ಕರ್ನಾಟಕ ಸರ್ಕಾರವು 2027ನೇ ಸಾಲಿನ ಸರ್ಕಾರಿ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಮುಂದಿನ ವರ್ಷಕ್ಕೆ ಒಟ್ಟು 18 ಸಾರ್ವತ್ರಿಕ ರಜೆಗಳು ಮತ್ತು 19 ಪರಿಮಿತ ರಜೆಗಳನ್ನು ನಿಗದಿಪಡಿಸಲಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಜಾ ಪಟ್ಟಿಗೆ ಅನುಮೋದನೆ ನೀಡಲಾಗಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಸೂಚನೆಯ ಮೂಲಕ ವಿವರಗಳನ್ನು ಪ್ರಕಟಿಸಲಾಗಿದೆ.
ಸಾಮಾನ್ಯವಾಗಿ ಪ್ರತಿ ಭಾನುವಾರ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಸರ್ಕಾರಿ ಕಚೇರಿಗಳಿಗೆ ರಜೆ ಇರಲಿದೆ. ಇವುಗಳ ಜೊತೆಗೆ ಸರ್ಕಾರ ಘೋಷಿಸಿರುವ ಸಾರ್ವತ್ರಿಕ ರಜೆಗಳು ಅನ್ವಯವಾಗಲಿವೆ. ಸರ್ಕಾರಿ ನೌಕರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಪರಿಮಿತ ರಜೆಗಳ ಪಟ್ಟಿಯಿಂದ ವರ್ಷಕ್ಕೆ ಗರಿಷ್ಠ ಎರಡು ರಜೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿ ಪಡೆದು ಬಳಸಿಕೊಳ್ಳಬಹುದು.
2027ರ ಸಾರ್ವತ್ರಿಕ ರಜೆಗಳ ಸಂಪೂರ್ಣ ಪಟ್ಟಿ
ಮುಂದಿನ ವರ್ಷ ವಿವಿಧ ರಾಷ್ಟ್ರೀಯ ಹಬ್ಬಗಳು, ಧಾರ್ಮಿಕ ಆಚರಣೆಗಳು ಮತ್ತು ಮಹನೀಯರ ಜಯಂತಿಗಳ ಹಿನ್ನೆಲೆಯಲ್ಲಿ 18 ಸಾರ್ವತ್ರಿಕ ರಜೆಗಳನ್ನು ಘೋಷಿಸಲಾಗಿದೆ. ಅವುಗಳ ವಿವರ ಹೀಗಿದೆ.
ಜನವರಿ 15 - ಮಕರ ಸಂಕ್ರಾಂತಿ
ಜನವರಿ 26 - ಗಣರಾಜ್ಯೋತ್ಸವ
ಮಾರ್ಚ್ 6 - ಮಹಾ ಶಿವರಾತ್ರಿ
ಮಾರ್ಚ್ 10 - ಖುತುಬ್-ಎ-ರಂಜಾನ್
ಮಾರ್ಚ್ 26 - ಗುಡ್ ಫ್ರೈಡೇ
ಏಪ್ರಿಲ್ 7 - ಚಾಂದ್ರಮಾನ ಯುಗಾದಿ
ಏಪ್ರಿಲ್ 14 - ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
ಮೇ 1 - ಕಾರ್ಮಿಕ ದಿನಾಚರಣೆ
ಮೇ 17 - ಬಕ್ರೀದ್
ಜೂನ್ 16 - ಮೊಹರಂ ಕಡೆ ದಿನ
ಸೆಪ್ಟೆಂಬರ್ 4 - ವರಸಿದ್ಧಿ ವಿನಾಯಕ ವ್ರತ
ಸೆಪ್ಟೆಂಬರ್ 29 - ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 2 - ಗಾಂಧಿ ಜಯಂತಿ
ಅಕ್ಟೋಬರ್ 15 - ವಾಲ್ಮೀಕಿ ಜಯಂತಿ
ಅಕ್ಟೋಬರ್ 28 - ನರಕ ಚತುರ್ದಶಿ
ಅಕ್ಟೋಬರ್ 30 - ದೀಪಾವಳಿ
ನವೆಂಬರ್ 1 - ಕನ್ನಡ ರಾಜ್ಯೋತ್ಸವ
ನವೆಂಬರ್ 16 - ಕನಕದಾಸ ಜಯಂತಿ
19 ಪರಿಮಿತ ರಜೆಗಳ ಪಟ್ಟಿ
ಸಾರ್ವತ್ರಿಕ ರಜೆಗಳ ಜೊತೆಗೆ 19 ಪರಿಮಿತ ರಜೆಗಳನ್ನೂ ಸರ್ಕಾರ ಪ್ರಕಟಿಸಿದೆ. ಇವುಗಳಲ್ಲಿ ಸರ್ಕಾರಿ ನೌಕರರು ತಮ್ಮ ಧಾರ್ಮಿಕ ಮತ್ತು ವೈಯಕ್ತಿಕ ಆಚರಣೆಗಳಿಗೆ ಅನುಗುಣವಾಗಿ ಆಯ್ದ ರಜೆಗಳನ್ನು ಬಳಸಿಕೊಳ್ಳಬಹುದು. ಈ ಪಟ್ಟಿಯಲ್ಲಿ ಸೇರಿರುವ ಪ್ರಮುಖ ದಿನಗಳು ಹೀಗಿವೆ.
