನುಮಂತನ ಜನ್ಮಸ್ಥಳವೆಂದು ಭಕ್ತರು ನಂಬುತ್ತಾರೆ. ರಾಮಾಯಣದ ಕಿಷ್ಕಿಂಧಾ ಪ್ರದೇಶದೊಂದಿಗೆ ಈ ಬೆಟ್ಟಕ್ಕೆ ಐತಿಹಾಸಿಕ ಮತ್ತು ಧಾರ್ಮಿಕ ಸಂಬಂಧವಿದೆ.  ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಅದರಲ್ಲೂ ಉತ್ತರ ಭಾರತದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಅಯೋಧ್ಯೆಯೊಂದಿಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ.

2021ರ ಡಿಸೆಂಬರ್‌ನಲ್ಲಿ ಅಂದಿನ ಸಂಸದ ಸಂಗಣ್ಣ ಕರಡಿ ಅವರು ಕಿಷ್ಕಿಂಧಾ ಪ್ರದೇಶದಿಂದ ಅಯೋಧ್ಯೆಗೆ ನೇರ ರೈಲು ಆರಂಭಿಸುವಂತೆ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದ್ದರು. ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಈ ಕುರಿತು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. 


ಶ್ರೀರಾಮಾಂಜನೇಯ ಎಕ್ಸ್‌ಪ್ರೆಸ್ ರೈಲು ಯೋಜನೆ

ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಸಂಪರ್ಕ ಕಲ್ಪಿಸುವ ಬೇಡಿಕೆಗೆ 'ಶ್ರೀರಾಮಾಂಜನೇಯ ಎಕ್ಸ್‌ಪ್ರೆಸ್' ಎಂದು ಹೆಸರಿಡುವ ಪ್ರಸ್ತಾಪವೂ ಇತ್ತು. 2022ರಲ್ಲಿ ಈ ರೈಲು ಯೋಜನೆ ಕುರಿತು ರೈಲ್ವೆ ಸಚಿವರ ಮಟ್ಟದಲ್ಲಿ ಚರ್ಚೆ ನಡೆಯುವ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ ರೈಲ್ವೆ ಇಲಾಖೆಯ ಉತ್ತರದಲ್ಲಿ ಕೊಪ್ಪಳದಿಂದ ಗುಂತಕಲ್ ಮಾರ್ಗದ ಮೂಲಕ ಅಯೋಧ್ಯೆಗೆ ಪ್ರಯಾಣಿಸಲು ಈಗಾಗಲೇ ಇರುವ ರೈಲು ಸಂಪರ್ಕವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಲಾಗಿತ್ತು. ಹೀಗಾಗಿ ನೇರ ರೈಲು ಆರಂಭಿಸುವ ಬೇಡಿಕೆ ಮುಂದುವರಿದರೂ, ಆ ಸಮಯದಲ್ಲಿ ಯಾವುದೇ ಅಂತಿಮ ವೇಳಾಪಟ್ಟಿ ಪ್ರಕಟವಾಗಿರಲಿಲ್ಲ. 


2025ರಲ್ಲಿ ಮತ್ತೆ ಚರ್ಚೆಗೆ ಬಂದ ಅಂಜನಾದ್ರಿ ರೈಲು ಯೋಜನೆ

2025ರ ಜನವರಿ 16ರಂದು ಕೊಪ್ಪಳ ಜಿಲ್ಲೆಯಲ್ಲಿ ಮಾತನಾಡಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಂಜನಾದ್ರಿಯಿಂದ ಅಯೋಧ್ಯೆಗೆ ನೇರ ರೈಲು ಸಂಪರ್ಕ ಕಲ್ಪಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದರು. ಈ ಎರಡು ಧಾರ್ಮಿಕ ಕ್ಷೇತ್ರಗಳನ್ನು ರೈಲ್ವೆ ಮೂಲಕ ಸಂಪರ್ಕಿಸುವ ಪ್ರಸ್ತಾವನೆ ಸ್ವೀಕರಿಸಲಾಗಿದೆ. ಅದರ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿರುವುದಾಗಿ ವರದಿಯಾಗಿತ್ತು. ಈ ಹೇಳಿಕೆಯಿಂದಾಗಿ ಅಂಜನಾದ್ರಿ–ಅಯೋಧ್ಯೆ ರೈಲು ಸಂಪರ್ಕದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿತ್ತು. ಆದರೆ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎನ್ನುವುದು ರೈಲು ಸಂಚಾರಕ್ಕೆ ಅಧಿಕೃತ ಅನುಮೋದನೆ ದೊರೆತಿದೆ ಎಂದರ್ಥವಲ್ಲ. 

