Monday, Nov 23, 2026
|
Advertisement

ನವೆಂಬರ್ 26ರಂದು ಶಾಲೆಗಳಲ್ಲಿ ಬಿಸಿಯೂಟ ಬಂದ್? ₹10,500 ಗೌರವಧನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ನೌಕರರ ಪ್ರತಿಭಟನೆ!!

ನವೆಂಬರ್ 26 ರಂದು ಕರ್ನಾಟಕದದಲ್ಲಿ ಅಕ್ಷರ ದಾಸೋಹ ನೌಕರರು ಪ್ರತಿಭಟನೆಗೆ ಕರೆ ನೀಡ್ದಿದಾರೆ. ಆ ದಿನ ಕರ್ನಾಟಕದ ಎಲ್ಲ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಬರುದಿಲ್ಲ(ಬಂದ). ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಕಲ್ಯಾಣ ಸಮಿತಿ, ಪ್ರಜಾಸೇವಾ ಸಮಿತಿಯ ಸಂಯೋಜನೆಯಲ್ಲಿ ಈ ಪ್ರತಿಭಟನೆಗೆ ಕರೆ ನೀಡಿದೆ. ಹಲವು ವರ್ಷಗಳಿಂದ ಸರ್ಕಾರಿ ಶಾಲೆಗಳ ಲಕ್ಷಾಂತರ ಮಕ್ಕಳಿಗೆ ಅಡುಗೆ ತಯಾರಿಸಿ ಬಡಿಸುವ ಕೆಲಸ ಮಾಡುತ್ತಿದ್ದರೂ ತಮಗೆ ಸಿಗುತ್ತಿರುವ ಗೌರವಧನ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂಬುದು ನೌಕರರ ಅಸಮಾಧಾನವಾಗಿದೆ.

ಕರ್ನಾಟಕದಲ್ಲಿ ನ.26ರಂದು ಅಕ್ಷರ ದಾಸೋಹ ನೌಕರರ ಪ್ರತಿಭಟನೆ | Photo Credit: https://x.com/BC_520Kalaghata
ಕರ್ನಾಟಕದಲ್ಲಿ ನ.26ರಂದು ಅಕ್ಷರ ದಾಸೋಹ ನೌಕರರ ಪ್ರತಿಭಟನೆ | Photo Credit: https://x.com/BC_520Kalaghata

ಪ್ರಸ್ತುತ ನೀಡಲಾಗುತ್ತಿರುವ ಗೌರವಧನವನ್ನು ಕನಿಷ್ಠ ₹10,500ಕ್ಕೆ ಹೆಚ್ಚಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ. ಕುಟುಂಬದ ದೈನಂದಿನ ಖರ್ಚುಗಳನ್ನು ನಿಭಾಯಿಸಲು ಈಗಿನ ಹಣ ಸಾಕಾಗುತ್ತಿಲ್ಲ ಎಂದು ಬಹುತೇಕ ಮಹಿಳಾ ನೌಕರರು ಅಳಲು ತೋಡಿಕೊಂಡಿದ್ದಾರೆ. ಕೆಲಸದ ಅವಧಿ, ಹೊಣೆಗಾರಿಕೆ ಮತ್ತು ದೈಹಿಕ ಶ್ರಮವನ್ನು ಪರಿಗಣಿಸಿ ಕನಿಷ್ಠ ವೇತನದ ನಿಯಮಗಳನ್ನು ಜಾರಿಗೊಳಿಸಬೇಕು ಹಾಗೂ ಗೌರವಧನವನ್ನು ಪರಿಷ್ಕರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

12 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಗೌರವಧನ ಹೆಚ್ಚಳದ ಜೊತೆಗೆ ಒಟ್ಟು 12 ಪ್ರಮುಖ ಬೇಡಿಕೆಗಳನ್ನು ನೌಕರರ ಸಂಘಟನೆ ಸರ್ಕಾರದ ಮುಂದಿಟ್ಟಿದೆ. ನಿವೃತ್ತಿ ಸೌಲಭ್ಯ, ಆರೋಗ್ಯ ಸೇವೆ, ಉದ್ಯೋಗ ಭದ್ರತೆ, ಇಎಸ್‌ಐ ಮತ್ತು ಪಿಎಫ್ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ. ಹಲವು ವರ್ಷಗಳ ಕಾಲ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ನಿವೃತ್ತಿ ಸಂದರ್ಭದಲ್ಲಿ ಸೂಕ್ತ ಆರ್ಥಿಕ ನೆರವು ನೀಡಬೇಕು ಎಂಬ ಬೇಡಿಕೆಯೂ ಇದೆ.

ಇದಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಅಡುಗೆ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ನೌಕರರಿಗೆ ಸೂಕ್ತ ಕೆಲಸದ ವಾತಾವರಣ, ಸಮವಸ್ತ್ರ ಒದಗಿಸಬೇಕು ಮತ್ತು ಯಾವುದೇ ಮುನ್ಸೂಚನೆ ಅಥವಾ ನ್ಯಾಯಸಮ್ಮತ ಕಾರಣವಿಲ್ಲದೆ ಸೇವೆಯಿಂದ ತೆಗೆದುಹಾಕುವುದನ್ನು ತಡೆಯಲು ರಕ್ಷಣೆ ನೀಡಬೇಕು ಎಂದು ಸಮಿತಿ ಒತ್ತಾಯಿಸಿದೆ.

ರಾಮಸಂದ್ರ ಗೇಟ್ ಬಳಿ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ

ನವೆಂಬರ್ 26ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳ ಗಡಿಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಮೀಪದ ರಾಮಸಂದ್ರ ಗೇಟ್ ಬಳಿ ಪ್ರತಿಭಟನೆ ನಡೆಯಲಿದೆ. ಸಮಿತಿಯ ರಾಜ್ಯಾಧ್ಯಕ್ಷ ಜಿ.ಜಿ. ಹಳ್ಳಿ ನಾರಾಯಣಸ್ವಾಮಿ, ಸಂಸ್ಥಾಪಕ ರಾಜ್ಯ ಸಮಿತಿ ಅಧ್ಯಕ್ಷ ಕಲ್ವಮಂಜಲಿ ಶಿವಣ್ಣ, ರಾಜ್ಯ ಯುವ ಅಧ್ಯಕ್ಷ ರಾಮು ಶಿವಣ್ಣ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಅಕ್ಷರ ದಾಸೋಹ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಸಂಘಟನೆಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Advertisement

ಸಂವಿಧಾನ ದಿನದಂದು ಬಿಸಿಯೂಟ ಸೇವೆ ಸ್ಥಗಿತದ ಆತಂಕ

ನವೆಂಬರ್ 26ರಂದು ಸಂವಿಧಾನ ದಿನಾಚರಣೆ ನಡೆಯಲಿದ್ದು, ದೇಶದಾದ್ಯಂತ ಶಾಲೆಗಳಲ್ಲಿ ಸಂವಿಧಾನದ ಮಹತ್ವ ಸಾರುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದೇ ದಿನ ಅಕ್ಷರ ದಾಸೋಹ ನೌಕರರು ಬಿಸಿಯೂಟ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿರುವುದು ಶಾಲಾ ಆಡಳಿತ ಮಂಡಳಿಗಳು, ಶಿಕ್ಷಕರು ಮತ್ತು ಪೋಷಕರಲ್ಲಿ ಆತಂಕ ಮೂಡಿಸಿದೆ.

ನೌಕರರು ತಮ್ಮ ನಿರ್ಧಾರದಂತೆ ಸೇವೆ ಸ್ಥಗಿತಗೊಳಿಸಿದರೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಪ್ರತಿದಿನದಂತೆ ಮಧ್ಯಾಹ್ನದ ಊಟ ಸಿಗದಿರುವ ಸಾಧ್ಯತೆಯಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಶಾಲಾ ಮುಖ್ಯ ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಆರಂಭವಾಗುವ ಮೊದಲೇ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ (SDMC) ಸದಸ್ಯರು ಹಾಗೂ ಪೋಷಕರೂ ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನೌಕರರಿಗೆ ನ್ಯಾಯಯುತ ಗೌರವಧನ ಮತ್ತು ಮೂಲ ಸೌಲಭ್ಯಗಳು ದೊರೆಯಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.