ಜನವರಿ 1 - ಹೊಸ ವರ್ಷಾರಂಭ
ಫೆಬ್ರವರಿ 15 - ಮಧ್ವ ನವಮಿ
ಮಾರ್ಚ್ 5 - ಜುಮತ್-ಉಲ್-ವಿದಾ
ಏಪ್ರಿಲ್ 15 - ಶ್ರೀರಾಮನವಮಿ
ಮೇ 10 - ರಾಮಾನುಜಾಚಾರ್ಯ ಜಯಂತಿ
ಮೇ 11 - ಶಂಕರಾಚಾರ್ಯ ಜಯಂತಿ
ಮೇ 20 - ಬುದ್ಧ ಪೂರ್ಣಿಮೆ
ಆಗಸ್ಟ್ 13 - ವರಮಹಾಲಕ್ಷ್ಮಿ ವ್ರತ
ಆಗಸ್ಟ್ 16 - ಋಗ್ ಉಪಾಕರ್ಮ
ಆಗಸ್ಟ್ 17 - ಯಜುರ್ ಉಪಾಕರ್ಮ
ಆಗಸ್ಟ್ 24 - ಶ್ರೀಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್ 3 - ಸ್ವರ್ಣಗೌರಿ ವ್ರತ
ಸೆಪ್ಟೆಂಬರ್ 9 - ಕನ್ಯಾ ಮರಿಯಮ್ಮ ಜಯಂತಿ
ಸೆಪ್ಟೆಂಬರ್ 14 - ಅನಂತ ಪದ್ಮನಾಭ ವ್ರತ
ಸೆಪ್ಟೆಂಬರ್ 15 - ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ
ಸೆಪ್ಟೆಂಬರ್ 17 - ವಿಶ್ವಕರ್ಮ ಜಯಂತಿ
ಅಕ್ಟೋಬರ್ 18 - ತುಲಾ ಸಂಕ್ರಮಣ ಪುಣ್ಯಕಾಲ
ಡಿಸೆಂಬರ್ 13 - ಹುತ್ತರಿ ಹಬ್ಬ
ಡಿಸೆಂಬರ್ 24 - ಕ್ರಿಸ್ಮಸ್ ಈವ್
ಕೆಲವು ಹಬ್ಬಗಳಿಗೆ ಪ್ರತ್ಯೇಕ ಸಾರ್ವತ್ರಿಕ ರಜೆ ಇಲ್ಲ
2027ರಲ್ಲಿ ಕೆಲವು ಪ್ರಮುಖ ಹಬ್ಬಗಳು ಈಗಾಗಲೇ ವಾರದ ರಜೆ ಅಥವಾ ಶನಿವಾರದ ರಜೆಯ ದಿನಗಳಂದು ಬರುತ್ತಿವೆ. ಹೀಗಾಗಿ ಅವುಗಳನ್ನು ಪ್ರತ್ಯೇಕ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಸೇರಿಸಿಲ್ಲ.
ಮಹಾವೀರ ಜಯಂತಿ ಏಪ್ರಿಲ್ 18ರಂದು, ಬಸವೇಶ್ವರ ಜಯಂತಿ ಮೇ 9ರಂದು, ಸ್ವಾತಂತ್ರ್ಯ ದಿನಾಚರಣೆ ಮತ್ತು ಈದ್-ಮಿಲಾದ್ ಆಗಸ್ಟ್ 15ರಂದು ಬರುತ್ತವೆ. ಈ ದಿನಗಳು ಭಾನುವಾರವಾಗಿರುವುದರಿಂದ ಪ್ರತ್ಯೇಕ ರಜೆ ಘೋಷಿಸಿಲ್ಲ.