Advertisement


ಅಯೋಧ್ಯೆ–ಜನಕಪುರ ರೈಲಿನ ವಿಶೇಷತೆ ಏನು?

ಅಯೋಧ್ಯೆಯಿಂದ ನೇಪಾಳದ ಜನಕಪುರ ಧಾಮಕ್ಕೆ ಸಂಪರ್ಕ ಕಲ್ಪಿಸುವ ಹೊಸ ರೈಲಿಗೆ ಸರಯೂ-ಕಮಲಾ ಎಕ್ಸ್‌ಪ್ರೆಸ್ ಎಂದು ಹೆಸರಿಡಲಾಗಿದೆ.

  • ಒಟ್ಟು ಪ್ರಯಾಣದ ದೂರ- ಸುಮಾರು 604 ಕಿಲೋಮೀಟರ್.
  • ಪ್ರಯಾಣದ ಅವಧಿ- ಸುಮಾರು 19 ಗಂಟೆಗಳು.
  • ಅಯೋಧ್ಯೆಯಿಂದ ಜನಕಪುರಕ್ಕೆ- ಪ್ರತಿ ಸೋಮವಾರ.
  • ಜನಕಪುರದಿಂದ ಅಯೋಧ್ಯೆಗೆ- ಪ್ರತಿ ಶನಿವಾರ.
  • ಪ್ರಮುಖ ನಿಲ್ದಾಣಗಳು-ಗೋರಖ್‌ಪುರ, ಬಸ್ತಿ, ಮಂಕಾಪುರ, ರಕ್ಸೌಲ್, ಸೀತಾಮಢಿ, ಮಧುಬನಿ ಮತ್ತು ಜಯನಗರ.

2026ರ ನವೆಂಬರ್ 23ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರು ರೈಲಿಗೆ ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ. ನವೆಂಬರ್ 28ರಿಂದ ನಿಯಮಿತ ಪ್ರಯಾಣಿಕರ ಸೇವೆ ಆರಂಭವಾಗಲಿದೆ ಎಂದು ವರದಿಯಾಗಿದೆ. 


ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಯಾವಾಗ?

ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಅಂಜನಾದ್ರಿ–ಅಯೋಧ್ಯೆ ನೇರ ರೈಲು ಸಂಚಾರ ಆರಂಭಿಸುವ ನಿಖರ ದಿನಾಂಕವನ್ನು ರೈಲ್ವೆ ಇಲಾಖೆ ಪ್ರಕಟಿಸಿಲ್ಲ. ಯೋಜನೆ ಕುರಿತು ಪ್ರಸ್ತಾವನೆ ಮತ್ತು ಪರಿಶೀಲನೆಯ ಹಂತದ ಮಾಹಿತಿ ಮಾತ್ರ ಲಭ್ಯವಿದೆ. ಈ ರೈಲು ಆರಂಭವಾದರೆ ಕರ್ನಾಟಕದ ಭಕ್ತರು ಹನುಮಂತನ ಜನ್ಮಸ್ಥಳವೆಂದು ನಂಬಲಾಗಿರುವ ಅಂಜನಾದ್ರಿ ಬೆಟ್ಟ ಹಾಗೂ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಗೆ ಒಂದೇ ರೈಲು ಸಂಪರ್ಕದ ಮೂಲಕ ಪ್ರಯಾಣಿಸುವ ಅವಕಾಶ ಪಡೆಯಬಹುದು.

ಇದರಿಂದ ಕೊಪ್ಪಳ ಜಿಲ್ಲೆಯ ಧಾರ್ಮಿಕ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಇದೀಗ ಭಕ್ತರ ಪ್ರಶ್ನೆ ಒಂದೇ: ಸೀತಾಮಾತೆಯ ಜನಕಪುರಕ್ಕೆ ರೈಲು ಸಂಪರ್ಕ ಕಲ್ಪಿಸಿದಂತೆ, ಹನುಮಂತನ ಅಂಜನಾದ್ರಿಗೂ ಅಯೋಧ್ಯೆಯಿಂದ ನೇರ ರೈಲು ಯಾವಾಗ ಬರಲಿದೆ?

Comments