ಗ್ರೂಪ್ ಡಿ ನೌಕರರ ಸ್ಥಾನಮಾನ ನೀಡುವ ಬಗ್ಗೆಯೂ ಚರ್ಚೆ

ಸರ್ಕಾರಿ ಶಾಲೆಗಳಲ್ಲಿ ಗ್ರೂಪ್ ಡಿ ಸಿಬ್ಬಂದಿ ಕೊರತೆಯಿರುವುದರಿಂದ ಸ್ವಚ್ಛತೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಕೆಲಸಗಳಲ್ಲಿಯೂ ಸಮಸ್ಯೆಗಳು ಎದುರಾಗುತ್ತಿವೆ ಎಂದು ಶಿಕ್ಷಕರು ಹೇಳಿದ್ದಾರೆ. ಅಕ್ಷರ ದಾಸೋಹ ನೌಕರರ ಕೆಲಸದ ಜವಾಬ್ದಾರಿ ಮತ್ತು ಸೇವಾ ನಿಯಮಗಳನ್ನು ಪರಿಷ್ಕರಿಸಿ, ಅಗತ್ಯವಿದ್ದಲ್ಲಿ ಅವರಿಗೆ ಗ್ರೂಪ್ ಡಿ ನೌಕರರ ಸ್ಥಾನಮಾನ ನೀಡುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಶಾಲಾ ಆವರಣದ ಸ್ವಚ್ಛತೆ ಮತ್ತು ನಿರ್ವಹಣೆಯ ಕೆಲಸಗಳನ್ನು ಅವರಿಗೆ ಅಧಿಕೃತವಾಗಿ ವಹಿಸಿದರೆ ಅದಕ್ಕೆ ತಕ್ಕ ಸಂಭಾವನೆ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಎಂದೂ ಶಿಕ್ಷಕರು ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ಮೇಲೆ ಸ್ವಚ್ಛತಾ ಜವಾಬ್ದಾರಿ ಹಾಕಲು ಸಾಧ್ಯವಿಲ್ಲದ ಕಾರಣ ಶಿಕ್ಷಕರ ಮೇಲೂ ಹೆಚ್ಚುವರಿ ಹೊರೆ ಬೀಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ಮಧ್ಯಸ್ಥಿಕೆಗೆ ಪೋಷಕರು, ಶಿಕ್ಷಕರ ಮನವಿ

ಅಕ್ಷರ ದಾಸೋಹ ನೌಕರರು ಹಲವು ವರ್ಷಗಳಿಂದ ಮಕ್ಕಳಿಗೆ ಆಹಾರ ಒದಗಿಸುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅವರ ಕೆಲಸಕ್ಕೆ ತಕ್ಕ ಗೌರವಧನ, ನಿವೃತ್ತಿ ಭದ್ರತೆ ಮತ್ತು ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವುದು ಅಗತ್ಯ ಎಂದು ಪೋಷಕರು ಹಾಗೂ ಸಮುದಾಯದ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್ 26ರ ಪ್ರತಿಭಟನೆ ಮತ್ತು ಬಿಸಿಯೂಟ ಸೇವೆ ಸ್ಥಗಿತದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸರ್ಕಾರ ತಕ್ಷಣ ನೌಕರರ ಸಂಘಟನೆಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ನೌಕರರ 12 ಬೇಡಿಕೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಮೂಲಕ ಅವರ ಹಿತಾಸಕ್ತಿಯನ್ನೂ ಕಾಪಾಡಬೇಕು, ಮಕ್ಕಳಿಗೆ ಪ್ರತಿದಿನದ ಊಟದ ವ್ಯವಸ್ಥೆಯೂ ನಿರಂತರವಾಗಿ ಮುಂದುವರಿಯುವಂತೆ ನೋಡಿಕೊಳ್ಳಬೇಕು ಎಂಬುದು ಪೋಷಕರು ಮತ್ತು ಶಿಕ್ಷಕರ ಮನವಿಯಾಗಿದೆ.

ಒಟ್ಟಿನಲ್ಲಿ, ಗೌರವಧನ ಹೆಚ್ಚಳ ಮತ್ತು ಮೂಲ ಸೌಲಭ್ಯಗಳಿಗಾಗಿ ಅಕ್ಷರ ದಾಸೋಹ ನೌಕರರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ರಾಜ್ಯದ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸರ್ಕಾರ ಈ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದರ ಮೇಲೆ ನೌಕರರ ಹೋರಾಟದ ಮುಂದಿನ ಬೆಳವಣಿಗೆ ಹಾಗೂ ವಿದ್ಯಾರ್ಥಿಗಳ ಊಟದ ವ್ಯವಸ್ಥೆ ಅವಲಂಬಿತವಾಗಿದೆ.

Comments