ಅದೇ ರೀತಿ, ಮಹಾನವಮಿ ಮತ್ತು ಆಯುಧಪೂಜೆ ಅಕ್ಟೋಬರ್ 9ರಂದು ಎರಡನೇ ಶನಿವಾರದಂದು ಬರುತ್ತವೆ. ವಿಜಯದಶಮಿ ಅಕ್ಟೋಬರ್ 10ರಂದು ಭಾನುವಾರವಾಗಿದ್ದು, ಕ್ರಿಸ್ಮಸ್ ಡಿಸೆಂಬರ್ 25ರಂದು ನಾಲ್ಕನೇ ಶನಿವಾರದಂದು ಬಂದಿದೆ. ಈ ಕಾರಣಗಳಿಂದ ಇವುಗಳನ್ನು ಪ್ರತ್ಯೇಕ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ನಮೂದಿಸಿಲ್ಲ.
ಕೊಡಗು ಜಿಲ್ಲೆಗೆ ಮೂರು ಸ್ಥಳೀಯ ರಜೆ
ರಾಜ್ಯದ ಉಳಿದ ಜಿಲ್ಲೆಗಳಿಗಿಂತ ಕೊಡಗು ಜಿಲ್ಲೆಗೆ ಕೆಲವು ಸ್ಥಳೀಯ ಹಬ್ಬಗಳ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆಗಳನ್ನು ಘೋಷಿಸಲಾಗಿದೆ. ಕೈಲ್ ಮುಹೂರ್ತ, ತುಲಾ ಸಂಕ್ರಮಣ ಮತ್ತು ಹುತ್ತರಿ ಹಬ್ಬದ ಪ್ರಯುಕ್ತ ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಮೂರು ಸ್ಥಳೀಯ ಸಾರ್ವತ್ರಿಕ ರಜೆಗಳನ್ನು ನಿಗದಿಪಡಿಸಲಾಗಿದೆ.
ಸೆಪ್ಟೆಂಬರ್ 3 - ಕೈಲ್ ಮುಹೂರ್ತ
ಅಕ್ಟೋಬರ್ 18 - ತುಲಾ ಸಂಕ್ರಮಣ
ಡಿಸೆಂಬರ್ 13 - ಹುತ್ತರಿ ಹಬ್ಬ
ಈ ರಜೆಗಳು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗಲಿವೆ. ಇನ್ನು ಶಾಲಾ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ರಜೆಗಳ ಪ್ರತ್ಯೇಕ ಪಟ್ಟಿಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಕಟಿಸಲಿದ್ದಾರೆ.
ರಜೆಗಳನ್ನು ಮುಂಚಿತವಾಗಿ ಯೋಜಿಸಿಕೊಳ್ಳಲು ಅವಕಾಶ
2027ರ ರಜಾ ಪಟ್ಟಿ ಪ್ರಕಟವಾಗಿರುವುದರಿಂದ ಸರ್ಕಾರಿ ನೌಕರರು ತಮ್ಮ ವೈಯಕ್ತಿಕ ಕಾರ್ಯಕ್ರಮಗಳು, ಪ್ರವಾಸ ಮತ್ತು ಕುಟುಂಬದ ಯೋಜನೆಗಳನ್ನು ಮುಂಚಿತವಾಗಿ ರೂಪಿಸಿಕೊಳ್ಳಲು ಅನುಕೂಲವಾಗಲಿದೆ. ಸಾರ್ವತ್ರಿಕ ರಜೆಗಳ ಜೊತೆಗೆ ಪರಿಮಿತ ರಜೆಗಳ ಆಯ್ಕೆಯೂ ಇರುವುದರಿಂದ ನೌಕರರಿಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ರಜೆ ಬಳಸಿಕೊಳ್ಳುವ ಅವಕಾಶ ಸಿಗಲಿದೆ.
ಆದರೆ ರಂಜಾನ್, ಬಕ್ರೀದ್ ಮತ್ತು ಮೊಹರಂನಂತಹ ಕೆಲವು ಮುಸ್ಲಿಂ ಹಬ್ಬಗಳ ದಿನಾಂಕಗಳು ಚಂದ್ರದರ್ಶನವನ್ನು ಅವಲಂಬಿಸಿರುತ್ತವೆ. ಹೀಗಾಗಿ ಚಂದ್ರದರ್ಶನದ ಆಧಾರದ ಮೇಲೆ ಹಬ್ಬದ ದಿನಾಂಕ ಬದಲಾದರೆ, ಅದಕ್ಕೆ ಅನುಗುಣವಾಗಿ ರಜೆಯ ದಿನಾಂಕದಲ್ಲಿಯೂ ಬದಲಾವಣೆ ಮಾಡುವ ಅವಕಾಶವನ್ನು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
Comments